HomeNewsಭಕ್ತರ ಸಮ್ಮುಖದಲ್ಲಿ "ನಾಗಲೋಕ ನಾಗಕನ್ನಿಕೆ ಶ್ರೀ ವಾಸವಿ" ಕಿರುಚಿತ್ರ ಪ್ರಸಾರ

ಭಕ್ತರ ಸಮ್ಮುಖದಲ್ಲಿ “ನಾಗಲೋಕ ನಾಗಕನ್ನಿಕೆ ಶ್ರೀ ವಾಸವಿ” ಕಿರುಚಿತ್ರ ಪ್ರಸಾರ

ಶ್ರೀಕನ್ಯಕಾಪರಮೇಶ್ವರಿ ದೇವಿಯ ಮಹಿಮೆ ಸಾರುವ “ನಾಗಲೋಕ ನಾಗಕನ್ನಿಕೆ ಶ್ರೀ ವಾಸವಿ” ಕಿರುಚಿತ್ರ ಚಿತ್ರ
ಡಿಸೆಂಬರ್ 16 ರಿಂದ ಜನವರಿ 3ರ ನಡೆಯುತ್ತಿರುವ ಬ್ರಹ್ಮೋತ್ಸವದಲ್ಲಿ ಪ್ರೊಜೆಕ್ಟರ್‌ ಮೂಲಕ ಪ್ರಸಾರವಾಗುತ್ತಿದೆ.

ಶ್ರೀಕನ್ಯಕಾಪರಮೇಶ್ವರಿ ಮಾತೆಯ ಭಕ್ತರು ವಿಶ್ವದೆಲ್ಲೆಡೆ ಇದ್ದಾರೆ. ಬೆಂಗಳೂರಿನಲ್ಲೂ ಮಾತೆಯ ಅನೇಕ ದೇವಸ್ಥಾನಗಳಿದೆ. ಅದರಲ್ಲೂ ಮಲ್ಲೇಶ್ವರ 8 ನೇ ಕ್ರಾಸ್ ನಲ್ಲಿರುವ ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನ ಅಪಾರ ಭಕ್ತರನ್ನು ಹೊಂದಿರುವ ಪರಮಪವಿತ್ರ ದೇವಸ್ಥಾನ.

ಕಳೆದ ಇಪ್ಪತ್ತು ವರ್ಷಗಳಿಂದ ಅದ್ದೂರಿಯಾಗಿ ಬ್ರಹ್ಮ ರಥೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ವಿಶೇಷವೆಂದರೆ “ನಾಗಕನ್ಯೆ ಶ್ರೀವಾಸವಿ” ಎಂಬ ಭವ್ಯ ನಾಗಲೋಕದ ಸೃಷ್ಟಿ. ದೇವಸ್ಥಾನದ ಮಹಾದ್ವಾರದಿಂದಲೇ ಹುತ್ತದೊಳಗೆ ಆಗಮಿಸಿ, ಸುಮಾರು 150 ಅಡಿಗಳ ಉದ್ದದ ಸುರಂಗದೊಳಗೆ ವಿವಿಧ ಸರ್ಪಗಳ ದರ್ಶನ. ಆನಂತರ ನಾಗಕನ್ನಿಕೆಯಾಗಿ ನಿಂತು ಭಕ್ತರನ್ನು ಅನುಗ್ರಹಿಸುವ ತಾಯಿ ವಾಸವಿಯ ದರ್ಶನ.‌ ಅಬ್ಬಾ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ. ಕಲಾ ನಿರ್ದೇಶಕ ವಸಂತ ಎಂ ಕುಲಕರ್ಣಿ ಅವರ ಸಾರಥ್ಯದಲ್ಲಿ ನಿರ್ಮಾಣವಾಗಿದೆ.

ಈ ಬಾರಿಯ ಬ್ರಹ್ಮರಥೋತ್ಸವದ ವಿಶೇಷವೆಂದರೆ “ನಾಗಲೋಕ ನಾಗಕನ್ನಿಕೆ ಶ್ರೀವಾಸವಿ” ಎಂಬ ಐದು ನಿಮಿಷಗಳ ಕಿರು ಚಲನಚಿತ್ರ ನಿರ್ಮಾಣ. ಲಕ್ಕಿ ಶಂಕರ್ ಈ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಜೈ ಆನಂದ್ ಛಾಯಾಗ್ರಾಹಕರಾಗಿದ್ದಾರೆ. ನಿಮಿಕ ರತ್ನಾಕರ್ ವಾಸವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಲಿಂಗು ಶ್ರೀಧರ್, ಪ್ರಸನ್ನ ಗೌಡ ಅಭಿನಯಿಸಿದ್ದಾರೆ. ಜೇಮ್ಸ್ ಅವರ ಸಂಗೀತ ನಿರ್ದೇಶನ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ. ಶಶಾಂಕ್ ಶೇಷಗಿರಿ ಹಾಡೊಂದನ್ನು ಹಾಡಿದ್ದಾರೆ.

ಮಲ್ಲೇಶ್ವರಂ ಆರ್ಯ ವೈಶ್ಯ ಸಂಘದಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿರುತ್ತೇವೆ. ಅಡುಗೆ ಮಾಡಿಕೊಳ್ಳಲು ಆಶಕ್ತರಾಗಿರುವ ನೂರಕ್ಕೂ ಅಧಿಕ ಕುಟುಂಬಕ್ಕೆ ನಮ್ಮ ಸಂಘದಿಂದ ಬೆಳಗ್ಗೆ – ರಾತ್ರಿ ಆಹಾರ ವಿತರಿಸುವುದು. ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಡಯಾಲಿಸಸ್ ಮಾಡಿಸುವುದು ಮುಂತಾದ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದ ಕಾರ್ಯದರ್ಶಿ ಆರ್.ಪಿ.ರವಿಶಂಕರ್ ಅವರು ನಾವು ಪ್ರತಿ ಎರಡು ವರ್ಷಕೊಮ್ಮೆ ನಡೆಯುವ ಬ್ರಹ್ಮೋತ್ಸವದಲ್ಲೂ ಬೇರೆಬೇರೆ ರೀತಿಯ ಕನ್ಸೆಪ್ಟ್ ಮೂಲಕ ದೇವಸ್ಥಾನವನ್ನು ಅಲಂಕರಿಸುತ್ತೇವೆ. ಇದಕ್ಕೆ ಪ್ರಮುಖ ಕಾರಣ ಹದಿನೈದು ವರ್ಷ ಒಳಗಿನ ಮಕ್ಕಳು ದೇವಸ್ಥಾನ ಕ್ಕೆ ಬರುವಂತಾಗಬೇಕು. ಈ ಬಾರಿ ನಾಗಲೋಕದ ಸೆಟ್ ಹಾಕಿಸಿದ್ದೇವೆ. ಜನವರಿ 3 ರ ತನಕ‌‌ ನೋಡಲು ಲಭ್ಯವಿರುತ್ತದೆ. ಎಲ್ಲರೂ ಬನ್ನಿ ಎಂದರು.

ನಾವು ಕಮರ್ಷಿಯಲ್ ಸಿನಿಮಾ ಮಾಡುವ ರೀತಿಯ ಬೇರೆ. ಇದೇ ಬೇರೆ. ತಾಯಿಯ ಕುರಿತಾದ ಐದು ನಿಮಿಷಗಳ ಈ ಕಿರು ಚಲನಚಿತ್ರ ವೀಕ್ಷಿಸಿದವರು ಮನಸಾರೆ ಹರಸಿ ಹೋಗುತ್ತಿದ್ದಾರೆ. ನನಗೆ ಇದಕ್ಕಿಂತ ಇನೇನು ಬೇಕು. ಇದು ನನ್ನ ಪುಣ್ಯ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ನಿರ್ದೇಶಕ ಲಕ್ಕಿ ಶಂಕರ್.ವಾಸವಿ ಮಾತೆಯ ಪಾತ್ರದಲ್ಲಿ ಅಭಿನಯಿಸಿರುವುದು ನನ್ನ ಬಹುಜನ್ಮಗಳ ಪುಣ್ಯ. ಈ ಕಿರು ಚಲನಚಿತ್ರ ನೋಡಿದ‌ ಪ್ರತಿಯೊಬ್ಬರೂ ನನ್ನನ್ನು ಗುರುತಿಸುತ್ತಿರುವುದು ಖುಷಿಯಾಗಿದೆ ಎನ್ನುತ್ತಾರೆ ನಿಮಿಕ ರತ್ನಾಕರ್.

ನಟ ಪ್ರಸನ್ನ ಗೌಡ ಸಹ ತಮ್ಮ ಅನುಭವ ಹಂಚಿಕೊಂಡರು.

ಈ ಅದ್ಭುತ ನಾಗಲೋಕ ಸೃಷ್ಟಿಸಲು ಒಂದು ತಿಂಗಳಿಗೂ ಹೆಚ್ಚು ಸಮಯ ಬೇಕಾಯಿತು‌. ಐವತ್ತಕ್ಕೂ ಅಧಿಕ ಕಲಾವಿದರು ಇದಕ್ಕಾಗಿ ಕೆಲಸ ಮಾಡಿದ್ದಾರೆ ಎಂದರು ಕಲಾ ನಿರ್ದೇಶಕ ವಸಂತ ಎಂ ಕುಲಕರ್ಣಿ.

ಛಾಯಾಗ್ರಾಹಕ ಜೈಆನಂದ್ ಸಹ ಕಿರು ಚಲನಚಿತ್ರದ ಬಗ್ಗೆ ಮಾತನಾಡಿದರು. ಮಲ್ಲೇಶ್ವರಂ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಗೋವಿಂದರಾಜು ಅವರು ಸೇರಿದಂತೆ ಅನೇಕ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

RELATED ARTICLES

Most Popular

Share via
Copy link
Powered by Social Snap