HomeNewsಮತದಾನದ ಮಹತ್ವ ಸಾರುವ 'ಪ್ರಭುತ್ವ' ಸಿನಿಮಾದಿಂದ ಹೊರಬಿತ್ತು ಹೊಸ ಹಾಡು.

ಮತದಾನದ ಮಹತ್ವ ಸಾರುವ ‘ಪ್ರಭುತ್ವ’ ಸಿನಿಮಾದಿಂದ ಹೊರಬಿತ್ತು ಹೊಸ ಹಾಡು.

ಕನ್ನಡದಲ್ಲಿ ಈಗೀಗ ಹಲವು ಬಗೆಯ ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳ ನಡುವೆ ವಿಚಾರಭರಿತ ಸಿನಿಮಾಗಳಿಗೆ ಅವುಗಳದ್ದೆ ಆದ ತೂಕವಿದೆ. ಒಂದು ಸಂದೇಶವನ್ನ, ಒಂದು ವಿಚಾರದ ತಿರುಳನ್ನ ಸಾರುವಂತಹ ಅದೆಷ್ಟೋ ಸಿನಿಮಾಗಳು ನಮ್ಮಲ್ಲಿ ಬಂದು ಜನರ ಮನಗಳಲ್ಲಿ ಮುದ್ರಿತವಾಗಿದ್ದುಂಟು. ಅಂತದ್ದೇ ಒಂದು ಹೊಸ ಸಿನಿಮಾ ‘ಪ್ರಭುತ್ವ’. ರಂಗನಾಥ್ ಅವರು ನಿರ್ದೇಶಿಸಿ ಚೇತನ್ ಚಂದ್ರ ಅವರು ನಾಯಕರಾಗಿ ನಟಿಸಿರುವ ಈ ಸಿನಿಮಾ ತನ್ನ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಿದೆ.

‘ನೀನೇನಾ ನೀನೇನಾ’ ಎಂಬ ಮೆಲೋಡಿ ಗೀತೆಯನ್ನ ‘ಪ್ರಭುತ್ವ’ ಚಿತ್ರತಂಡ ತನ್ನ ಮೊದಲ ಗೀತೆಯಾಗಿ ಬಿಡುಗಡೆ ಮಾಡಿದೆ. ‘ಝಂಕಾರ್ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದೆ. ಈ ಹಾಡಿನ ಬಿಡುಗಡೆಗೆ ಚಿತ್ರತಂಡ ಕರೆದ ಸುದ್ದಿಗೋಷ್ಟಿಯಲ್ಲಿ, ನಾಯಕರು ನಿರ್ಮಾಪಕರು ಹಾಗು ನಿರ್ದೇಶಕರು ತಮ್ಮ ಮನದಾಳದ ಮಾತನ್ನ ಹೇಳಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ನಿರ್ದೇಶಕ ರಂಗನಾಥ್ ಅವರು, ” ‘ಪ್ರಭುತ್ವ’ ನನ್ನ ಮೂರನೇ ಸಿನಿಮಾ. ಈ ಹಿಂದೆ ‘ಅರಿವು’ ಹಾಗು ‘ಕೂಗು’ ಎಂಬ ಚಿತ್ರಗಳನ್ನ ನಿರ್ದೇಶಿಸಿದ್ದೆ. ಇದೊಂದು ಮತದಾನದ ಮಹತ್ವವನ್ನ ಸಾರುವ ಸಿನಿಮಾವಾಗಿ ಮೂಡಿಬಂದಿದೆ. ಚಿತ್ರಕ್ಕೆ ಕಥೆ ಬರೆದವರು ನಮ್ಮ ನಿರ್ಮಾಪಕ ರವಿರಾಜ್ ಅವರ ತಂದೆಯವರಾದ ಡಾ| ಮೇಘಡಹಳ್ಳಿ ಶಿವಕುಮಾರ್ ಅವರು. ಇದಕ್ಕೆ ವಿನಯ್ ಅವರ ಸಂಭಾಷಣೆ ಹಾಗು ಎಮಿಲ್ ಅವರ ಸುಮಧುರ ಸಂಗೀತ ಸೇರಿಕೊಂಡಿದೆ. ಕಥೆಯ ನಾಯಕರಾಗಿ ಚೇತನ್ ಚಂದ್ರ ಹಾಗು ನಾಯಕಿಯಾಗಿ ಪಾವನ ಗೌಡ ಅವರು ಕಾಣಿಸಿಕೊಂಡರೆ ಇನ್ನು ಪ್ರಮುಖ ಪಾತ್ರಗಳಲ್ಲಿ ಶರತ್ ಲೋಹಿತಾಶ್ವ, ಡ್ಯಾನಿ, ವಿಜಯ್ ಚೆಂಡೂರ್ ಹಾಗು ಮುಂತಾದವರು ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದಲೇ ನಮ್ಮೀ ಸಿನಿಮಾ ಇಷ್ಟು ಒಳ್ಳೆಯ ರೀತಿಯಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಮುಂದಿನ ದಿನಗಳಲ್ಲಿ ಉಳಿದ ಹಾಡುಗಳು ಹಾಗು ಟ್ರೈಲರ್ ಬಿಡುಗಡೆಯಾಗಲಿದೆ” ಎಂದರು.

ಹಾಗೆಯೇ ನಟಿ ಪಾವನ ಗೌಡ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಬಿಡುಗಡೆಯಾದ ಹಾಡಿನ ಸುಂದರತೆಯ ಬಗ್ಗೆಯೂ ಹೇಳಿಕೊಂಡರು. ಇನ್ನು ನಾಯಕ ಚೇತನ್ ಚಂದ್ರ ಅವರು ಮಾತನಾಡಿ, ” ನನ್ನ ವೃತ್ತಿಜೀವನದ ಬಿಗ್ ಬಜೆಟ್ ಸಿನಿಮಾ ‘ಪ್ರಭುತ್ವ’. ನಿರ್ಮಾಪಕರು ಅಷ್ಟು ಗಂಭೀರವಾಗಿ, ಯಾವುದೇ ಹೆಚ್ಚು ಕಡಿಮೆಯಾಗದಂತೆ ನೋಡಿಕೊಂಡು ಈ ಸಿನಿಮಾ ಸಿದ್ದಪಡಿಸಿದ್ದಾರೆ. ಜೊತೆಗೆ ರಂಗನಾಥ್ ಅವರ ನಿರ್ದೇಶನ ಚಿತ್ರದ ಇನ್ನೊಂದು ಬಲ. ಇಂದು ಬಿಡುಗಡೆಯಾಗಿರುವ ಹಾಡನ್ನು ಹರಿ ಸಂತೋಷ್ ಅವರು ಬರೆದಿದ್ದು, ಎಮಿಲ್ ಅವರು ಸುಮಧುರವಾಗಿ ಸಂಗೀತ ಕೂಡಿಸಿದ್ದಾರೆ. ಕಾರ್ತಿಕ್ ಹಾಗು ಸುಪ್ರಿಯಾ ರಾಮ್ ಅವರು ಅಷ್ಟೇ ಸುಂದರವಾಗಿ ಈ ಹಾಡನ್ನು ಹಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಲಿದೆ” ಎಂದರು.

ಇನ್ನು ಚಿತ್ರದ ಛಾಯಾಗ್ರಾಹಕರಾದ ಕೆ ಎಸ್ ಚಂದ್ರಶೇಖರ್ ಹಾಗು ಸಂಗೀತ ನಿರ್ದೇಶಕ ಎಮಿಲ್ ಅವರು ತಮ್ಮ ತಮ್ಮ ಕೆಲಸದ ಬಗ್ಗೆ ಮಾತನಾಡಿದರು. ಮೇಘಡಹಳ್ಳಿ ಡಾ| ಶಿವಕುಮಾರ್ ಅರ್ಪಿಸುವ, ರವಿರಾಜ್ ಎಸ್ ಕುಮಾರ್ ಅವರು ನಿರ್ಮಾಣ ಮಾಡಿರುವ ‘ಪ್ರಭುತ್ವ’ ಸಿನಿಮಾ ಒಂದೊಳ್ಳೆ ಸಂದೇಶ ಹೊತ್ತು ಬರುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಡಾ| ಶಿವಕುಮಾರ್ ಅವರು ಹೇಳಿದರೆ, ಸಿನಿಮಾವನ್ನು ಇಲ್ಲಿಯವರೆಗೆ ಬಂದು ನಿಲ್ಲುವಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು ನಿರ್ಮಾಪಕ ರವಿರಾಜ್ ಎಸ್ ಕುಮಾರ್ ಅವರು.

RELATED ARTICLES

Most Popular

Share via
Copy link
Powered by Social Snap