ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ, ನವರಸ ನಾಯಕ ಜಗ್ಗೇಶ್ ಅವರು ಅಭಿನಯಿಸುತ್ತಿರುವ ಬಹುನಿರೀಕ್ಷಿತ ಹಾಸ್ಯಮಯ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಯ ದಿನಾಂಕವನ್ನ ಚಿತ್ರತಂಡ ಈಗಾಗಲೇ ಹೊರಬಿಟ್ಟಿದೆ. ಸ್ಟಾರ್ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿರುವ ಈ ಕೌಟುಂಬಿಕ ಮನರಂಜನೆಯ ಚಿತ್ರ ಇದೇ ಏಪ್ರಿಲ್ 28ರಂದು ಎಲ್ಲೆಡೆ ಬಿಡುಗಡೆಯಾಗುತ್ತಿದೆ. ಸದ್ಯ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಈಗಾಗಲೇ ಪ್ರೊಮೊ ಒಂದನ್ನು ಶೂಟ್ ಮಾಡಲಾಗಿದೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಈ ಮೊದಲ ಹಾಡು ಎಲ್ಲಾ ಸಿಂಗಲ್ ಗಳಿಗೆ ಸಮರ್ಪಿತವಾಗಿರಲಿದೆಯಂತೆ. ಈ ಹಾಡಿನ ಪ್ರೊಮೊ ಶೂಟ್ ಅನ್ನು ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್, ‘ನಟರಾಕ್ಷಸ’ ಡಾಲಿ ಧನಂಜಯ ಹಾಗು ನಟ ನಾಗಭೂಷಣ ಅವರ ಜೊತೆಗೆ ಮಾಡಲಾಗಿದೆ. ಈ ಬಗ್ಗೆಯೂ ಕೂಡ ಸಂತೋಷ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹಾಡಿನ ಬಿಡುಗಡೆಯ ಬಗೆಗಿನ ಮಾಹಿತಿ ಸದ್ಯ ಹೊರಬಿದ್ದಿಲ್ಲವಾದರೂ, ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್ ನ ನೋಡುತ್ತಾ ಇರಿ ಎಂದಿದ್ದಾರೆ ನಿರ್ದೇಶಕರು. ಅಜನೀಶ್ ಅವರು ಸಂಗೀತ ತುಂಬಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಗು ನವೀನ್ ಸಜ್ಜು ಹಾಡಿದ್ದಾರೆ. ಈ ಬಗ್ಗೆ ಚಿತ್ರದ ನಾಯಕರಾದ ನವರಸ ನಾಯಕ ಜಗ್ಗೇಶ್ ಅವರು ಕೂಡ ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿದ್ದು, “ಮದುವೆಯಾಗದವರಿಗೆ ಈ ಹಾಡು ಖಂಡಿತ ಇಷ್ಟವಾಗುತ್ತದೆ. ಬೇಗ ಬರಲಿ” ಎಂದು ಬರೆದುಕೊಂಡು ಎಲ್ಲಾ ಸಿಂಗಲ್ ಗಳು ಕಾತುರದಿಂದ ಕಾಯುವಂತೆ ಮಾಡಿದ್ದಾರೆ. ಸದ್ಯದಲ್ಲೇ ಹಾಡು ಬಿಡುಗಡೆಯಾಗುವ ಸಾಧ್ಯತೆಗಳಿವೆ.

