ಕನ್ನಡದ, ಕನ್ನಡಿಗರ ಹೆಮ್ಮೆಯ ಸಿನಿಮಾ ಎಂಬ ಹೆಗ್ಗಳಿಕೆ ‘ಕಾಂತಾರ’ ಚಿತ್ರದ್ದು. ಕನ್ನಡ ನಾಡಿನ ಸಂಸ್ಕೃತಿಯ ಸೊಬಗನ್ನು, ಇಲ್ಲಿನ ಚಿತ್ರರಂಗದ ಸಾಮರ್ಥ್ಯವನ್ನು ಜಗತ್ತಿಗೇ ಸಾರಿದ್ದು ಈ ಸಿನಿಮಾದ ಕೀರ್ತಿ. ವಿಶ್ವಸಂಸ್ಥೆಯಲ್ಲಿ ಕೂಡ ಪ್ರದರ್ಶನ ಕಂಡಂತಹ ಈ ಚಿತ್ರಕ್ಕೆ ತಂಡ ಹಲವು ಪುರಸ್ಕಾರಗಳನ್ನ, ಪ್ರಶಂಸೆಗಳನ್ನು ಪಡೆದಿದೆ. ಸಿನಿಮಾ ಪ್ರಪಂಚದ ತುಂಬಾ ಸಂಚಲನ ಮೂಡಿಸಿದ ಈ ‘ಕಾಂತಾರ’ ಸಿನಿಮಾಗಾಗಿ ಮತ್ತೊಂದು ಪ್ರತಿಷ್ಟಿತ ಪ್ರಶಸ್ತಿಯನ್ನು ಚಿತ್ರದ ನಾಯಕ ನಾಯಕಿ ಪಡೆದಿದ್ದಾರೆ.
‘ಓಟಿಟಿ ಪ್ಲೇ’ ಅವರು ನೀಡುವ ಪ್ರಶಸ್ತಿಗಳಲ್ಲಿ, ಎಲ್ಲರ ಗಮನ ಸೆಳೆದಿರುವ, ‘ಕಾಂತಾರ’ದ ನಿರ್ದೇಶಕ ಹಾಗು ನಾಯಕನಾಗಿರುವ ರಿಷಬ್ ಶೆಟ್ಟಿಯವರಿಗೆ ‘ಗೇಮ್ ಚೇಂಜರ್ ಓಫ್ ದಿ ಇಯರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ನು ಸದ್ಯ ಎಲ್ಲೆಡೆ ಬಹುವಾಗಿ ಬೇಡಿಕೆ ಪಡೆಯುತ್ತಿರುವ ಚಿತ್ರದ ನಾಯಕಿ ಸಪ್ತಮಿ ಗೌಡ ಅವರಿಗೆ ‘ರೈಸಿಂಗ್ ಸ್ಟಾರ್ ಓಫ್ ದಿ ಇಯರ್’ ಪ್ರಶಸ್ತಿ ನೀಡಲಾಯಿತು. ‘ಕಾಂತಾರ’ ಚಿತ್ರವನ್ನ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರದಲ್ಲಿದೆ. ಅತಿಹೆಚ್ಚು ಜನ ಸಾಮಾನ್ಯರು ಚಿತ್ರರಂಗಕ್ಕೇ ಬಂದು ನೋಡಿದಂತಹ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರದ್ದು, ಅಂತಹ ಒಂದು ಅದ್ಭುತ ಅನುಭವ ಈ ಸಿನಿಮಾದ್ದು.
ಸದ್ಯ ‘ಕಾಂತಾರ 2’ ಕೂಡ ತಯಾರಾಗುತ್ತಿದೆ. ಕಥೆಯ ಪ್ರಕಾರ ಇದು ಈಗಿನ ‘ಕಾಂತಾರ’ ಸಿನಿಮಾದ ಹಿನ್ನೆಲೆ ಕಥೆ ಆಗಿರಲಿದೆ ಎನ್ನಲಾಗುತ್ತಿದೆ. ಸದ್ಯ ಚಿತ್ರದ ಬರವಣಿಗೆಯಲ್ಲಿ ರಿಷಬ್ ಶೆಟ್ಟಿ ಹಾಗು ತಂಡದವರು ತೊಡಗಿಕೊಂಡಿದ್ದಾರೆ. ಇನ್ನು ಸಪ್ತಮಿ ಗೌಡ ಅವರು ಕೂಡ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಹಿಂದಿಯ ‘ದಿ ವ್ಯಾಕ್ಸಿನ್ ವಾರ್’ಗು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಇವರಿಗೆ ಸಂದಿರುವ ಈ ಪ್ರಶಸ್ತಿ ಕನ್ನಡಿಗರ ಹೆಮ್ಮೆಗೆ ಇನ್ನಷ್ಟು ಪುಷ್ಟಿ ನೀಡಿದೆ.

