HomeNewsಕನ್ನಡ, ಹಿಂದಿ ಮಾತ್ರವಲ್ಲದೆ ಇಂಗ್ಲೀಷ್ ನಲ್ಲೂ ಬರಲಿದೆ ಹೊಸ ಸಿನಿಮಾ 'ಮೈ ಹೀರೋ'

ಕನ್ನಡ, ಹಿಂದಿ ಮಾತ್ರವಲ್ಲದೆ ಇಂಗ್ಲೀಷ್ ನಲ್ಲೂ ಬರಲಿದೆ ಹೊಸ ಸಿನಿಮಾ ‘ಮೈ ಹೀರೋ’

ಚಂದನವನದಲ್ಲಿ ಪ್ರತಿದಿನವೂ ಹೊಸ ರೀತಿಯ ಸಿನಿಮಾಗಳು ಬರುತ್ತಲೇ ಇವೆ. ಬರೀ ಆಕ್ಷನ್, ಪ್ರೇಮಕತೆ ಎನ್ನುತ್ತಿದ್ದ, ಪ್ರೇಕ್ಷಕರು ಇದೀಗ ಹೊಸ ರೀತಿಯ ಪ್ರಯತ್ನಗಳಿಗೆ, ಹೊಸ ವಿಚಾರಗಳಿಗೆ ತಲೆದೂಗುತ್ತಲಿದ್ದಾರೆ. ಅದಕ್ಕೆ ಸರಿಯಾಗಿ ಸಿನಿರಂಗದವರು ಕೂಡ ಹೊಂದಿಕೊಂಡು ಹೋಗುತ್ತಿದ್ದಾರೆ. ಅಂತೆಯೇ ಹೊಸದೊಂದು ಕಂಟೆಂಟ್ ಅವಲಂಬಿತ ಕನ್ನಡ ಸಿನಿಮಾ ಚಾಲನೆ ಪಡೆದುಕೊಂಡಿದೆ. ಅದುವೇ ಅವಿನಾಶ್ ವಿಜಯ್ ಕುಮಾರ್ ಎಂಬ ಯುವನಿರ್ದೇಶಕರ ಹೊಸ ಚಿತ್ರ ‘ಮೈ ಹೀರೋ’. ವಿಶೇಷವೆಂದರೆ ಈ ಚಿತ್ರ ಕನ್ನಡ, ಹಿಂದಿ ಮಾತ್ರವಲ್ಲದೆ ಇಂಗ್ಲೀಷ್ ಭಾಷೆಯಲ್ಲೂ ಬರಲಿದೆಯಂತೆ. ಜೊತೆಗೆ ಮುಂದೆ ಬೇರೆ ಭಾಷೆಗಳಲ್ಲೂ ಸಿದ್ದಪಡಿಸುವ ಆಲೋಚನೆಯಿದೆ ಎಂದಿದ್ದಾರೆ ನಿರ್ದೇಶಕರು.

ಬಸವನಗುಡಿಯ ರೇಣುಕಾದೇವಿ ಸನ್ನಿಧಿಯಲ್ಲಿ ಮುಹೂರ್ತ ಮುಗಿಸಿಕೊಂಡ ‘ಮೈ ಹೀರೋ’ ಸಿನಿಮಾ, ಹಿರಿಯ ನಟ ದತ್ತಣ್ಣ ಅವರಿಂದ ಕ್ಯಾಮೆರಾ ಚಾಲನೆ ಹಾಗು, ಮಹಾಲಕ್ಷ್ಮಿ ಅವರಿಂದ ಮೊದಲ ದೃಶ್ಯಕ್ಕೆ ಕ್ಲಾಪ್ ಪಡೆದುಕೊಂಡಿದೆ. ಈ ವೇಳೆ ಮಾತನಾಡಿದ ನಿರ್ದೇಶಕ ಅವಿನಾಶ್ ಅವರು, “ನಾನು ರಂಗಭೂಮಿ ಮೂಲದವನು. ಸ್ಯಾನ್ ಫ್ರಾನ್ಸಿಸ್ಕೋ ಸ್ಕೂಲ್ ನಲ್ಲಿ ನಿರ್ದೇಶನದ ಬಗ್ಗೆ ಹಾಗು ಮುಂಬೈ ನ ಅನುಪಮ್ ಖೇರ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯ ಬಗೆಗಿನ ತರಬೇತಿ ಪಡೆದಿದ್ದು, ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ವಿದೇಶದಿಂದ ಬರುವ ಅಧಿಕಾರಿಗೆ ಇಲ್ಲಿನ ಒಬ್ಬ ಪುಟ್ಟ ಹುಡುಗನ ಪರಿಚಯವಾಗುತ್ತದೆ. ಮುಂದೆ ಅವರಿಬ್ಬರ ಜೀವನದ ಸುತ್ತಲೇ ಕಥೆ ಸುತ್ತುತ್ತದೆ. ಹಾಲಿವುಡ್ ನಟ ಜಿಲಾಲಿ ರಾಜ್ ಕಲ್ಲಾಹ್ ಹಾಗು ಬಾಲನಟನಾಗಿ ವೇದಿಕ್ ಕೌಶಿಕ್ ಅವರು ಕಥೆಯ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಲಿದ್ದಾದ್ದಾರೆ. ಇನ್ನೂ ಹೆಸರಾಂತ ನಟರಾದ ದತ್ತಣ್ಣ, ಪ್ರಕಾಶ್ ಬೆಳವಾಡಿ, ನಿರಂಜನ್ ದೇಶಪಾಂಡೆ ಅವರು ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಆರಂಭವಾಗುವ ಸಿನಿಮಾದ ಚಿತ್ರೀಕರಣವನ್ನ, ಮಧ್ಯಪ್ರದೇಶ ಹಾಗು ಅಮೇರಿಕಾದಲ್ಲೂ ನಡೆಸುವ ಆಲೋಚನೆ ಇದೆ. ಎರಡು ಕನ್ನಡ ಹಾಗು ಒಂದು ಇಂಗ್ಲೀಷ್ ಗೀತೆಗಳು ಇರುವ ಈ ಸಿನಿಮಾಗೆ ಗಗನ್ ಬಡೇರಿಯ ಅವರು ಸಂಗೀತ ನೀಡಲಿದ್ದಾರೆ. ಕುಮಾರ್ ಗೌಡ ಅವರ ಛಾಯಾಗ್ರಹಣ, ನನ್ನ ಹಾಗು ಮುತ್ತುರಾಜ್ ಅವರ ಬರವಣಿಗೆ, ಜೆಮ್ ಶಿವು ಅವರ ಸಂಭಾಷಣೆ ಚಿತ್ರದಲ್ಲಿರಲಿದೆ. ಇವರಷ್ಟೇ ಅಲ್ಲದೇ ಹಾಲಿವುಡ್ ನ ತಂತ್ತಜ್ಞರು ಕೂಡ ನಮ್ಮ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ‘ಎ ವಿ ಸ್ಟುಡಿಯೋಸ್’ ಎಂಬ ನಮ್ಮದೇ ಬ್ಯಾನರ್ ಅಡಿಯಲ್ಲಿ ‘ಮೈ ಹೀರೋ’ ಸಿನಿಮಾವನ್ನ ನಿರ್ಮಾಣ ಮಾಡಲಿದ್ದೇವೆ ” ಎಂದಿದ್ದಾರೆ.

ಇನ್ನು ಚಿತ್ರದಲ್ಲಿ ನಟಿಸಿರುವ ಹಾಲಿವುಡ್ ನಟ ಜಿಲಾಲಿ ರಾಜ್ ಕಲ್ಲಾಹ್ ಅವರು ಮಾತನಾಡಿ, “ನನ್ನದು ಕೂಡ ರಂಗಭೂಮಿ ಹಿನ್ನೆಲೆ. ಸುಮಾರು ಹದಿನೈದಕ್ಕೂ ಹೆಚ್ಚು ಸಿನಿಮಾಗಳು ಹಾಗು ಕೆಲವು ವೆಬ್ ಸೀರೀಸ್ ಗಳಲ್ಲಿ ನಾನು ನಟಿಸಿದ್ದೇನೆ. ನಿರ್ದೇಶಕರು ಈ ಸಿನಿಮಾದ ಕಥೆ ಹೇಳಿದಾಗ ನನಗೆ ತುಂಬ ಇಷ್ಟವಾಯಿತು. ಜೊತೆಯಲ್ಲಿ ಚಿತ್ರದಲ್ಲಿನ ನನ್ನ ಪಾತ್ರ ಕೂಡ ಅದ್ಭುತವಾಗಿದೆ” ಎನ್ನುತ್ತಾರೆ.

“ಇದೊಂದು ಸಾಮಾಜಿಕ ಸಮಸ್ಯೆಯ ಬಗ್ಗೆ ಧ್ವನಿಯೆತ್ತುವ ಸಿನಿಮಾ. ಕರ್ನಾಟಕವೋ, ಭಾರತವೋ ಮಾತ್ರವಲ್ಲದೆ ಪ್ರಪಂಚವೇ ಎದುರಿಸುತ್ತಿರುವ ಒಂದು ಸಾಮಾಜಿಕ ಕಳಕಳಿಯ ಬಗ್ಗೆ ಈ ಸಿನಿಮಾದ ಕಥೆ ಇರಲಿದೆ. ಕನ್ನಡದ ಜೊತೆಗೆ ಹಿಂದಿ ಹಾಗು ಇಂಗ್ಲೀಷ್ ಭಾಷೆಗಳಲ್ಲೂ ಚಿತ್ರವನ್ನ ಬಿಡುಗಡೆ ಮಾಡುತ್ತೇವೆ. ಜೊತೆಗೆ ಇತರ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ” ಎನ್ನುತ್ತಾರೆ ನಿರ್ದೇಶಕರು. ಮುಹೂರ್ತದ ಸಂಧರ್ಭ, ದತ್ತಣ್ಣ, ಪ್ರಕಾಶ್ ಬೆಳವಾಡಿ, ಗಗನ್ ಬಡೇರಿಯ ಹಾಗು ನಿರಂಜನ್ ದೇಶಪಾಂಡೆ ಅವರು ಕೂಡ ಉಪಸ್ಥಿತರಿದ್ದರು.

RELATED ARTICLES

Most Popular

Share via
Copy link
Powered by Social Snap