HomeExclusive Newsಆ್ಯಪಲ್ ಬಾಕ್ಸ್ ಸ್ಟುಡಿಯೋಸ್- "ಸ್ವಾತಿ ಮುತ್ತಿನ ಮಳೆಹನಿಯೇ" ಏನಂತಾರೇ ಮೋಹಕ ತಾರೆ ರಮ್ಯಾ!?

ಆ್ಯಪಲ್ ಬಾಕ್ಸ್ ಸ್ಟುಡಿಯೋಸ್- “ಸ್ವಾತಿ ಮುತ್ತಿನ ಮಳೆಹನಿಯೇ” ಏನಂತಾರೇ ಮೋಹಕ ತಾರೆ ರಮ್ಯಾ!?

ಕನ್ನಡ ಚಲನಚಿತ್ರರಂಗ ಕಂಡ ಅತ್ಯಬ್ಧುತ, ಅಪ್ಪಟ ಕನ್ನಡದ ಪ್ರತಿಭಾವಂತ ನಟಿ ಮೊಹಕ‌ ತಾರೆ ರಮ್ಯಾ! 2003ರ ತನ್ನ ಚೊಚ್ಚಲ ಚಿತ್ರ ‘ಅಭಿ’ ಯಿಂದ 2016ರ ಕಡೆಯ ‘ನಾಗರಹಾವು’ ಚಿತ್ರದವರೆಗೂ ತನ್ನ ಚಾಕಚಕ್ಯತೆಯ ಮನಮೋಹಕ ಅಭಿನಯ, ಅಪಾರ ಸಾಮಾಜಿಕ ಕಾಳಜಿ, ಮೃದು ಸ್ವಭಾದಿಂದಲೇ, ಹುಚ್ಚೆದ್ದು ಪ್ರೀತಿ ತೋರಿಸುವ ತನ್ನದೇ ಆದ ಕೋಟ್ಯಾಂತರ ಅಭಿಮಾನಿ ಬಳಗವನ್ನ ಗಳಿಸಿರುವ ರಮ್ಯಾ ಅವರು ಸರಿಸುಮಾರು 30 ಕನ್ನಡ ಚಲನಚಿತ್ರಗಳೂ ಸೇರಿದಂತೆ ತಮಿಳು, ತೆಲುಗು ಭಾಷೆಗಳಲ್ಲೂ ತಮ್ಮ ಅಭಿನಯದ ಚಾಪು ಮೂಡಿಸಿರುವುದು ನಮ್ಮ ಕನ್ನಡದ ಹೆಣ್ಣುಮಗಳೆಂಬ ಹೆಮ್ಮೆಯಂತೂ ನಮಗಿದೆ.



ಸಿನಿಮಾ ಜೊತೆಜೊತೆಗೇ ಸಾಮಾಜಿಕ‌ ಕಳಕಳಿ‌ ಹೊಂದಿದ್ದ ರಮ್ಯಾ ಅವರು ಮಂಡ್ಯ ಜಿಲ್ಲೆಗೆ ಸಂಸದೀಯ ಸದಸ್ಯರಾಗಿಯೂ ಆಯ್ಕೆಯಗಿ ಜನಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದೂ ಉಂಟು. ನಂತರ ರಾಜಕೀಯವಾಗಿ ಉನ್ನತ ಜ್ಞಾನಾರ್ಜನೆಯ ಸದುದ್ದೇಶ ಹೊಂದಿದ್ದ ರಮ್ಯಾ ಅವರು ಕನ್ನಡ ಚಿತ್ರರಂಗ ಹಾಗೂ ರಾಜ್ಯದಿಂದ ಸ್ವಲ್ಪ ಕಾಲ ದೂರ ಉಳಿದಿದ್ದು ವಿದೇಶದಲ್ಲಿದ್ದುಕೊಂಡೇ ಇಲ್ಲಿನ ಆಗು-ಹೋಗುಗಳ ಬಗ್ಗೆ ಗಮನಿಸುತ್ತಿದ್ದದ್ದೂ ಗೊತ್ತಿರುವ ವಿಷಯ!

ಕನ್ನಡ ಚಿತ್ರರಂಗದಿಂದ ದೂರವಿದ್ದಾಕ್ಷಣ ರಮ್ಯಾ ಅವರು ನಟನೆಯಿಂದ ದೂರ ಉಳಿದಿದ್ದರು ಎಂದುಕೊಂಡರೆ ಅದು ತಪ್ಪಾಗಬಹುದು. ಉತ್ತಮ ಅವಕಾಶ ಅಥವಾ ಚಿತ್ರಕಥೆಗಾಗಿ ಕಾಯುತ್ತಿದ್ದ ರಮ್ಯಾ ಅವರು ಒಳ್ಳೆಯ ಚಿತ್ರಕಥೆ ಸಿಕ್ಕರೆ ಮತ್ತೆ ಡಾ. ಪುನೀತ್ ರಾಜ್ ಕುಮಾರ್ ಅವರೊಂದಿಗೆ ಕಮ್ ಬ್ಯಾಕ್ ಆಗುವ ಹಂಬಲದೊಂದಿಗೆ ಸ್ವತಃ ಅಪ್ಪು ಅವರೊಂದಿಗೆ ಚರ್ಚಿಸಿದ್ದೂ ಉಂಟು ಎಂಬುದನ್ನು ತಾವೇ ಹೇಳಿಕೊಂಡಿದ್ದಾರೆ. ಈ ಅವಕಾಶ ಸಿಗುವ ಮೊದಲೇ ವಿಧಿಯಾಟಕ್ಕೆ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರನ್ನ ಕನ್ನಡ ನಾಡು ಕಳೆದುಕೊಂಡಿತು, ಈ ಬಗ್ಗೆ ಸ್ವತಃ ರಮ್ಯಾ ಅವರು ಸದಾ ನೊಂದುಕೊಳ್ಳುತ್ತಾರೆ. ಅಪ್ಪು ಅವರ ಒಡನಾಟವನ್ನು ಸದಾ ಮೆಲುಕು ಹಾಕುತ್ತಿರುತ್ತಾರೆ.



ಕನ್ನಡ ಚಿತ್ರರಂಗಕ್ಕೆ ಮರಳುವ ದಾರಿಯಲ್ಲಿ ರಮ್ಯಾ ಅವರು ತಮ್ನದೇ ಆದ ‘ಆಪಲ್ ಬಾಕ್ಸ್’ ಎನ್ನುವ ನಿರ್ಮಾಣ ಸಂಸ್ಥೆಯಡಿಯಲ್ಲಿ ಮೊನ್ನೆಯಷ್ಟೇ ‘”ಸ್ವಾತಿ ಮುತ್ತಿನ ಮಳೆಹನಿಯೇ” ಎಂಬ ಹೊಸ ಸಿನಿಮಾದ ಟೈಟಲ್ ಲಾಂಚ್ ಕೂಡ ಮಾಡಿದ್ದು, ತಮ್ಮ ವಿನೂತನ ಅಭಿನಯ ಹಾಗೂ ನಿರ್ದೇಶನದ ಚಾಕಚಕ್ಯತೆಯಿಂದ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಭರವಸೆ ಮೂಡಿಸುತ್ತಿರುವ ರಾಜ್ ಶೆಟ್ಟಿ ಯವರ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದು, ಅಕ್ಷರಶಃ ರಮ್ಯಾ ಅಭಿಮಾನಿಗಳು, ಕನ್ನಡ ಸಿನಿಪ್ರೇಕ್ಷಕರು ಖುಷಿ ಪಡುವ ವಿಚಾರ.

ಸ್ವಾತಿ ಮುತ್ತಿನ ಮಳೆಹನಿಯೇ- ಹೊಸ ಸಿನಿಮಾದ ಚಿತ್ರೀಕರಣ ಇದೇ ತಿಂಗಳ ಕೊನೆಯಲ್ಲಿ ಶುರುವಾಗಲಿದ್ದು, ನವೆಂಬರ್ ಕಡೆಯ ವೇಳೆಗೆ ಸಂಪೂರ್ಣ ಚಿತ್ರೀಕರಣ ಮುಗಿಯುತ್ತದೆ. 2023ರ ವೇಳೆಗೆ ಕರ್ನಾಟಕದಾದ್ಯಂತ ಸಿನಿಮಾ ತೆರೆ ಕಾಣಲಿದೆ ಎಂದು ಸ್ವತಃ ರಮ್ಯಾ ಅವರೇ ಮಾಹಿತಿ‌ ಹಂಚಿಕೊಂಡಿದ್ದಾರೆ.


ಸುಮಾರು 7 ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿರುವ ರಮ್ಯಾ ಅವರು, ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ಹಲವಾರು ಪ್ರಮುಖ ನಾಯಕರೊಂದಿಗೆ ಪರದೆ ಹಂಚಿಕೊಂಡು ತಾವು ನಟಿಸಿರುವ ಎಲ್ಲಾ ಭಾಷೆಯ ಕಲಾ ರಸಿಕರನ್ನು ರಂಜಿಸಿ ಇಂದಿಗೂ ಮೋಹಕ ತಾರೆಯ ಸ್ಥಾನವನ್ನ ಬಿಗಿಯಾಗಿಸಿಕೊಂಡಿರುವುದು ರಮ್ಯಾರಿಗಿರುವ ಅಭಿನಯದ ಗಟ್ಟಿತನಕ್ಕೆ ಹಿಡಿದ ಕನ್ನಡಿ!

ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಮರು ಪದಾರ್ಪಣೆ ಮಾಡುತ್ತಿರುವ ರಮ್ಯಾ, ಕನ್ನಡದ ಜನಪ್ರಿಯ ನಾಯಕ ನಟರೊಂದಿಗೂ ಅಭಿನಯಿಸುವುದಂತೂ ಕಟ್ಟಿಟ್ಟ ಬುತ್ತಿ- ಈ ಬಗ್ಗೆ ಮುಂದಿನ ದಿನಗಳಲ್ಲಿ ರಮ್ಯಾ ಅವರೇ ಮಾಹಿತಿ ನೀಡುತ್ತಾರೆಂಬುದು ಕನ್ನಡ ಪ್ರೇಕ್ಷಕ ಪ್ರಭುಗಳ ನಿರೀಕ್ಷೆ. ಈ ಸುಸಮಯ ಆದಷ್ಟು ಶೀಘ್ರ ಒದಗಿ ಬರಲಿ, ರಮ್ಯಾ ಅವರ ಮನಮೋಹಕ ನಟನೆಯನ್ನು ಕಣ್ತುಂಬಿಕೊಳ್ಳುವ ಅವರ ಅಭಿಮಾನಿ ಬಳಗ ಧನ್ಯರಾಗಲಿ!

RELATED ARTICLES

Most Popular

Share via
Copy link
Powered by Social Snap