‘ರಾಮಾ ರಾಮಾ ರೇ’ ಸಿನಿಮಾದಿಂದ ಸಿನಿಪ್ರೇಕ್ಷಕರಿಗೆ ಪರಿಚಿತರಾಗಿ ‘ಮುಗುಳುನಗೆ’,’ಕನ್ನಡ್ ಗೊತ್ತಿಲ್ಲ’ ಮುಂತಾದ ಹಿಟ್ ಸಿನಿಮಾಗಳ ಮೂಲಕ ಯಶಸ್ವಿ ಹಾಸ್ಯನಟನಾಗಿ ಗುರುತಿಸಿಕೊಂಡವರು ಧರ್ಮಣ್ಣ ಕಡೂರು. ಹಲವು ಸಿನಿಮಾಗಳ ಪ್ರಮುಖ ಪೋಷಕಪಾತ್ರಗಳಿಗೆ ಬಣ್ಣ ಹಚ್ಚಿರುವ ಧರ್ಮಣ್ಣ ಅವರು ಇದೀಗ ನಾಯಕನ ಪಾತ್ರದಲ್ಲಿ ನಟಿಸಲು ಸಿದ್ದರಾಗಿದ್ದಾರೆ. ಅದು ‘ರಾಜಯೋಗ’ ಎಂಬ ಹೊಸ ಸಿನಿಮಾದ ಮೂಲಕ. ಲಿಂಗರಾಜ್ ಉಚ್ಚಂಗಿದುರ್ಗಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ‘ರಾಜಯೋಗ’ ಸಿನಿಮಾ ತನ್ನ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು, ಮುನ್ನೋಟದ ಪೋಸ್ಟರ್ ಒಂದನ್ನು ಕೂಡ ಬಿಡುಗಡೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ನಿರ್ದೇಶಕ ಲಿಂಗರಾಜ್, “ಪ್ರಾಮಾಣಿಕವಾಗಿ ಕಷ್ಟಪಟ್ಟರೆ ಎಂತವನಿಗಾದರೂ ‘ರಾಜಯೋಗ’ ಬಂದೆ ಬರುತ್ತದೆ ಎಂಬುದು ನಮ್ಮ ಸಿನಿಮಾದ ಜೀವಾಳ. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಈ ಹಿಂದೆ ವಿಜಯ್ ಪ್ರಸಾದ್ ಅವರ ‘ಸಿಲ್ಲಿ ಲಲ್ಲಿ’ ಧಾರವಾಹಿಗೆ ಸಹಾಯಕ ನಿರ್ದೇಶಕನಾಗಿ ಸೇರುವ ಮೂಲಕ ಕೆಲಸ ಪ್ರಾರಂಭಿಸಿದ್ದ ನಾನು, ಇತ್ತೀಚಿನ ಶಿರಡಿ ಸಾಯಿಬಾಬಾದಲ್ಲೂ ಕೆಲಸ ಮಾಡಿದ್ದೇನೆ. ಈ ಚಿತ್ರ ಪ್ರಾರಂಭವಾಗಲು ಮುಖ್ಯ ಕಾರಣ ದೀಕ್ಷಿತ್ ಕೃಷ್ಣ ಹಾಗು ಧರ್ಮಣ್ಣ ಅವರು. ಧರ್ಮಣ್ಣನನ್ನ ‘ರಾಮಾ ರಾಮಾ ರೇ’ ಸಿನಿಮಾದಲ್ಲಿ ನೋಡಿದ್ದೇ. ಅವರ ನಟನೆ ತುಂಬಾ ಹಿಡಿಸಿತ್ತು. ಅದಕ್ಕೆ ಅವರನ್ನ ನಾಯಕನಾಗಿ ಆರಿಸಿದ್ದೇವೆ. ಇದೊಂದು ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಕೌಟುಂಬಿಕ ಬಾಂಧವ್ಯಗಳ ಬಗ್ಗೆಯೂ ತೋರಿಸುತ್ತೇವೆ. ಅಪ್ಪ ಮಗನ ನಡುವಿನ ಬಾಂಧವ್ಯ, ಜ್ಯೋತಿಷ್ಯದ ಸತ್ಯಾಸತ್ಯತೆ, ಅದನ್ನ ಕೆಲವರು ದುರುಪಯೋಗ ಮಾಡಿಸಿಕೊಳ್ಳೋ ಪರಿ ಈ ಎಲ್ಲ ವಿಚಾರಗಳು ನಮ್ಮ ಸಿನಿಮಾದಲ್ಲಿರಲಿವೆ. ಈಗಾಗಲೇ ಹತ್ತು ದಿನಗಳ ಚಿತ್ರೀಕರಣವನ್ನ ಮುಗಿಸಿಕೊಂಡಿದ್ದು, ಒಂದು ಗಂಭೀರ ವಿಷ್ಯವನ್ನ ಹಾಸ್ಯದ ಮೂಲಕ ಹೇಳುವಂತಹ ಪ್ರಯತ್ನ ಮಾಡುತ್ತಿದ್ದೇವೆ” ಎಂದರು.


ಇನ್ನು ನಾಯಕ ಧರ್ಮಣ್ಣ ಅವರು, “ಗ್ರಾಮೀಣ ಭಾಗದಲ್ಲಿ ನಡೆಯುವಂತಹ ಒಂದೊಳ್ಳೆ ಕಥೆಯನ್ನ ಲಿಂಗರಾಜು ಅವರು ಮಾಡಿಕೊಂಡಿದ್ದಾರೆ. ನನ್ನನ್ನ ನಂಬಿ ಒಂದು ದೊಡ್ಡ ಪಾತ್ರವನ್ನೇ ನೀಡಿದ್ದಾರೆ. ನನ್ನ ಪಾತ್ರದಲ್ಲಿ ಕಾಮಿಡಿ, ಎಮೋಷನ್ ಎಲ್ಲವೂ ಇದೆ. ಈ ಹಿಂದೆ ಎಂದೂ ಈ ರೀತಿಯ ಪಾತ್ರ ಮಾಡಿರಲಿಲ್ಲ” ಎಂದು ಹೇಳಿದರೆ, ನಾಯಕಿಯಾಗಿ ಬಣ್ಣ ಹಚ್ಚಿರುವ ನಿರೀಕ್ಷಾ ರಾವ್ ಅವರು, “ನನ್ನದು ಕುಟುಂಬದ ಗೃಹಿಣಿಯ ಪಾತ್ರ. ‘ರಾಜಯೋಗ’ ಒಂದು ಮೂಢನಂಬಿಕೆ ಹಾಗು ನಂಬಿಕೆಗಳ ನಡುವೆ ಸುತ್ತುವಂತಹ ಕಥೆ” ಎಂದರು.
ಈ ಹಿಂದೆ ‘ಕನ್ನಡ್ ಗೊತ್ತಿಲ್ಲ” ಸಿನಿಮಾ ನಿರ್ಮಾಣ ಮಾಡಿದ್ದ, ಕುಮಾರ್ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯಕನಹಳ್ಳಿ, ಅರ್ಜುನ್ ಅಣತಿ, ಲಿಂಗರಾಜು ಕೆ ಎನ್ ಅವರ ಜೊತೆಗೇ ಧರ್ಮಣ್ಣ ಅವರ ಸಹೋದರ ಹೊನ್ನಪ್ಪ ಕಡೂರ್ ಅವರು ಸೇರಿ ಒಟ್ಟು ಆರು ಜನ ಜಂಟಿಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ನಾಯಕನ ತಂದೆಯ ಪಾತ್ರದಲ್ಲಿ ನಾಗೇಂದ್ರ ಶಾ ಅವರು ನಟಿಸಿದರೆ, ಕೃಷ್ಣಮೂರ್ತಿ ಕವುತಾರ್ ಅವರು ಜನರ ದಾರಿ ತಪ್ಪಿಸುವ ಜ್ಯೋತಿಷಿಯ ಪಾತ್ರ ನಿರ್ವಹಿಸಿದ್ದಾರೆ. ಉಷಾ ರವಿಶಂಕರ್, ಮಹಾಂತೇಶ್ ಹಿರೇಮಠ್ ಹಾಗು ಶ್ರೀನಿವಾಸ್ ಗೌಡ್ರು ಅವರನ್ನು ಸೇರಿ ಇನ್ನು ಹಲವು ನಟರು ಕಥೆಯ ಪ್ರಮುಖ ಪಾತ್ರಕ್ಕೆ ಜೀವನ ತುಂಬಿದ್ದಾರೆ. ಅಕ್ಷಯ್ ರಿಷಬ್ ಅವರ ಸಂಗೀತವಿರೋ ಈ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳು ಇರುತ್ತವೆ. ವಿಷ್ಣುಪ್ರಸಾದ್ ಅವರ ಛಾಯಾಗ್ರಾಹಣ ಹಾಗು ಬಿ ಎಸ್ ಕೆಂಪರಾಜು ಅವರ ಸಂಕಲನ ಚಿತ್ರದಲ್ಲಿರಲಿದೆ. ಈಗಾಗಲೇ ಬಿಡುಗಡೆಯಾಗಿರೋ ‘ರಾಜಯೋಗ’ ಸಿನಿಮಾದ ಪೋಸ್ಟರ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

