ಹಾಸ್ಯನಟನಾಗಿ ಕನ್ನಡಿಗರನ್ನ ರಂಜಿಸುತ್ತಾ, ಹಲವು ವರ್ಷಗಳಿಂದ ಸ್ಯಾಂಡಲ್ವುಡ್ ನಲ್ಲಿ ಸಕ್ರಿಯರಾಗಿರುವ ತಬಲಾ ನಾಣಿ ಅವರು ಇದೀಗ ನಾಯಕನಾಗಿ ತೆರೆಯ ಮೇಲೆ ಬರಲು ಸಜ್ಜಾಗುತ್ತಿದ್ದಾರೆ. ಒಂದು ಸಂಪೂರ್ಣ ಹಾಸ್ಯಮಯ ಪ್ರೇಮಕಥೆಯ ಮೂಲಕ ಜನರ ಮುಂದೆ ಬರುವ ಯತ್ನದಲ್ಲಿರುವ ತಬಲಾ ನಾಣಿ ಅವರದ್ದು ಸಿನಿಮಾದಲ್ಲಿ ಕುರುಡನ ಪಾತ್ರ. ಯಾವುದಪ್ಪ ಆ ಸಿನಿಮಾ ಅಂದರೇ, ಅದುವೇ ‘ನನಗೂ ಹೆಂಡ್ತಿ ಬೇಕು’.
ಇದಕ್ಕೂ ಮುನ್ನ ದೇಶಪ್ರೇಮದ ಕಥಾಹಂದರ ಹೊಂದಿದ ‘ಆಕ್ಟ್ 370’ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಕೆ ಶಂಕರ್ ಅವರು ಈ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಕಾಮಿಡಿ ಎಂಟರ್ಟೈನರ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಅಂಧನೊಬ್ಬ ಮದುವೆಯಾಗಲು ಹೊರಟಾಗ ಏನೆಲ್ಲಾ ಪಜೀತಿಗಳನ್ನ ಎದುರಿಸಬೇಕಾಗುತ್ತದೆ ಎಂಬುದನ್ನ ಒಂದು ಪರಿಪೂರ್ಣ ಹಾಸ್ಯಮಯ ಕಥೆಯಾಗಿ ಈ ‘ನನಗೂ ಹೆಂಡ್ತಿ ಬೇಕು’ ಸಿನಿಮಾದಲ್ಲಿ ಹೇಳಲಾಗಿದೆ. ಅಂಧನ ಪಾತ್ರದಲ್ಲಿ ತಬಲಾ ನಾಣಿ ಅವರು ನಟಿಸಿದರೆ, ಇವರಿಗೆ ಜೋಡಿಯಾಗಿ ಮೂಕಿಯ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚೈತ್ರ ಕೊಟ್ಟೂರ್ ಅವರು ಬಣ್ಣ ಹಚ್ಚಿದ್ದಾರೆ. ಸದ್ಯ ಸಿನಿಮಾ ತನ್ನ ಕ್ಲೈಮಾಕ್ಸ್ ಅನ್ನು ಚಿತ್ರೀಕರಣ ನಡೆಸುತ್ತಿದೆ.
ಲೈರಾ ಎಂಟರ್ಟೈನ್ಮೆಂಟ್ ಅಂಡ್ ಮೀಡಿಯಾ ಎಂಬ ಬ್ಯಾನರ್ ಅಡಿಯಲ್ಲಿ ಭರತ್ ಗೌಡ ಹಾಗು ಸಿ ರಮೇಶ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕ ಕೆ ಶಂಕರ್ ಅವರೇ ಕಥೆ ಚಿತ್ರಕತೆ ರಚಿಸಿದ್ದಾರೆ. ಒಟ್ಟಾರೆ ಸಿನಿಮಾದಲ್ಲಿ ಎರಡು ಫೈಟ್ ಹಾಗು ಎರಡು ಹಾಡುಗಳು ಇರಲಿದ್ದು ಕೆ ಎಂ ಇಂದ್ರ ಅವರ ಸಂಗೀತ ಚಿತ್ರಕ್ಕಿರಲಿದೆ. ಚಿತ್ರದುರ್ಗದಲ್ಲಿ ಸಿನಿಮಾದ ಸಂಪೂರ್ಣ ಚಿತ್ರೀಕರಣ ನಡೆಯುತ್ತಿದೆ.
ತಬಲಾ ನಾಣಿ ಹಾಗು ಚೈತ್ರ ಕೊಟ್ಟೂರ್ ಅವರ ಜೊತೆಗೆ ಹೆಸರಾಂತ ಕಲಾವಿದರಾದ ಬ್ಯಾಂಕ್ ಜನಾರ್ಧನ್, ರಾಜ್ ಬಾಲ, ಶೃತಿ, ರಮೇಶ್ ಭಟ್, ದೊಡ್ಡ ರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಗಾನವಿ, ಪ್ರಿಯಾಂಕಾ ಮುಂತಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ‘ನನಗೂ ಹೆಂಡ್ತಿ ಬೇಕು’ ಒಂದೊಳ್ಳೆ ಹಾಸ್ಯಮಯ ಮನರಂಜನೆ ನೀಡುವ ಸಿನಿಮಾ ಆಗಿ ಹೊರಬೀಳಲಿದೆ.

