ಯಾವುದೇ ಹುಡುಗನಾಗಲಿ, ಹುಡುಗಿಯಾಗಲಿ ಮದುವೆ ಎಂಬುದು ಒಬ್ಬರ ಬದುಕಿನ ಬಹುಮುಖ್ಯ ಅಂಗ. ಇಂತದರಲ್ಲಿ ಯಾರಿಗೂ ಬೇಡದ, ಯಾರು ಇಷ್ಟ ಪಡದಂತಹ ವಿರೂಪದ ಹುಡುಗನೊಬ್ಬನನ್ನ ಮದುವೆಯಾಗುವ ನಿರ್ಧಾರ ಮಾಡಿದರೆ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನ ತುಂಬಾ ಹಾಸ್ಯಮಯವಾಗಿ ಅಷ್ಟೇ ಮನರಂಜನಾತ್ಮಕವಾಗಿ ತೋರಿಸುವ ಚಿತ್ರವೇ ‘ಮೊದಲ ಮಳೆ’. ವಿಶೇಷವೆಂದರೆ ಈ ಚಿತ್ರದಲ್ಲಿರುವುದು ಬರೋಬ್ಬರಿ ಒಂಬತ್ತು ನಾಯಕಿಯರು! ಸದ್ಯ ಈ ಸಿನಿಮಾ ಇದೇ ಜೂನ್ 23ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ರಾಜಾನರಸಿಂಹ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾವನ್ನ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ರಾಜಾಶರಣ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡುವ ನಾಯಕ ನಿರ್ಮಾಪಕ ರಾಜಾನರಸಿಂಹ ಅವರು, “ನಾನೊಬ್ಬ ರೈತನ ಮಗ. ಕಲಾವಿದನಾಗಬೇಕು ಎಂಬ ಕನಸು ನನ್ನಲ್ಲಿ ಮೊದಲಿನಿಂದಲೂ ಇತ್ತು. ಈ ಚಿತ್ರವನ್ನು ನಾನೇ ನಿರ್ಮಾಣ ಮಾಡಿದ್ದು, ಜೊತೆಗೆ ನಾಯಕ ‘ಜವರಾಯ’ ಎಂಬ ಪಾತ್ರದಲ್ಲಿ ಕೂಡ ನಟಿಸಿದ್ದೇನೆ. ನಟಿಸಿದ್ದೇನೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಲೆಂದು ಹಳ್ಳಿಯಿಂದ ಸಿಟಿಗೆ ಬಂದ ನಾಯಕನ ಪಾತ್ರ ಕೊನೆಗೆ ಏನಾಗುತ್ತಾನೆ ಎಂಬುದನ್ನು ಮನರಂಜನಾತ್ಮಕವಾಗಿ ನಮ್ಮ ‘ಮೊದಲ ಮಳೆ’ ಚಿತ್ರದಲ್ಲಿ ಹೇಳಲಾಗಿದೆ” ಎಂದರು.


ಈ ಸಿನಿಮಾವನ್ನ ನಿರ್ದೇಶನ ಮಾಡಿರುವುದು ರಾಜಾಶರಣ್ ಅವರು. ಈಗಾಗಲೇ ‘ಎಮ್ಮೆ ತಮ್ಮ’ ಎಂಬ ಸಿನಿಮಾವನ್ನ ನಿರ್ದೇಶನ ಮಾಡಿರುವ ಅನುಭವ ಇವರದ್ದು. ಇವರು ಹಾಗು ನಿರ್ಮಾಪಕರು ಆತ್ಮೀಯ ಸ್ನೇಹಿತರು. ಈ ಬಗ್ಗೆ ಮಾತನಾಡಿದ ಇವರು, “ನಾಯಕ ರಾಜನರಸಿಂಹ ಅವರಿಗಾಗಾಗಿಯೇ ಒಂದು ಕಥೆ ಮಾಡಿದೆ, ಆ ಸಿನಿಮಾ ಸೆಟ್ಟೇರಲಿಲ್ಲ. ಜನ “ಇವರಿಗೇನು ೧೦ ಜನ ಹೀರೋಯಿನ್ ಇಟ್ಕೊಂಡು ಸಿನಿಮ ಮಾಡಕ್ಕಾಗುತ್ತಾ “ಎಂದು ಮಾತನಾಡಲು ಶುರು ಮಾಡಿದರು. ಅದನ್ನೇ ಒಂದು ಸವಾಲಾಗಿ ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇವೆ. ಒಬ್ಬ ಮನುಜನ ಜೀವನದಲ್ಲಿ ಮದುವೆ ಎನ್ನುವುದು ‘ಮೊದಲಮಳೆ’ ಇದ್ದಹಾಗೆ, ನಾಯಕನ ಲೈಫ್ ನಲ್ಲೂ ಮೊದಲಮಳೆ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರ. ಅದಕ್ಕೆ ಈ ಸಿನಿಮಾಗೆ ‘ಮೊದಲಮಳೆ’ ಎಂಬ ಹೆಸರು ನೀಡಿದ್ದೇವೆ. ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಸುತ್ತಮುತ್ತ ೪೦ ದಿನ ಚಿತ್ರೀಕರಣ ನಡೆಸಿದ್ದೇವೆ. ಸ್ವಲ್ಪ ಹಾರರ್ ಅಂಶಗಳು ಕೂಡ ಇರುವ ಕಾರಣ ಸಿನಿಮಾಗೆ ಯು/ಎ ಶ್ರೇಣಿಯನ್ನ ಸೆನ್ಸಾರ್ ಮಂಡಳಿ ನೀಡಿದೆ” ಎಂದಿದ್ದಾರೆ.
ಮಮತಾಗೌಡ, ಸಾಹಿತ್ಯ, ಉಷಾ, ಪ್ರಿಯಾಶೆಟ್ಟಿ ಎಂಬ ಯುವಪ್ರತಿಭೆಗಳು ಸೇರಿ ಒಟ್ಟು ಒಂಬತ್ತು ನಾಯಕಿಯರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗಣೇಶರಾವ್, ಜೋತಿ ಮರೂರು ಮುಂತಾದವರು ಇತರ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರಸನ್ನ ಭೋಜಶೆಟ್ಟರ್ ಅವರ ಸಂಗೀತ ಚಿತ್ರಕ್ಕಿದೆ. ಕಾಮಿಡಿಯ ಜೊತೆಗೆ ಮರ್ಡರ್ ಮಿಸ್ಟ್ರಿ, ಹಾರರ್ ಅಂಶಗಳು ಕೂಡ ಈ ಸಿನಿಮಾದಲ್ಲಿದೆ. ಸದ್ಯ ಈ ಚಿತ್ರ ಇದೇ ಜೂನ್ 23ರಂದು ಬಿಡುಗಡೆಯಾಗಲಿದೆ.

