ವಿಭಿನ್ನ ಕಥಾಹಂದರವನ್ನು ಇಟ್ಟುಕೊಂಡು ‘ಮೊದಲ ಮಳೆ’ ಎಂಬ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
ಯಾವ ಹುಡುಗಿಯೂ ಇಷ್ಟಪಡದಂಥ ವಿರೂಪವಂತ ಹುಡುಗನೊಬ್ಬ ಮದುವೆಯಾಗಲು ಹೊರಟಾಗ ಏನೇನಾಯಿತು ಎಂಬುದನ್ನು ಹಾಸ್ಯಮಯ ವಾಗಿ ಹೇಳುವಂಥ ಕಥಾಹಂದರವನ್ನು ಚಿತ್ರವೇ ಮೊದಲಮಳೆ ಒಳಗೊಂಡಿದೆ.
ಇದೊಂದು ಮರ್ಡರ್ ಮಿಸ್ಟ್ರಿ, ಕಾಮಿಡಿ, ಹಾರರ್ ಕಥೆಯನ್ನೊಳಗೊಂಡ ಸಿನಿಮಾ. ನಾಯಕ ನಟನಾಗಿ ರಾಜಾಸಿಂಹ ಕಾಣಿಸಿಕೊಂಡಿದ್ದು, ಅವರೇ ಬಂಡವಾಳವನ್ನು ಹಾಕಿದ್ದಾರೆ.
ಇತ್ತೀಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಈ ವೇಳೆ ಮಾತಾನಾಡಿದ ನಾಯಕ ನಟ ರಾಜಾಸಿಂಹ ‘ “ನಾನೊಬ್ಬ ರೈತನಮಗ, ಆಕ್ಟರ್ ಆಗಬೇಕು ಎನ್ನುವುದು ನನ್ನ ಕನಸು. ಒಂದು ಸಿನಿಮಾ ಮಾಡಲುಹೋಗಿ ಮೋಸಹೋದೆ. ಈಗ ನಾನೇ ನಿರ್ಮಾಪಕ ಹಾಗೂ ನಾಯಕನಾಗಿ ಈ ಚಿತ್ರ ಮಾಡಿದ್ದೇನೆ. ಏನೋ ಸಾಧನೆ ಮಾಡಲು ಹಳ್ಳಿಯಿಂದ ಬಂದ ಜವರಾಯ ಕೊನೆಗೆ ಏನಾದ ಎನ್ನುವುದೇ ಈ ಚಿತ್ರದ ಕಥೆ ಎಂದರು.
ನಿರ್ದೇಶಕ ರಾಜಶರಣ್ ಮಾತನಾಡಿ, ಹಿಂದೆ ಎಮ್ಮೆತಮ್ಮ ಎಂಬ ಚಿತ್ರ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ರಾಜಾನರಸಿಂಹ ೫ ವರ್ಷದ ಸ್ನೇಹಿತರು, ಅವರಿಗಾಗಿಯೇ ಒಂದು ಕಥೆ ಮಾಡಿದೆ, ಆ ಚಿತ್ರ ಆಗಲಿಲ್ಲ, ಇವರುಗೇನು 11 ಜನ ಹೀರೋಯಿನ್ ಇಟ್ಕೊಂಡು ಮಾಡಕ್ಕಾಗುತ್ತಾ ಎನ್ನುವ ಮಾತು ಬಂತು. ಯಾಕಾಗಲ್ಲ ಅಂತ ಚಾಲೆಂಜ್ ತಗೊಂಡು ಈ ಚಿತ್ರ ಮಾಡಿದ್ದೇನೆ, ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಮೊದಲಮಳೆ ಇದ್ದಹಾಗೆ, ನಾಯಕನ ಲೈಫ್ ನಲ್ಲೂ ಮೊದಲಮಳೆ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರ. ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಸುತ್ತಮುತ್ತ 40 ದಿನ ಚಿತ್ರೀಕರಣ ನಡೆಸಿದ್ದೇವೆ. ಹಾರರ್ ಕಂಟೆಂಟ್ ಇರುವ ಕಾರಣ ಚಿತ್ರಕ್ಕೆ ಯು/ಎ ಸಿಕ್ಕಿದೆ ಎಂದು ಹೇಳಿದರು. ಉಳಿದಂತೆ ನಟ ಗಣೇಶರಾವ್, ಜೋತಿ ಮರೂರು, ರಾಜ್ ಅಲ್ಲದೆ ಹಾಜರಿದ್ದ ನಾಲ್ವರು ನಾಯಕಿಯರು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ಮಮತಾಗೌಡ, ಸಾಹಿತ್ಯ, ಉಷಾ, ಪ್ರಿಯಾಶೆಟ್ಟಿ, ಸೇರಿದಂತೆ ಒಂಭತ್ತು ಜನ ನಾಯಕಿಯರಾಗಿ ಅಭಿನಸಿರುವ ಈ ಚಿತ್ರಕ್ಕೆ ರಾಜಶರಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಸನ್ನ ಭೋಜಶೆಟ್ಟರ್ ಅವರ ಸಂಗೀತ ಸಂಯೋಜನೆ, ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

