ಕನ್ನಡ ಚಿತ್ರರಂಗದ ಪ್ರಖ್ಯಾತ ನಾಯಕನಟ, ಈಗ ಯಶಸ್ವಿ ನಾಯಕನಟ, ಸೆನ್ಸೇಷನಲ್ ಸ್ಟಾರ್ ಎಂದೇ ಕರೆಸಿಕೊಳ್ಳುವ ಕೋಮಲ್ ಅವರಿಂದ ಬಹುನಿರೀಕ್ಷಿತ ಸಿನಿಮಾವೊಂದು ಬರುವ ಸುದ್ದಿ ಹೊರಬಿದ್ದಿತ್ತು. ಅದುವೇ ‘ನಮೋ ಭೂತಾತ್ಮ 2’. 2014ರಲ್ಲಿ ಬಿಡುಗಡೆಯಾಗಿ ಜನಮನ್ನಣೆ ಪಡೆದು ಸೂಪರ್ ಹಿಟ್ ಆದ ‘ನಮೋ ಭೂತಾತ್ಮ’ ಚಿತ್ರದ ಸೀಕ್ವೆಲ್ ಈ ‘ನಮೋ ಭೂತಾತ್ಮ 2’. ಈ ಸಿನಿಮಾದ ಬಗ್ಗೆ ಕೋಮಲ್ ಅವರು ಹಿಂದೆಯೇ ಹಂಚಿಕೊಂಡಿದ್ದರು. ಈಗ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕದ ಜೊತೆಗೆ ಬಂದಿದ್ದಾರೆ.
ಸಂತೋಷ್ ಶೇಖರ್ ಅವರು ಬಂಡವಾಳ ಹೂಡುತ್ತಿರುವ ಈ ಸಿನಿಮಾವನ್ನು ಮುರಳಿ ವಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇದೀಗ ತನ್ನ ಟೀಸರ್ ಅನ್ನು ಜನರ ಮುಂದಿಡಲು ‘ನಮೋ ಭೂತಾತ್ಮ 2’ ತಂಡ ಸಿದ್ಧವಾಗಿದೆ.


ಅಂತೆಯೇ ಇದೇ ಜುಲೈ 1ರ ಬೆಳಿಗ್ಗೆ 11:30ಕ್ಕೆ ಟೀಸರ್ ಹೊರಬೀಳಲಿದೆ. ವಿಶೇಷವೆಂದರೆ ಕನ್ನಡಿಗರ ನೆಚ್ಚಿನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ‘ನಮೋ ಭೂತಾತ್ಮ 2’ ಸಿನಿಮಾದ ಟೀಸರ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.
‘ನಮೋ ಭೂತಾತ್ಮ’ ಸಿನಿಮಾದಲ್ಲಿ ಕೋಮಲ್ ಅವರ ಜೊತೆಗೆ ಹರೀಶ್ ರಾಜ್, ಐಶ್ವರ್ಯ ಮೆನನ್, ಅವಿನಾಶ್ ಮುಂತಾದ ಪ್ರಖ್ಯಾತ ಕಲಾವಿದರು ನಟಿಸಿದ್ದರು. ಈ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ, ಸಿನಿಮಾ ಯಾವಾಗ ಬಿಡುಗಡೆಯಗುತ್ತದೆ ಎಂದು ಕಾದು ನೋಡಬೇಕಿದೆಯಷ್ಟೇ. ಸದ್ಯ ಧ್ರುವ ಸರ್ಜಾ ಅವರಿಂದ ಬಿಡುಗಡೆ ಕಾಣಲಿರುವ ‘ನಮೋ ಭೂತಾತ್ಮ 2’ ಚಿತ್ರದ ಟೀಸರ್ ಜುಲೈ 1ರಿಂದ ‘A2 ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಾಗಿರಲಿದೆ.

