ಸ್ಯಾಂಡಲ್ವುಡ್ ನಲ್ಲಿ ಸದ್ಯ ಹೊಸಬರ ಅಲೆ ಪ್ರಾರಂಭವಾಗಿದೆ. ಈ ಸಾಲಿಗೆ ಸೇರಿಕೊಳ್ಳುತ್ತಿರುವ ಹೊಸ ಚಿತ್ರ ಸಂತೋಷ್ ಕೈದಾಳ ಅವರ ನಿರ್ದೇಶನದ ‘ಪರಂವಃ’. ಈಗಾಗಲೇ ಬಿಡುಗಡೆಯಾಗಿರುವ ತನ್ನ ಟ್ರೈಲರ್ ಹಾಗು ಹಾಡುಗಳಿಂದ ಎಲ್ಲೆಡೆ ಪ್ರಚಲಿತದಲ್ಲಿದೆ. ಇದೀಗ ಈ ‘ಪರಂವಃ’ ಸಿನಿಮಾ ತನ್ನ ಎರಡನೇ ಹಾಡು ಬಿಡುಗಡೆ ಮಾಡುವ ಮೂಲಕ ಇನ್ನಷ್ಟು ಸದ್ದು ಮಾಡುತ್ತಿದೆ. ಸದ್ಯ ಈ ಸಿನಿಮಾದಿಂದ ನಾಗೇಶ್ ಕುಂದಾಪುರ ಅವರು ಬರೆದಿರುವ “ನೂರಾರೂ ರಂಗಿರೊ” ಎಂಬ ಹಾಡನ್ನು ತಂಡ ಬಿಡುಗಡೆ ಮಾಡಿಸಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟ ಲವ್ಲೀ ಸ್ಟಾರ್ ಪ್ರೇಮ್ ಅವರು ಈ ಹಾಡನ್ನು ಹೊರತಂದಿದ್ದಾರೆ. ಈ ವೇಳೆ ಹೆಸರಾಂತ ನಿರ್ದೇಶಕ ಜಡೇಶ್ ಕುಮಾರ್ ಅವರೂ ಕೂಡ ಉಪಸ್ಥಿತರಿದ್ದರು.


ಈ ವೇಳೆ ಮಾತನಾಡಿದ ಸಿನಿಮಾದ ನಿರ್ದೇಶಕ ಸಂತೋಷ್ ಕೈದಾಳ, “ಶಿವನ ಢಮರುಗದಿಂದ ಹೊಮ್ಮುವ ನಾದಕ್ಕೆ ‘ಪರಂವಃ’ ಎನ್ನುತ್ತಾರೆ. ನಮ್ಮ ಸಿನಿಮಾದಲ್ಲಿ ವೀರಗಾಸೆಯ ಬಗೆಗಿನ ಕಥೆ ಇರುವುದರಿಂದ ಈ ಪದ ಸೂಕ್ತವೆಂದೆಣಿಸಿ ಇದೇ ಹೆಸರಿಟ್ಟಿದ್ದೇವೆ. ಸಿನಿಮಾದಲ್ಲಿ ವೀರಗಾಸೆ ಕಲೆಯ ಬಗ್ಗೆ ಮತ್ತು ತಂದೆ-ಮಗನ ಸಂಬಂಧದ ಬಗ್ಗೆ ಪ್ರಧಾನವಾಗಿ ಹೇಳಲಾಗಿದೆ. ಅಷ್ಟೇ ಅಲ್ಲದೆ, ಪ್ರೀತಿ, ಸ್ನೇಹ, ಸೆಂಟಿಮೆಂಟ್, ಥ್ರಿಲ್ಲರ್, ಆ್ಯಕ್ಷನ್ ಹೀಗೆ ಎಲ್ಲ ಥರದ ವಿಷಯಗಳು “ಪರಂವಃ” ಚಿತ್ರದಲ್ಲಿದೆ. ಪೀಪಲ್ಸ್ ವಲ್ಡ್ ಫಿಲಂಸ್ ಲಾಂಛನದಲ್ಲಿ, ಸುಮಾರು ಇನ್ನೂರು ಜನ ಸೇರಿ ಈ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ. ನಟ ಪ್ರೇಮ್, ನಿರ್ದೇಶಕ ಗುರು ದೇಶಪಾಂಡೆ ಅವರು ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಗಣ್ಯರು ಹಾಗೂ ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮನತುಂಬಿ ಬಂದಿದೆ. ಆದಷ್ಟು ಬೇಗ ನಮ್ಮ ಸಿನಿಮಾವನ್ನ ಬಿಡುಗಡೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದೇವೆ” ಎಂದರು.
ಇನ್ನು ಈ ‘ನೂರಾರು ರಂಗಿರೋ’ ಎಂಬ ಹಾಡನ್ನು ಬಿಡುಗಡೆ ಮಾಡಿದ ನಟ ಪ್ರೇಮ್ ಅವರು ಈ ಚಿತ್ರತಂಡವನ್ನ ಬಹುವಾಗಿ ಮೆಚ್ಚಿಕೊಂಡರು. “ಈ ಸಿನಿಮಾ ತಂಡದ ಬಗ್ಗೆ ತಿಳಿದು ಖುಷಿಯಾಯಿತು. ಸುಮಾರು 200 ಜನ ಬಂಡವಾಳ ಹಾಕಿ ನಿರ್ಮಾಣ ಮಾಡಿರುವ ಸಿನಿಮಾವಿದು. ಇದು ನಿಜಕ್ಕೂ ಖುಷಿಯ ವಿಚಾರ. ಸಿನಿಮಾ ಬಗ್ಗೆ ಆಸಕ್ತಿಯಿರುವ ಪ್ರೇಕ್ಷಕರೆ ಒಟ್ಟಾಗಿ ಈ ‘ಪರಂವಃ’ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ ಎಂದು ಅನಿಸುತ್ತದೆ. ಈಗ ಹೊಸತಂಡದ ಹೊಸಪ್ರಯತ್ನಗಳನ್ನು, ಹೊಸಪರಿಯ ಸಿನೆಮಾಗಳನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಆ ಸಾಲಿಗೆ “ಪರಂವಃ” ಚಿತ್ರ ಸಹ ಸೇರಲಿ ಎಂದು ಹಾರೈಸುತ್ತೇನೆ” ಎಂದು ನಟ ಪ್ರೇಮ್ ಮನಸಾರೆ ತಂಡವನ್ನ ಸಿನಿಮಾವನ್ನ ಉದ್ದೇಶಿಸಿ ಶುಭನುಡಿದರು.
ಸಂತೋಷ್ ಕೈದಾಳ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ‘ಪರಂವಃ’ ಸಿನಿಮಾ, ಪ್ರಸಿದ್ದ ದೇಸಿ ಕಲೆ ವೀರಗಾಸೆ ಮತ್ತು ತಂದೆ-ಮಗನ ನಡುವಿನ ಬಾಂಧವ್ಯದ ಬಗೆಗಿನ ಕಥೆ ಹೊಂದಿರುವಂತದ್ದು. ಈಗಾಗಲೇ ಹೊರಬಿದ್ದಿರುವ ತನ್ನ ಟ್ರೈಲರ್ ಹಾಗು ಮೊದಲ ಹಾಡಿನ ಮೂಲಕ ಜನಮನಗೆದ್ದಿರುವ ಈ ಚಿತ್ರದಲ್ಲಿ ಪ್ರೇಮ್ ಸಿಡ್ಗಲ್ ನಾಯಕನಾಗಿ ಮತ್ತು ಮೈತ್ರಿ ಜೆ. ಕಶ್ಯಪ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಗಣೇಶ್ ಹೆಗ್ಗೋಡು, ನಾಜರ್, ಶ್ರುತಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.



