HomeNewsಬಹುನಿರೀಕ್ಷಿತ ಸಂಜು ವೆಡ್ಸ್ ಗೀತಾ 2 ಬಗ್ಗೆ ತಮ್ಮ ಮನದಾಳ ಬಿಚ್ಚಿಟ್ಟ ನಿರ್ದೇಶಕ ನಾಗಶೇಖರ್!

ಬಹುನಿರೀಕ್ಷಿತ ಸಂಜು ವೆಡ್ಸ್ ಗೀತಾ 2 ಬಗ್ಗೆ ತಮ್ಮ ಮನದಾಳ ಬಿಚ್ಚಿಟ್ಟ ನಿರ್ದೇಶಕ ನಾಗಶೇಖರ್!

ಸುಮಾರು ಹತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿ, ಜನಮನ ಗೆದ್ದಂತಹ ಪ್ರೇಮಕತೆ ಸಂಜು ವೆಡ್ಸ್ ಗೀತಾ. ನಾಗಶೇಖರ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀನಗರ್ ಕಿಟ್ಟಿ ಹಾಗು ಮೋಹಕ ತಾರೆ ರಮ್ಯಾ ಅವರು ಜೋಡಿಯಾಗಿ ನಟಿಸಿ ಕನ್ನಡಿಗರ ಮನದಲ್ಲಿ ಸಂಜು ಹಾಗು ಗೀತಾ ಆಗಿ ಶಾಶ್ವತವಾಗಿ ನೆಲೆಸಿದ್ದರು. ಇದೀಗ ಅದೇ ನಿರ್ದೇಶಕ ನಾಗಶೇಖರ್ ಅವರು ಮತ್ತೆ ಸಂಜು ಹಾಗು ಗೀತಾಳ ಪ್ರೇಮಕತೆಯನ್ನ ಹೇಳಲು ಹೊರಟಿದ್ದಾರೆ. ಆದರೆ ಅದು ಈಗಿನ ಪ್ರೇಕ್ಷಕರಿಗೆ ಸರಿಹೊಂದುವಂತೆ.

ನಾಯಕನಾಗಿ ಕಿಟ್ಟಿ ಅವರೇ ನಟಿಸುತ್ತಿದ್ದರೆ, ನಾಯಕಿ ರಮ್ಯಾ ಅವರ ಬದಲಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಬಣ್ಣ ಹಚ್ಚಲಿದ್ದಾರೆ. ಜೊತೆಗೆ ವರುಷಗಳು ಕಳೆದರೂ ನೆನಪಿನಲ್ಲೇ ಉಳಿವಂತಹ ಮಧುರವಾದ ಹಾಡುಗಳನ್ನ ನೀಡಿದ ಜೆಸ್ಸಿ ಗಿಫ್ಟ್ ಅವರ ಬದಲಾಗಿ ಈ ಬಾರೀ ವಿ ಶ್ರೀಧರ್ ಅವರು ಚಿತ್ರಕ್ಕೆ ಸಂಗೀತ ತುಂಬಲಿದ್ದಾರೆ. ಈ ಪ್ರಮುಖ ಬದಲಾವಣೆಗಳು ಹಾಗು ಚಿತ್ರದ ಇನ್ನಿತರ ಕುತೂಹಲಕಾರಿ ವಿಚಾರಗಳ ಬಗ್ಗೆ ನಾಗಶೇಖರ್ ಹಂಚಿಕೊಂಡಿದ್ದಾರೆ.

• ಸಂಜು ವೆಡ್ಸ್ ಗೀತಾದಲ್ಲಿ ರಮ್ಯಾ ಅವರೇ ಗೀತಾ ಆಗಿ ಜನರ  ಮನದಲ್ಲಿ ಉಳಿದಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅವರು   ಇರುವುದಿಲ್ಲ. ಅವರನ್ನ ಕರೆತರುವ ಪ್ರಯತ್ನ ಮಾಡಲಿಲ್ಲವಾ? ಯಾಕೆ?

– ಸತ್ಯ, ನನಗೂ ಈ ಪಾತ್ರಕ್ಕೆ ಮೊದಲು ಹೊಳೆದದ್ದೇ ರಮ್ಯಾ ಅವರು. ಮೊದಲ ಸಿನಿಮಾದಲ್ಲಿನ ಅವರ ಪಾತ್ರದ ಛಾಪು ಅಂತದ್ದು. ಈ ಸಾರಿಯೂ ಕೂಡ ಅವರನ್ನ ತಲುಪುವ ಪ್ರಯತ್ನ ಮಾಡಿದೆ. ಆದರೆ ಅದು ಆಗಲಿಲ್ಲ. ಅವರು ವಿದೇಶದಲ್ಲಿದ್ದರು. ಅಷ್ಟೇ ಅಲ್ಲದೇ, ನನಗೆ ಈ ಮಳೆಗಾಲದಲ್ಲೆ ಚಿತ್ರೀಕರಣ ಆರಂಭಿಸಬೇಕು. ಆದರೆ ಈ ಸಮಯಕ್ಕೆ ರಮ್ಯಾ ಅವರು ಸಿಗುವುದು ಕಷ್ಟವಿದೆ. ಅವರು ರಾಜಕೀಯಕ್ಕೆ ಇಳಿದಿದ್ದಾರೆ. ಚುನಾವಣೆ ಎದುರಾಗುತ್ತದೆ. ಹಾಗಾಗಿ ಈ ಎಲ್ಲದರ ನಡುವೆ ಅವರು ಈ ಸಿನಿಮಾದಲ್ಲಿ ಕೆಲಸ ಮಾಡುವುದು ಕಷ್ಟ ಆಗಬಹುದು ಎಂಬ ಆಲೋಚನೆ ಬಂತು. ಅದಕ್ಕೆ ಸುಮ್ಮನಾದೆವು.• ಸಂಜು ವೆಡ್ಸ್ ಗೀತಾ 2 ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಈ ಸಿನಿಮಾ ಹೇಗಿರುತ್ತದೆ ಸರ್? ಇದಕ್ಕೂ ಮೊದಲ ಸಿನಿಮಾಗೂ ಏನಾದರೂ ಲಿಂಕ್ ಇರುತ್ತದಾ?

– ಲಿಂಕ್ ಬಗ್ಗೆ ಈಗಲೇ ಹೇಳೋದು ಬೇಡ. ಅದು ಸಸ್ಪೆನ್ಸ್ ನಲ್ಲೇ ಇರಲಿ. ಇನ್ನು ಈ ಸಿನಿಮಾದ ಬಗ್ಗೆ ಹೇಳೋದಾದರೆ, ಇದರಲ್ಲಿನ ಲವ್ ಸ್ಟೋರಿ ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಅಂದರೇ ಒಂದೇ ಪ್ರೇಮಕತೆ ಹತ್ತು ವರ್ಷಗಳ ಅಂತರದಲ್ಲಿ. ಕೊಂಚ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದೇವೆ. ನನ್ನ ಸ್ನೇಹಿತರ ಜೊತೆಗೆ ಸೇರಿ ನಾನೇ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದೇನೆ.

• ನಾಗಶೇಖರ್ ಅವರ ಸಿನಿಮಾಗಳೆಂದರೆ ಅಲ್ಲಿನ ಹಾಡುಗಳು ಸೂಪರ್ ಹಿಟ್ ಆಗುವಂತದ್ದು. ಸಂಜು ವೆಡ್ಸ್ ಗೀತಾ ಚಿತ್ರದ ಹಾಡುಗಳು ಕೂಡ ಅಷ್ಟೇ ಈಗಲೂ ಎಲ್ಲರ ಬಾಯಲ್ಲಿ ಬಂದುಹೋಗುತ್ತಿರುತ್ತದೆ. ಆದರೆ ಈ ಬಾರಿ ಜೆಸ್ಸಿ ಗಿಫ್ಟ್ ಇಲ್ಲ ಅಂತಿದೀರಾ. ಈ ಸಿನಿಮಾದ ಹಾಡುಗಳು ಹೇಗಿರುತ್ತವೆ ಸರ್?

– ನಾನು ಮೊದಲು ಸಂಗೀತ ಸೆಟ್ ಆದಮೇಲೆನೇ ಸಿನಿಮಾದ ಇತರ ಕೆಲಸಗಳಿಗೆ ಕೈ ಹಾಕುವುದು. ನನಗೆ ಸಂಗೀತ ತುಂಬಾ ಇಷ್ಟ. ನನ್ನ ಸಿನಿಮಾಗಳಲ್ಲೂ ಕೂಡ ಸಂಗೀತ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ವಿ ಶ್ರೀಧರ್ ಹಾಗು ನಾನು ಕೂತು ಇದರ ಸಂಗೀತ ಸಿದ್ದಪಡಿಸಿದ್ದೇವೆ. ಇಲ್ಲಿನ ಹಾಡುಗಳು ಕೂಡ ಮೊದಲ ಸಿನಿಮಾದ ಮಟ್ಟದಲ್ಲೇ ಇರುತ್ತದೆ ಎಂಬ ನಂಬಿಕೆಯಿದೆ. ಜೆಸ್ಸಿ ಗಿಫ್ಟ್ ಅವರು ನಮಗೆ ಬೇಕಾದ ಸಮಯ ನೀಡಲು ಆಗುತಿರಲಿಲ್ಲ. ವಿ ಶ್ರೀಧರ್ ಅವರು ಕೂಡ ಪ್ರತಿಭಾನ್ವಿತರು. ಹಾಗಾಗಿ ಅವರನ್ನ ಸೇರಿಸಿಕೊಂಡಿದ್ದೇವೆ. ಕಿಟ್ಟಪ್ಪ(ಶ್ರೀನಗರ್ ಕಿಟ್ಟಿ)ನಿಗೂ ಕೂಡ ಹಾಡುಗಳ ಬಿಟ್ ಕೇಳಿಸಿದ್ದೇವೆ. ಅವನೂ ತುಂಬಾ ಮೆಚ್ಚಿಕೊಂಡಿದ್ದಾನೆ.• ಶ್ರೀನಗರ ಕಿಟ್ಟಿ ಅವರ ಲುಕ್ ಇದರಲ್ಲಿ ಹೇಗಿರತ್ತೆ ಸರ್?
– ಈ ಬಾರಿ ಕಿಟ್ಟಪ್ಪ ಒಬ್ಬ ಶ್ರೀಮಂತ ಬಿಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಾನೆ. ಬ್ರಾಂಡೆಡ್ ಸೂಟು ಬೂಟುಗಳನ್ನು ಹಾಕಿಕೊಂಡು ಸ್ಟೈಲ್ ಆಗಿ ಕಾಣಿಸಿಕೊಳ್ಳುತ್ತಾನೆ.

• ಸಿನಿಮಾಗೆ ರಚಿತಾ ರಾಮ್ ಅವರನ್ನ ಕೇಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು? ಹೇಗೆ ಒಪ್ಪಿಕೊಂಡರು?
– ರಚಿತಾ ಅವರು ತುಂಬಾ ಬೇಗನೆ ಒಪ್ಪಿಕೊಂಡರು. ಅವರು ನಮ್ಮ ಸಿನಿಮಾಗಳ ಹಾಡಿಗೆ ಅಪ್ಪಟ ಅಭಿಮಾನಿ. ಮೊದಲು ಕಥೆ ಕೇಳಿದರು. ನಂತರ ಸರ್ ಸಿನಿಮಾದ ಮ್ಯೂಸಿಕ್ ಏನಾದರೂ ತಯಾರಿದ್ದರೆ ಕೇಳಿಸಿ ಎಂದರು. ಹಾಡುಗಳನ್ನ ಕೇಳಿದ ತಕ್ಷಣ ಖುಷಿಯಿಂದ ಒಪ್ಪಿಕೊಂಡರು.

• ಸಂಜು ವೆಡ್ಸ್ ಗೀತಾ 2ಗೆ ನಿಮ್ಮ ತಯಾರಿಗಳು ಹೇಗಿದೆ ಸರ್? ಸಿನಿಮಾ ಯಾವಾಗ ಆರಂಭಿಸುತ್ತೀರಾ?
– ಸಿನಿಮಾದ ಕಥೆ, ಚಿತ್ರಕತೆ, ಸಂಗೀತ, ಸಂಭಾಷಣೆ ಎಲ್ಲವೂ ನಮ್ಮ ಬಳಿ ತಯಾರಿದೆ. ನಮ್ಮ ಛಾಯಾಗ್ರಾಹಕರಾದ ಸತ್ಯ ಹೆಗಡೆ ಅವರು ಈಗಾಗಲೇ ಹೋಗಿ ಒಂದೆರಡು ಲೊಕೇಶನ್ ಗಳನ್ನ ನೋಡಿಕೊಂಡು ಬಂದಿದ್ದಾರೆ. ಇದೇ ಆಗಸ್ಟ್ 15ಕ್ಕೆ ಶೂಟಿಂಗ್ ಪ್ರಾರಂಭಿಸುತ್ತೇವೆ. ಏಪ್ರಿಲ್ 1ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ. ಮೊದಲ ಸಿನಿಮಾ ಕೂಡ ಏಪ್ರಿಲ್ 1ಕ್ಕೆ ಬಿಡುಗಡೆ ಮಾಡಿದ್ದೆವು. ಎಲ್ಲರೂ ಆಡಿಕೊಂಡಿದ್ದರು, ಫೂಲ್ಸ್ ಡೇಗೆ ಬಿಡುಗಡೆ ಮಾಡುತ್ತಿದ್ದೀಯ ಅಂತ. ಆದರೆ ಜನ ಒಳ್ಳೆಯ ಸಿನಿಮಾ ಕೈಬಿಡಲ್ಲ ಅನ್ನೋದು ಖಾತ್ರಿಯಾಗಿತ್ತು. ಈ ಬಾರಿ ಏನಾಗುತ್ತದೋ ನೋಡೋಣ.

• ಚಿತ್ರದ ತಾರಾಗಣದಲ್ಲಿ ಯಾರೆಲ್ಲ ಇರುತ್ತಾರೆ ಸರ್?
– ಸದ್ಯಕ್ಕೆ ಹೀರೋ ಹಾಗು ಹೀರೋಯಿನ್ ಮಾತ್ರ ಖಾತ್ರಿ ಪಡಿಸಿದ್ದೇವೆ. ಇನ್ನು ಇತರ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ರಾಜ್, ರಮ್ಯಾ ಕೃಷ್ಣ ಮುಂತಾದವರನ್ನ ಕೇಳುವ ಆಲೋಚನೆಯಿದೆ. ಜೊತೆಗೆ ಒಂದು ಪ್ರಮುಖ ಪಾತ್ರಕ್ಕೆ ತಮನ್ನಾ ಅವರನ್ನ ಕರೆಸುವ ಆಲೋಚನೆ ಕೂಡ ಇದೆ. ಇದೆಲ್ಲಾ ಇನ್ನು ಯೋಜನೆ ರೂಪದಲ್ಲಷ್ಟೇ ಇದೆ. ಕಾರ್ಯರೂಪಕ್ಕೆ ಸದ್ಯದಲ್ಲೇ ತರುತ್ತೇವೆ.

ಒಟ್ಟಿನಲ್ಲಿ ಸಂಜು ವೆಡ್ಸ್ ಗೀತಾ 2 ಘೋಷಣೆಯಾದಾಗಿನಿಂದ ಬಾರಿ ಸದ್ದು ಮಾಡುತ್ತಿದೆ. ಮೊದಲ ಸಿನಿಮಾದ ಪ್ರಭಾವವೋ ಏನೋ ಈ ಸಿನಿಮಾದ ಮೇಲಂತೂ ಬೆಟ್ಟದಷ್ಟರ ನಿರೀಕ್ಷೆ ಕನ್ನಡಿಗರಿಗೆ ಇದೆ. ನಿರ್ದೇಶಕ ನಾಗಶೇಖರ್ ಅವರು ಕೂಡ ತಮ್ಮ ಸಿನಿಮಾದ ಮೇಲೆ ಅಷ್ಟೇ ಭರವಸೆ ಇಟ್ಟಿದ್ದಾರೆ.

RELATED ARTICLES

Most Popular

Share via
Copy link
Powered by Social Snap