HomeNews'ರಾಘವೇಂದ್ರ ಸ್ಟೋರ್ಸ್': ಸಂದರ್ಶನದಲ್ಲಿ ಮನದಾಳವ ಬಿಚ್ಚಿಟ್ಟ ಜಗ್ಗಣ್ಣ

‘ರಾಘವೇಂದ್ರ ಸ್ಟೋರ್ಸ್’: ಸಂದರ್ಶನದಲ್ಲಿ ಮನದಾಳವ ಬಿಚ್ಚಿಟ್ಟ ಜಗ್ಗಣ್ಣ

ನವರಸ ನಾಯಕ ಜಗ್ಗೇಶ್ ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’. ಈಗಾಗಲೇ ಟೀಸರ್ ಹಾಡುಗಳು ಹಾಗು ಮೊನ್ನೆಯಷ್ಟೇ ಬಿಡುಗಡೆಯಾದ ಟ್ರೈಲರ್ ನಿಂದ ಬಾರೀ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ಇದೆ ಏಪ್ರಿಲ್ 28ರಂದು ಎಲ್ಲೆಡೆ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ‘ರಾಜಕುಮಾರ’,’ಯುವರತ್ನ’ ರೀತಿಯ ಹಲವು ಕೌಟುಂಬಿಕ ಪ್ರೇಕ್ಷಕರನ್ನೂ ಮೆಚ್ಚಿಸಿದಂತಹ ಹಿಟ್ ಸಿನಿಮಾಗಳನ್ನ ನೀಡಿರುವ ಸಂತೋಷ್ ಆನಂದ್ ರಾಮ್ ಅವರು ಸಿನಿಮಾವನ್ನ ನಿರ್ದೇಶಿಸುತ್ತಿದ್ದು, ಕನ್ನಡದ ಹೆಮ್ಮೆಯ ‘ಹೊಂಬಾಳೆ ಫಿಲಂಸ್’ ಚಿತ್ರಕ್ಕೆ ಬಂಡವಾಳ ಹೂಡಿದೆ. ಇನ್ನೇನು ಬಿಡುಗಡೆಗೆ ಒಂದು ವಾರವಷ್ಟೇ ಬಾಕಿಯಿದೆ ಎನ್ನುವಾಗ ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಕೈ ಹಾಕಿದೆ. ಅದರದ್ದೇ ಒಂದು ಭಾಗವಾಗಿ ಪ್ರಖ್ಯಾತ ‘ಫಿಲಂ ಕಂಪೆನಿಯನ್ ಸೌತ್’ ಜೊತೆಗೆ ಜಗ್ಗಣ್ಣ ಸಂದರ್ಶನವೊಂದನ್ನು ನೀಡಿದ್ದು, ಅದರಲ್ಲಿನ ಮಾತುಕತೆ ಸದ್ಯ ಎಲ್ಲರ ಮನಗೆಲ್ಲುತ್ತಿದೆ.

ಫಿಲಂ ಕಂಪನಿಯನ್ ಸೌತ್ ನ ಕೈರಾಮ್ ವಾಶಿ ಅವರ ಸಂದರ್ಶನಗಳಿಗೆ ಹಲವು ಸಿನಿಮಾ ಪ್ರೇಮಿಗಳು ಅಭಿಮಾನಿಗಳಾಗಿದ್ದಾರೆ. ಅದೇ ಕೈರಾಮ್ ವಾಶಿ ಅವರ ಜೊತೆಗೆ ಜಗ್ಗಣ್ಣ ಮಾತುಕತೆ ನಡೆಸಿದ್ದಾರೆ. ಅತೀ ಸೂಕ್ಷ್ಮವಾಗಿ ಅಷ್ಟೇ ಪ್ರಭುದ್ದವಾಗಿ ಸಂದರ್ಶನ ಸಾಗುತ್ತದೆ. ಮಾತುಕತೆಯಲ್ಲಿ ನವರಸ ನಾಯಕ ಜಗ್ಗೇಶ್ ಅವರು ಅವರ ಕುಟುಂಬ, ತನ್ನ ತಂದೆ ತಾಯಿ ಪಟ್ಟಂತಹ ಕಷ್ಟ, ನಟನ ರಂಗದಲ್ಲಿ ಏನಾದರೂ ಸಾಧಿಸಲೇ ಬೇಕು ಎಂಬ ಅವರ ಹಠ, ಅದಕ್ಕಾಗಿ ಅವರು ಪಟ್ಟ ಪರಿಶ್ರಮ ಈ ಎಲ್ಲದರ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ, ಸಿನಿಮಾ ರಂಗದಲ್ಲಿನ ತಮ್ಮ ಆರಂಭಿಕ ದಿನಗಳು, ಅಲ್ಲಿ ಸಿಕ್ಕಂತಹ ಮೊದಲ ಅವಕಾಶಗಳು, ಉಪೇಂದ್ರ ಅವರ ಜೊತೆಗಿನ ‘ತರ್ಲೆ ನನ್ ಮಗ’ ಚಿತ್ರ, ಜಗ್ಗಣ್ಣನೇ ಬರೆದಂತಹ ಕಥೆ ‘ಭಂಡ ನನ ಗಂಡ’ ಸಿನಿಮಾವಾಗಿದ್ದು, ಹೀಗೆ ತಮ್ಮ ಅನುಭವಗಳನ್ನೆಲ್ಲ ಕೂಡಿ ನೋಡುಗರ ಮುಂದೆ ಇಟ್ಟಿದ್ದಾರೆ.

ಇನ್ನು ನಿರೂಪಕ ಕೈರಾಮ್ ವಾಶಿ ಅವರು ಕೇಳಿದಂತೆ ಕನ್ನಡದ ವರನಟ ಡಾ| ರಾಜಕುಮಾರ್ ಅವರ ಜೊತೆಗಿನ ಜಗ್ಗಣ್ಣನವರ ಒಡನಾಟ ಹಾಗೆಯೇ ತಮಿಳಿನ ಸೂಪರ್ ಸ್ಟಾರ್, ರಜನಿಕಾಂತ್ ಅವರ ಜೊತೆಗಿನ ಸ್ನೇಹದ ಬಗ್ಗೆಯೂ ಮನಬಿಚ್ಚಿ ಮಾತನಾಡುತ್ತಾರೆ. ಅಣ್ಣಾವ್ರ ಜೊತೆಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದದ್ದು, ಅವರ ಸರಳತೆ ಸಜ್ಜನತೆ ಬಗೆಗೂ ಹಂಚಿಕೊಂಡರು. “ಅಣ್ಣಾವ್ರ ಜೊತೆಗಿದ್ದರೆ ಒಬ್ಬ ತಪಸ್ವಿಯ ಜೊತೆಗೆ ಇರುವಂತಹ ಮನೋಭಾವ ಬರುತ್ತದೆ. ಅಷ್ಟು ಪ್ರಶಾಂತತೆ, ಅಷ್ತು ಸರಳತೆ” ಎಂದಿದ್ದಾರೆ. ಜೊತೆಗೆ ರೆಬೆಲ್ ಸ್ಟಾರ್ ಅಂಬರೀಷ್ ಅವರ ಜೊತೆಗಿನ ನಟನ ಅನುಭವ, ಅವರ ಜೊತೆಗಿನ ಒಡನಾಟದ ಬಗ್ಗೆಯೂ ಜಗ್ಗಣ್ಣ ಹಂಚಿಕೊಂಡರು.

ಅಲ್ಲದೇ ಇಡೀ ಸಂದರ್ಶನದಲ್ಲಿ ಎಲ್ಲರ ಗಮನ ಸೆಳೆದದ್ದು, ಜಗ್ಗಣ್ಣ ಹಂಚಿಕೊಂಡ ಅವರಿಗಿರುವ ಆಧ್ಯಾತ್ಮದೆಡೆಗಿನ ಆಸಕ್ತಿ. “ನಾನು ದೇವರಿಗೆ, ಹಾಗು ನಾನು ಮಾಡುವ ಕೆಲಸಕ್ಕೆ ಸಂಪೂರ್ಣ ಶರಣಾಗುವವನು. ಭಗವದ್ಗೀತೆಯಲ್ಲಿ ಕೃಷ್ಣನೆ ಹೇಳಿದ್ದಾನೆ, “ಎಲ್ಲಿ ಪರಿಶುದ್ಧತೆ ಇರುತ್ತದೆಯೋ, ಎಲ್ಲಿ ನಿನ್ನ ಗುರಿಯಲ್ಲಿ ಅನನ್ಯತೆ ಇರುತ್ತದೆಯೋ, ಅಲ್ಲಿತನಕ ನಾನು ನಿನ್ನನ್ನು ನಡೆಸುತ್ತೇನೆ. ಹಾಗೇ, ಯಾವಾಗ ನೀನು ನನಗೆ ಸಂಪೂರ್ಣ ಶರಣಾಗುತ್ತೀಯೋ, ಆಗ ನಾನೇ ನಿನ್ನನ್ನು ಮುನ್ನಡೆಸುತ್ತೇನೆ, ನೋಡಿಕೊಳ್ಳುತ್ತೇನೆ” ಎಂದು. ನಾನು ಅದನ್ನೇ ನಂಬಿಕೊಂಡು ಬಂದವನು” ಎನ್ನುತ್ತಾರೆ. ಈ ಅಂಶ ಅದೆಷ್ಟೋ ನೋಡುಗರ ಮನಸೆಳೆಯಿತು.

ಇನ್ನು ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಬಗ್ಗೆ ಮಾತನಾಡುತ್ತಾ, “ಚಿತ್ರದಲ್ಲಿ ಜನರು ಹೊಸ ಜಗ್ಗೇಶ್ ಅನ್ನು ನೋಡುತ್ತಾರೆ. ನನಗೆ ಈ ಚಿತ್ರ ಮಾಡಿದ್ದು ಬಹಳ ಸಂತಸ. ನನ್ನ ನೆಚ್ಚಿನ ಹುಡುಗ, ನಿರ್ದೇಶಕ ಸಂತೋಷ್ ಆನಂದ್ ರಾಮ್, ಅವನ ಚಿತ್ರದ ಪ್ರಮುಖ ಪಾತ್ರಕ್ಕೆ ನನ್ನನ್ನು ಆರಿಸಿದ್ದು ನನ್ನ ಪುಣ್ಯ ಅಂದುಕೊಳ್ಳುತ್ತೇನೆ. ಇನ್ನು ‘ಹೊಂಬಾಳೆ ಫಿಲಂಸ್’ ನಮ್ಮೆಲ್ಲರ ಹೆಮ್ಮೆ. ಛಾಯಾಗ್ರಾಹಕ ಶ್ರೀಶ ಪೈಂಟಿಂಗ್ ಮಾಡಿದ್ದಾನೆ. ಇನ್ನು ಸಂಗೀತ ನೀಡಿರುವ ಅಜನೀಶ್ ಈಗಾಗಲೇ ಅಪಾರ ಸಾಧನೆ ಮಾಡಿದವರು. ಅವರ ಬಗ್ಗೆ ನಾನೇನು ಹೇಳಲಿ. ಸಂಪೂರ್ಣ ಮನರಂಜನೆ ನೀಡುವ ಚಿತ್ರವಿದು. ಸಿನಿಮಾ ನೋಡುವ ಪ್ರೇಕ್ಷಕರು ಅವರೇ ಖುದ್ದಾಗಿ ಪ್ರಚಾರ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ” ಎಂದೂ ತಮ್ಮ ಹೊಸ ಸಿನಿಮಾದ ಬಗ್ಗೆ ಹೆಮ್ಮೆಯಿಂದ, ಅಷ್ಟೇ ಸಂತಸದಿಂದ ಹೇಳಿಕೊಂಡರು.

ಅಂತಿಮವಾಗಿ ಜಗ್ಗಣ್ಣ, ನಿರೂಪಕ ಕೈರಾಮ್ ವಾಶಿ ಅವರಿಗೆ, “ನೀವು ಮಾಡುತ್ತಿರುವ ಸಿನಿಮಾ ವಿಮರ್ಶೆ ಹಾಗು ಇತರ ಕೆಲಸಗಳನ್ನು ಕೂಡ ನಾನು ನೋಡುತ್ತೇನೆ. ನಿಮ್ಮ ಕೆಲಸಗಳನ್ನ ತುಂಬಾ ಇಷ್ಟ ಪಡುತ್ತೇನೆ” ಎಂdದು ಅವರನ್ನು ಕೂಡ ಪ್ರೋತ್ಸಾಹಿಸಿದರು. ಇಡೀ ವಿಡಿಯೋದಲ್ಲಿ ತಮ್ಮ ಸರಳತೆ, ಮಾತಿನಲ್ಲಿನ ನಿರರ್ಗಳತೆ ಹಾಗು ತಮ್ಮ ವೃತ್ತಿಯ ಬಗೆಗಿನ ಪ್ರೀತಿ, ಆಧ್ಯಾತ್ಮದ ಬಗೆಗಿನ ಚಿಂತನೆ ಈ ಎಲ್ಲದರಿಂದ ಜಗ್ಗಣ್ಣ ಎಲ್ಲರ ಮನಸೆಳೆದರು. ಇನ್ನೂ ಹೆಚ್ಚು ಉತ್ತಮ ಅಂಶಗಳಿರುವ ಈ ಸಂದರ್ಶನ ಒಟ್ಟಿನಲ್ಲಿ ಪ್ರತಿಯೊಬ್ಬರೂ ನೋಡಲೇಬೇಕಾದ ಪ್ರಭುದ್ಧ ಮಾತುಕತೆ ಎನ್ನಬಹುದು.

RELATED ARTICLES

Most Popular

Share via
Copy link
Powered by Social Snap