ದೊಡ್ಮನೆ ಕುಟುಂಬಕ್ಕೆ ಕಲೆ ಎಂಬುದು ಹೊಸತೇನಲ್ಲ. ಸುಮಾರು ಮೂರು ತಲೆಮಾರು ಅವರ ಕುಟುಂಬದಿಂದ ಕಲೆಗೆ ಮುಡಿಪಾಗಿಯೇ ಜೀವಿಸುತ್ತಿದ್ದಾರೆ ಎಂದರೂ ತಪ್ಪಾಗದು. ಇದೀಗ ರಾಜ್ ಕುಟುಂಬದ ಮತ್ತೊಂದು ಕುಡಿ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಎರಡನೇ ಪುತ್ರಿ, ನಿವೇದಿತಾ ಶಿವರಾಜಕುಮಾರ್ ಅವರು ಕೂಡ ಬಣ್ಣದ ಲೋಕಕ್ಕೆ ಬರಲು ಸಜ್ಜಾಗಿದ್ದಾರೆ. ಆದರೆ ಅದು ತೆರೆಯ ಮುಂದಕ್ಕೆ ಅಲ್ಲ, ಬದಲಾಗಿ ತೆರೆಯ ಹಿಂಬದಿಯಲ್ಲಿ. ಶಿವಣ್ಣನ ಎರಡನೇ ಪುತ್ರಿ ಇದೀಗ ನಿರ್ಮಾಪಕಿಯಾಗಿ ಸಿನಿಮಾರಂಗಕ್ಕೆ ಕಾಲಿಡಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಕಿರುತೆರೆ ಹಾಗು ಓಟಿಟಿ ವರ್ಗಕ್ಕೆ ತಕ್ಕಮಟ್ಟಿಗೆ ಪರಿಚಿತರಾಗಿರುವ ನಿವೇದಿತಾ, ತಮ್ಮನಿರ್ಮಾಣದ ಮೊದಲ ಸಿನಿಮಾದ ಘೋಷಣೆ ಮಾಡಿದ್ದಾರೆ.
ಅಂದಂತೆ ಕಲಾವರ್ಗಕ್ಕೆ ನಿವೇದಿತಾ ಹೊಸಬರೇನಲ್ಲ. 2017ರಲ್ಲೇ ತಮ್ಮ ನಿರ್ಮಾಣ ಸಂಸ್ಥೆಯಾದ ‘ಶ್ರೀ ಮುತ್ತು ಸಿನಿ ಸರ್ವಿಸಸ್’ ಪ್ರಾರಂಭಿಸಿದ ಇವರು, ಈ ವರೆಗೆ ಒಂದು ಧಾರವಾಹಿ ಹಾಗು ಮೂರು ವೆಬ್ ಸೀರೀಸ್ ಗಳನ್ನೂ ಕನ್ನಡಿಗರಿಗೆ ನೀಡಿದ್ದಾರೆ. ನಾಗಭೂಷಣ ಹಾಗು ಸಂಜನಾ ಆನಂದ್ ಅಭಿನಯದ ‘ಹನಿಮೂನ್’,ಪೂರ್ಣ ಮೈಸೂರು ಹಾಗು ಸಿರಿ ರವಿಕುಮಾರ್ ಅಭಿನಯದ ‘ಬೈ ಮಿಸ್ಟೇಕ್’ ಹಾಗು ‘ಹೇಟ್ ಯು ರೋಮಿಯೋ’ ಎಂಬ ಮೂರು ವೆಬ್ ಸೀರೀಸ್ ಗಳು ಇವರ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆಯಾಗಿ ಜನಮನ್ನಣೆ ಪಡೆದಿವೆ. ಸದ್ಯ ಇದೀಗ ತಮ್ಮ ಮೊದಲ ಸಿನಿಮಾದ ಘೋಷಣೆಯನ್ನ ನಿವೇದಿತಾ ಶಿವರಾಜಕುಮಾರ್ ಮಾಡಿದ್ದಾರೆ.
ಅಪ್ಪು ಅವರ ‘ಪಿ ಆರ್ ಕೆ ಪ್ರಾಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಂತಹ ‘ಮಾಯಾಬಜಾರ್’ ಸಿನಿಮಾದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದಂತಹ ವಂಶಿ ಅವರು ಬರೆದು, ಅವರೇ ನಿರ್ದೇಶನ ಮಾಡಲಿರುವ ಹೊಸಕಥೆಯನ್ನು ‘ಶ್ರೀ ಮುತ್ತು ಸಿನಿ ಸರ್ವಿಸಸ್’ ತನ್ನ ಮೊದಲ ಸಿನಿಮಾವಾಗಿ ನಿರ್ಮಾಣ ಮಾಡಲಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾವನ್ನ ಸದ್ಯಕ್ಕೆ ‘ಪ್ರೊಡಕ್ಷನ್ #1’ ಎಂದು ಕರೆಯುತ್ತಿದ್ದು, ನಿರ್ದೇಶಕ ವಂಶಿ ಅವರೇ ಕಥಾನಾಯಕನಾಗಿ ಬಣ್ಣ ಹಚ್ಚಲಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಚರಣ್ ರಾಜ್ ಚಿತ್ರಕ್ಕೆ ಸಂಗೀತ ತುಂಬಲಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ ‘ಬಾನದಾರಿಯಲಿ’ ಚಿತ್ರಕ್ಕೆ ಕ್ಯಾಮೆರಾ ಹಿದಿರುವಂತಹ ಅಭಿಲಾಷ್ ಕಲ್ಲಟ್ಟಿ ಅವರ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಜೊತೆಗೇ ಜಯರಾಮ್ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.
ಸದ್ಯಕ್ಕೆ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ಜೂನ್ ಆರಂಭಕ್ಕೆ ಈ ಹೊಸ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಲಿದೆ ಎನ್ನಲಾಗುತ್ತಿದೆ. ಇದರ ಮಧ್ಯೆ ನಿವೇದಿತಾ ಅವರು ಇನ್ನೊಂದು ವೆಬ್ ಸೀರೀಸ್ ಮಾತುಕತೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿಬರುತ್ತಿವೆ. ಲೈಫ್ ಡ್ರಾಮ ರೀತಿಯ ಮಧುರವಾದ ಮನಸ್ಸನ್ನು ಮುಟ್ಟುವಂತಹ ಈ ಕಥೆಯನ್ನ, ನಿವೇದಿತಾ ಮಾತ್ರವಲ್ಲದೆ ಶಿವರಾಜಕುಮಾರ್ ಅವರು ಕೂಡ ಕೇಳಿ ಮೆಚ್ಚಿದ್ದಾರಂತೆ. ಒಟ್ಟಿನಲ್ಲಿ ಪಾರ್ವತಮ್ಮ ರಾಜಕುಮಾರ್ ಅವರಿಂದ ಆರಂಭವಾದ ರಾಜ್ ಕುಟುಂಬದ ಮಹಿಳಾ ನಿರ್ಮಾಪಕಿ ಜವಾಬ್ದಾರಿಯನ್ನ, ಶಿವಣ್ಣ ಪತ್ನಿ ಗೀತ ಶಿವರಾಜಕುಮಾರ್ ಹಾಗು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಇದೀಗ ಶಿವಣ್ಣ ಪುತ್ರಿ ನಿವೇದಿತಾ ಶಿವರಾಜಕುಮಾರ್ ಅವರು ಕೂಡ ಕೈಗೆಟ್ಟಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುತ್ತಾ, ಹೊಸ ಬಗೆಯ ಸಿನಿಮಾಗಳನ್ನ ಕನ್ನಡ ಕಲಾರಂಗಕ್ಕೆ ನೀಡಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಹೊಸ ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

