ರಕ್ಷಿತ್, ರಿಷಬ್ ಹಾಗು ಪ್ರಮೋದ್ ಶೆಟ್ಟಿಯವರ ಸ್ನೇಹ, ಅವರು ಮಾಡುವ ಸಿನಿಮಾಗಳಿಗಿಂತಲೂ ಆಳವಾದದ್ದು. ತಮ್ಮ ಸಿನಿಪಯಣವನ್ನ ಒಟ್ಟಿಗೆ ಆರಂಭಿಸಿದ್ದ ಇವರ ಸ್ನೇಹ, ಚಿತ್ರರಂಗದಲ್ಲಿ ಎಂತದ್ದೇ ಎತ್ತರ ತಲುಪಿದ್ದರು ಕೂಡ, ಈಗಲೂ ಅಷ್ಟೇ ಗಟ್ಟಿಯಾಗಿದೆ. ಆಗಾಗ ಇದನ್ನು ನಿರೂಪಿಸಿಕೊಳ್ಳುತ್ತಾ, ಇಂತಹ ಸ್ನೇಹಿತರನ್ನ ನಮಗೂ ಕೊಡು ದೇವರೇ ಎಂದು ಜನರೇ ಕೇಳಿಕೊಳ್ಳುವಂತೆ ಮಾಡಿರುವ ಈ ‘ಶೆಟ್ಟಿ ಗ್ಯಾಂಗ್’ನ ಗೆಳೆತನ, ಪ್ರೀತಿ ಮತ್ತೊಮ್ಮೆ ಅಭಿಮಾನಿಗಳ ಕಣ್ಮುಂದೆ ಬಂದಿದೆ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾ, ಮಾತನಾಡುತ್ತಾ ಸಮಯ ಕಳೆದ ಈ ಮೂರ್ವರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಜುಲೈ 7 ರಿಷಬ್ ಶೆಟ್ಟಿಯವರ ಹುಟ್ಟುಹಬ್ಬ. ಈ ದಿನ ರಿಷಬ್ ನಂದಿನಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ಕನ್ನಡಿಗರಿಗಾಗಿ ತಮ್ಮ ಅಭಿಮಾನಿಗಳಿಗಾಗಿ ಭೇಟಿ ಕಾರ್ಯಕ್ರಮವನ್ನ ಇಟ್ಟುಕೊಂಡಿದ್ದರು. ವೈಭವದ ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಹಾಜರಿದ್ದರು. ಇದೇ ದಿನದ ಇನ್ನೊಂದು ವಿಡಿಯೋ ಇದೀಗ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಸಂಭ್ರಮದ ಹುಟ್ಟುಹಬ್ಬದಾಚರಣೆಯ ನಂತರ ರಿಷಬ್ ತಮ್ಮ ಆಪ್ತರ ಜೊತೆಗೆ ಸರಳವಾಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.


ರಿಷಬ್ ಹಾಗು ಅವರ ಪತ್ನಿ, ಪ್ರಮೋದ್ ಶೆಟ್ಟಿ ಹಾಗೂ ಅವರ ಪತ್ನಿ, ರಕ್ಷಿತ್ ಶೆಟ್ಟಿ, ಶೀತಲ್ ಶೆಟ್ಟಿ ಈ ವೇಳೆ ಜೊತೆಯಾಗಿದ್ದರು. ಬರ್ತಡೇ ಆಚರಣೆಯ ನಂತರ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗು ಪ್ರಮೋದ್ ಶೆಟ್ಟಿಯವರು ಒಂದೇ ತಟ್ಟೆಯಲ್ಲಿ ಬಿರಿಯಾನಿ ಸವಿದಿದ್ದಾರೆ. ಎಲ್ಲೂ ಕಾಣದ ಈ ಸ್ನೇಹ ಬಾಂಧವ್ಯದ ವಿಡಿಯೋವನ್ನ ಶೀತಲ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿಗೇ ಕೂತು, ಒಂದೇ ತಟ್ಟೆಯಲ್ಲಿ ಬಿರಿಯಾನಿ ತಿನ್ನುತ್ತಿರುವ ಈ ಮೂವರ ವಿಡಿಯೋ ಇದೀಗ ಜನರ ಮೆಚ್ಚುಗೆ ಪಡೆಯುತ್ತಿದೆ.
ರಿಷಬ್ ಶೆಟ್ಟಿ ‘ಕಾಂತಾರ’ ಮೂಲಕ ಇಡೀ ದೇಶದ ಸ್ಟಾರ್ ನಟ ನಿರ್ದೇಶಕನಾಗಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮ ಉಳಿದವರು ಕಂಡಂತೆ ಹಾಗು ಇತ್ತೀಚೆಗಿನ ‘777 ಚಾರ್ಲಿ’ ಮೂಲಕ ದೇಶದಾದ್ಯಂತ ಪ್ರಖ್ಯಾತಿ ಪಡೆದಿದ್ದಾರೆ. ಇನ್ನೂ ಪ್ರಮೋದ್ ಶೆಟ್ಟಿ ಸದ್ಯ ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ಒಂದಾದ ಮೇಲೆ ಒಂದರಂತೆ ವಿಭಿನ್ನ ಪಾತ್ರಗಳಲ್ಲಿ ಜನರನ್ನ ರಂಜಿಸುತ್ತಾ ಅಭಿಮಾನ ಗಳಿಸಿದ್ದಾರೆ. ಇವರೆಲ್ಲರ ಸ್ನೇಹ ಹೀಗೆ ಸಾಗಲಿ ಎಂಬುದೇ ನಮ್ಮೆಲ್ಲರ ಆಶಯ.

