ನಮ್ ಟಾಕೀಸ್.ಇನ್ ರೇಟಿಂಗ್ 【3.25/5】
ಕನ್ನಡ ಚಿತ್ರರಂಗದಲ್ಲಿ ಹೊಸಬರು, ಹೊಸ ರೀತಿಯ ಸಿನಿಮಾಗಳು ಬರುವುದು, ಯಶಸ್ಸು ಗಳಿಸಿ, ಜನಮನದಲ್ಲಿ ಉಳಿಯುವುದು ಸರ್ವೇ ಸಾಮಾನ್ಯವಾಗಿದೆ. ಇದೀಗ ಆ ಸಾಲಿನಲ್ಲಿ ಬರುತ್ತಿರುವ ಹೊಸ ಸಿನಿಮ,’ನೋಡದ ಪುಟಗಳು’. ನಮ್ಮ ಜೀವನದಲ್ಲಿ ಪ್ರತೀ ವರ್ಷ ನಿರ್ದಿಷ್ಟ ಅವಧಿಯಲ್ಲಿ ಒಂದಿಷ್ಟು ಘಟನೆಗಳು ಆಗುತ್ತಲೇ ಇರುತ್ತವೆ. ಇಂತದ್ದೇ ಕಥೆಗಳನ್ನ ಆಧರಿಸಿ ಈ ಹೊಸ ಸಿನಿಮಾ ಮಾಡಲಾಗಿದೆ. ಬಾಲ್ಯ, ಶಾಲಾ ದಿನಗಳು, ಇಂಜಿನಿಯರಿಂಗ್ ದಿನಗಳು ಅದರ ನಂತರದ ಜೀವನ ಇದೆಲ್ಲವನ್ನ ಬಹಳ ಅದ್ಭುತವಾಗಿ ಈ ಚಿತ್ರದಲ್ಲಿ ಚಿತ್ರಣ ಮಾಡಲಾಗಿದೆ. ‘ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂಬ ಅಡಿಬರಹದೊಂದಿಗೆ ಚಿತ್ರ ಬರುತ್ತಿದೆ.
ವೃತ್ತಿಯಲ್ಲಿ ಟೆಕ್ಕಿಯಾಗಿದ್ದಂತಹ, ಸಿನಿಮಾದಲ್ಲಿ ಅಪಾರ ಆಸಕ್ತಿಯಿದ್ದಂತಹ ಎಸ್ ವಸಂತ್ ಕುಮಾರ್ ಅವರು ಈ ‘ನೋಡದ ಪುಟಗಳು’ ಚಿತ್ರದ ರಚನಕಾರರು. ಕಥೆ ಚಿತ್ರಕತೆ ಹಾಗಿ ನಿರ್ದೇಶನ ಮಾಡುವುದರ ಜೊತೆಗೆ,’ಸ್ವೀಟ್ ಅಂಡ್ ಸಾಲ್ಟ್’ ಮೂವೀಸ್ ಎಂಬ ಬ್ಯಾನರ್ ಅಡಿಯಲ್ಲಿ ಚಿತ್ರದ ನಿರ್ಮಾಣ ಕೂಡ ಮಾಡಿದ್ದಾರೆ. ತಮ್ಮ ಬದುಕಿನಲ್ಲಿ ಕಂಡಂತಹ ಹಲವು ಸುಂದರ ಕ್ಷಣಗಳನ್ನ ಈ ಚಿತ್ರದ ಮೂಲಕ ತೆರೆಮೇಲೆ ತರುವಂತಹ ಒಂದೊಳ್ಳೆಯ ಪ್ರಯತ್ನವನ್ನ ನಿರ್ದೇಶಕರು ಮಾಡಿದ್ದಾರೆ. ಎಲ್ಲರ ಬದುಕಿನಲ್ಲೂ ಕೆಟ್ಟಗಳಿಗೆ, ಒಳ್ಳೆಯ ಗಳಿಗೆ ಎಲ್ಲವೂ ಬಂದೆ ಬರುತ್ತದೆ. ತಾಳ್ಮೆಯೊಂದು ಇದ್ದರೆ ಎಂತಹಾ ಸನ್ನಿವೇಶವನ್ನಾದರೂ ಜಯಿಸಿ ಬರಬಹುದು ಎಂಬ ಸೂಕ್ಷ್ಮ ಸಂದೇಶವನ್ನ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ.
ಕಥಾನಾಯಕ ‘ಆದಿತ್ಯ’ನಾಗಿ ಪ್ರೀತಮ್ ಮಕ್ಕಿಹಳ್ಳಿ, ನಾಯಕಿ ‘ಹರಿಣಿ’ ಪಾತ್ರದಲ್ಲಿ ಕಾವ್ಯ ರಮೇಶ್ ಜೊತೆಗೆ ವಿಲಾಸ್ ಕುಲಕರ್ಣಿ, ವಾಸು, ಪಿ ಬಿ ರಾಜುನಾಯಕ, ಶಾಂತಿ ಎಸ್ ಗೌಡ, ಮೋಹನ್ ರಾವ್, ಗೌತಮ್ ಜಿ, ಅಶೋಕ್ ರಾವ್, ಸೌಭಾಗ್ಯ ಮುಂತಾದವರು ಸಿನಿಮಾದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿ, ಪ್ರಭುದ್ಧ ನಟನೆ ಮೆರೆದಿದ್ದಾರೆ. ವಿಗ್ನೇಶ್ ಮೆನನ್ ಅವರ ಸಂಗೀತವಿರುವ ಈ ಸಿನಿಮಾದಲ್ಲಿ ಎರಡು ಹಾಡುಗಳು ಇರಲಿದ್ದು, ಕುಮಾರ್ ಛಾಯಾಗ್ರಾಹಣ, ಹಾಗು ರಘುನಾಥ್ ಅವರ ಸಂಕಲನ ಚಿತ್ರದಲ್ಲಿರಲಿದೆ.
ಶಾಲೆಯಲ್ಲಿನ ಫಸ್ಟ್ ಲವ್, ಇಂಜಿನಿಯರಿಂಗ್ ಕಾಲೇಜಿನ ಮೋಜು ಮಸ್ತಿ, ನಂತರ ಕೆಲಸ, ಬ್ಯುಸಿ ದಿನಗಳು, ಅದೆಷ್ಟೋ ದಿನ ಆದಮೇಲೆ ಸಿಗುವಂತಹ ಹಳೆಯ ಗೆಳೆಯರು, ಅವರ ನಡುವಿನ ಬಾಂಧವ್ಯ, ಇವೆಲ್ಲವನ್ನ ಕಥೆಯಲ್ಲಿ ನವಿರಾಗಿ ಹೇಳಹೊರಟಿದ್ದಾರೆ. ಸ್ನೇಹಿತರ ನಡುವೆ ಪ್ರೀತಿ ಉಂಟಾದರೆ ಮುಂದೇನು? ಅವರ ಬದುಕು ಹೇಗೆ ಬದಲಾಗುತ್ತದೆ? ಎಂಬ ಒಂದೊಳ್ಳೆ ಜೀವನದ ಭಾಗವನ್ನ ತೆರೆಮೇಲೆ ತರಲಿದ್ದಾರೆ. ಹೊಸತನವನ್ನ, ಒಳಗಿನ ಮಧುರ ಭಾವನೆಗಳನ್ನ ಇಷ್ಟಪಡುವವರಿಗೆ ಈ ‘ನೋಡದ ಪುಟಗಳು’ ಚಿತ್ರ ಬಹುವಾಗಿ ಇಷ್ಟವಾಗುತ್ತದೆ.

