HomeExclusive Newsಕೆ ಆರ್ ಜಿ ಹಾಗು ಟಿವಿಎಫ್ ಕೈಜೋಡಿಸಿದ ಮೊದಲ ಸಿನಿಮಾಗೆ ಕಿಚ್ಚನಿಂದ ಚಾಲನೆ! ಪೌಡರ್ ಎಂಬ...

ಕೆ ಆರ್ ಜಿ ಹಾಗು ಟಿವಿಎಫ್ ಕೈಜೋಡಿಸಿದ ಮೊದಲ ಸಿನಿಮಾಗೆ ಕಿಚ್ಚನಿಂದ ಚಾಲನೆ! ಪೌಡರ್ ಎಂಬ ಬಹುತಾರಗಣದ ಈ ಸಿನಿಮಾ ಸೆಪ್ಟೆಂಬರ್ ನಲ್ಲಿ ಪ್ರಾರಂಭ



ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್, ಟಿವಿಎಫ್ ಮೋಷನ್ ಪಿಕ್ಚರ್ಸ್ ಸಂಸ್ಥೆಯ ಜೊತೆಗೆ ಕೈಜೋಡಿಸಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ಅದರ ಮೊದಲ ಹಂತವಾಗಿ ಇಂದು ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಈ ಎರಡೂ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಮೊದಲ ಚಿತ್ರ ಪ್ರಾರಂಭವಾಗಿದೆ. ಅದೇ “ಪೌಡರ್”.

“ಪೌಡರ್” ಚಿತ್ರದ ಮುಹೂರ್ತ ಸಮಾರಂಭವು ವರಮಹಾಲಕ್ಷ್ಮೀ ಹಬ್ಬದಂದು ನಡೆದಿದ್ದು, ಕಿಚ್ಚ ಸುದೀಪ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ನಿರ್ಮಾಪಕ ಕಾರ್ತಿಕ್
ಗೌಡ ಅವರ ತಂದೆ ರಾಮಕೃಷ್ಣೇಗೌಡ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಧನಂಜಯ್, ಸಂತೋಷ್ ಆನಂದರಾಮ್, ರೋಹಿತ್ ಪದಕಿ, ಧೀರೇನ್ ರಾಮಕುಮಾರ್, ನವೀನ್ ಶಂಕರ್, ಕೆ.ಮಂಜು, ಭೂಮಿ ಶೆಟ್ಟಿ, ನಾಗಭೂಷಣ್, ಟಿವಿಎಫ್ ಸಂಸ್ಥಾಪಕರಾದ ಅರುಣಭ್ ಕುಮಾರ್, ವಿಜಯ್ ಕೋಶಿ, ಚೈತನ್ಯ ಕುಂಬಕೋಣಂ ಮುಂತಾದವರು ಹಾಜರಿದ್ದರು.



“ಪೌಡರ್” ಒಂದು ಹಾಸ್ಯಮಯ ಚಿತ್ರವಾಗಿದ್ದು, ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಸಿಗುತ್ತದೆ. ಒಂದು ಕಡೆ ಆ ಕೊಕೇನ್ ಗಾಗಿ ಹುಡುಕಾಟದಲ್ಲಿರುವ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂಬ ಯುವಕರ ಗುಂಪು. ಮತ್ತೊಂದು ಕಡೆ ತಮ್ಮ ಅಧಿಪತ್ಯ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಒಬ್ಬ ಮಾಸ್ಟರ್ ಮೈಂಡ್. ಈ ಹಾವು-ಏಣಿ ಆಟದಲ್ಲಿ ಗೆಲ್ಲುವವರು ಯಾರು? ಎಂದು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.

ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಈ ಬಹುತಾರಾಗಣದ ಚಿತ್ರದಲ್ಲಿ ದಿಗಂತ್, ಧನ್ಯ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. ದೀಪಕ್ ವೆಂಕಟೇಶನ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶಾಂತಿ ಸಾಗರ್ ಅವರ ಛಾಯಾಗ್ರಹಣವಿದೆ.



ನಮ್ಮ ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ “ಪೌಡರ್”. ಬಹು ತಾರಾಗಣವಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. 2024ರ ಏಪ್ರಿಲ್ 5 ಚಿತ್ರ‌ ಬಿಡುಗಡೆಯಾಗಲಿದೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ತಿಳಿಸಿದರು.

ಕೆ.ಆರ್‌.ಜಿ ಸ್ಟುಡಿಯೋಸ್ ಜೊತೆಗೂಡಿ ಈ ಚಿತ್ರ ನಿರ್ಮಾಣ ಮಾಡುತ್ತಿರುವುದಕ್ಕೆ ಟಿವಿಎಫ್ ಸಂಸ್ಥೆಯ ಅರುಣಭ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

ಕಾಮಿಡಿ ಜಾನರ್ ನ ಈ ಕಥೆ ಎಲ್ಲರಿಗೂ ಹಿಡಿಸಲಿದೆ ಎಂದರು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ.

ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಎರಡು ದೊಡ್ಡ ಸಂಸ್ಥೆಗಳು ಸೇರಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯ ವಿಚಾರ ಎನ್ನುತ್ತಾರೆ ನಾಯಕ ದಿಗಂತ್.

ಶರ್ಮಿಳಾ ಮಾಂಡ್ರೆ, ಧನ್ಯ, ಅನಿರುದ್ಧ್ ಆಚಾರ್ಯ, ಅಚ್ಯುತ ಕುಮಾರ್, ರವಿಶಂಕರ್ ಗೌಡ ಮುಂತಾದ ಕಲಾವಿದರು “ಪೌಡರ್” ಬಗ್ಗೆ ಮಾತನಾಡಿದರು.

RELATED ARTICLES

Most Popular

Share via
Copy link
Powered by Social Snap