ಕನ್ನಡಿಗರ ಕಣ್ಮಣಿ, ತಮ್ಮ ಅಭಿನಯದಿಂದ ಜನತೆಯ ಮನಗೆದ್ದಿದ್ದ, ಚಿರಂಜೀವಿ ಸರ್ಜಾ ಅವರ ಹೊಸ ಸಿನಿಮಾ ‘ರಾಜಮಾರ್ತಾಂಡ’ ತನ್ನ ಚಿತ್ರೀಕರಣ ಮುಗಿಸಿಕೊಂಡು ಬಹಳ ಕಾಲ ಕಳೆದಿತ್ತು. ಆದರೆ ಯಾರೂ ಊಹಿಸಿರದ ಆಘಾತದಿಂದಾಗಿ ಚಿತ್ರದ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲ. ಅತೀ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನೆಲ್ಲ ಅಗಲಿ ಹೊರಟಿದ್ದ, ಚಿರಂಜೀವಿ ಸರ್ಜಾ ಇಡೀ ಚಿತ್ರರಂಗಕ್ಕೇ ಅಪಾರ ನೋವು ನೀಡಿ ಹೋಗಿದ್ದರು. ಸದ್ಯ ಅವರ ಬಿಡುಗಡೆಯಗಬೇಕಿದ್ದ ಹೊಸ ಸಿನಿಮಾ ‘ರಾಜಮಾರ್ತಾಂಡ’ವನ್ನ ತೆರೆಮೇಲೆ ತರಲು ಚಿತ್ರತಂಡ ಸಜ್ಜಾಗಿದ್ದು, ಬಿಡುಗಡೆಯ ದಿನದ ಬಗೆಗಿನ ಮಾಹಿತಿ ಹೊರಹಾಕಿದ್ದಾರೆ. ಇದೇ ಏಪ್ರಿಲ್ ನಲ್ಲಿ ಚಿತ್ರ ಬೆಳ್ಳಿತೆರೆಗಳ ಮೇಲೆ ಬಿಡುಗಡೆಯಗಲಿದ್ದಾನೆ ‘ರಾಜಮಾರ್ತಾಂಡ’. ಚಿತ್ರಕ್ಕೆ ಡಿಟಿಎಸ್ ಕೂಡ ಅಳವಡಿಸಲಾಗುತ್ತಿದೆ. ಚಿರು ಅವರ ಈ ಹೊಸ ಸಿನಿಮಾ ಬಿಡುಗಡೆಯ ಸಂಧರ್ಭದಲ್ಲಿ ಸರ್ಜಾ ಕುಟುಂಬ ಒಂದಾಗಿ ಬಂದು ಚಿತ್ರದ ಜೊತೆ ನಿಲ್ಲಲಿದ್ದಾರೆ.
ವಿಶೇಷವೆಂದರೆ, ‘ರಾಜಮಾರ್ತಾಂಡ’ ಸಿನಿಮಾದಲ್ಲಿನ ನಾಯಕ ಚಿರು ಅವರ ಪಾತ್ರಕ್ಕೆ ಧ್ವನಿ ನೀಡಿರುವುದು ಅವರ ಸಹೋದರನಾದ ಧ್ರುವ ಸರ್ಜಾ ಅವರು. ಚಿತ್ರದ ಚಿತ್ರೀಕರಣ ಮುಗಿದಿತ್ತು, ಇನ್ನೇನು ಡಬ್ಬಿಂಗ್ ಅಷ್ಟೇ ಬಾಕಿಯಿದೆ ಎನ್ನುವಾಗ ಚಿರು ನಮ್ಮನ್ನೆಲ್ಲ ಅಗಲಿ ಹೊರಟಿದ್ದರು. ಹಾಗಾಗಿ ಡಬ್ಬಿಂಗ್ ನಲ್ಲಿ ಅವರ ಧ್ವನಿ ಸೆರೆಹಿಡಿಯಲು ಆಗಲೇ ಇಲ್ಲ. ಆದರೆ ಈ ಕಾರ್ಯವನ್ನು ತನ್ನ ಅಣ್ಣನಿಗಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನೆರವೇರಿಸಿದ್ದಾರೆ. ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡುವಾಗ ಅಣ್ಣನನ್ನ ನೆನೆದು ಧ್ರುವ ಭಾವುಕರಾಗುತ್ತಿದ್ದರಂತೆ. ಈ ಹಿಂದೆಯೂ ಕೂಡ ಶಂಕರ್ ನಾಗ್ ಅವರ ಪಾತ್ರಕ್ಕೆ ಅನಂತ್ ನಾಗ್ ಅವರು, ಪುನೀಟ್ ರಾಜಕುಮಾರ್ ಅವರ ಪಾತ್ರಕ್ಕೆ ಶಿವರಾಜಕುಮಾರ್ ಅವರು ಧ್ವನಿ ನೀಡುವ ಮೂಲಕ ಸಹೋದರರ ಪ್ರೀತಿ ಮೆರೆದ ಉದಾಹರಣೆಯಿದೆ. ಈಗ ಧ್ರುವ ಹಾಗು ಚಿರು ಅವರ ನಡುವಿನ ಅಂತದ್ದೇ ನಂಟು ಎದ್ದು ಕಾಣುವಂತಾಗಿದೆ. ಈ ಸಹೋದರ ಪ್ರೀತಿಯ ಬಗ್ಗೆ ಹಾಡಿ ಹೊಗಳುತ್ತಾರೆ ‘ರಾಜಮಾರ್ತಾಂಡ’ ಚಿತ್ರದ ನಿರ್ಮಾಪಕರಾದ ಶಿವಕುಮಾರ್ ಅವರು ಹಾಗು ನಿರ್ದೇಶಕರಾದ ಕೆ ರಾಮನಾರಾಯಣ್.
ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ‘ರಾಜಮಾರ್ತಾಂಡ’ ಸಿನಿಮಾಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ ಎಂಬ ಮೂರು ನಟಿಯರು ಕಾಣಿಸಿಕೊಳ್ಳಲಿದೆ. ಇನ್ನು ಕೆ ರಾಮನಾರಾಯಣ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಇರಲಿದೆ. ಜೊತೆಗೇ ಹೆಸರಾಂತ ನಟರಾದ ದೇವರಾಜ್, ಸುಮಿತ್ರಾ, ಚಿಕ್ಕಣ್ಣ ಮುಂತಾದ ಹೆಸರಾಂತ ನಟರು ಕೂಡ ‘ರಾಜಮಾರ್ತಾಂಡ’ ನಟಿಸಿದ್ದಾರೆ. ಒಂದೊಳ್ಳೆ ಫ್ಯಾಮಿಲಿ ಆಕ್ಷನ್ ಕಥೆಯಾಗಿರುವ ಈ ಸಿನಿಮಾ ಇದೇ ಏಪ್ರಿಲ್ ತಿಂಗಳ 17ನೇ ತಾರೀಕು ಬೆಳ್ಳಿತೆರೆ ಮೇಲೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಚಿತ್ರ ಸಂಪೂರ್ಣ ಮಾಡುವಲ್ಲಿ ಸಹಕಾರ ನೀಡಿದ ಮೇಘನಾ ರಾಜ್ ಸರ್ಜಾ, ಸಿನಿಮಾದ ಬಿಡುಗಡೆಯ ಸಂಧರ್ಭದಲ್ಲೂ ತಂಡದ ಜೊತೆಯಲ್ಲಿರಲಿದ್ದಾರೆ. ಧರ್ಮವೀಶ್ ಅವರ ಹಿನ್ನೆಲೆ ಸಂಗೀತ, ಕೆ ಗಣೇಶ್ ಅವರ ಛಾಯಾಗ್ರಾಹಣ ಚಿತ್ರದಲ್ಲಿದೆ. ಸದ್ಯ ಚಿತ್ರಕ್ಕೆ ಡಿಟಿಎಸ್ ಅಳವಡಿಸುವ ಕೆಲಸ ನಡೆಯುತ್ತಿದ್ದೂ, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

