HomeNewsಸುಂದರ ಸುಮಧುರ ಪ್ರೇಮಕತೆಯನ್ನ ಹೊತ್ತು ಬರುತ್ತಿದೆ 'ಮೆಲೋಡಿ ಡ್ರಾಮಾ'!

ಸುಂದರ ಸುಮಧುರ ಪ್ರೇಮಕತೆಯನ್ನ ಹೊತ್ತು ಬರುತ್ತಿದೆ ‘ಮೆಲೋಡಿ ಡ್ರಾಮಾ’!

ಪ್ರೇಮಕತೆಗಳಿಗೆ, ಪ್ರೀತಿಯಲ್ಲಿ ಬಿದ್ದವರ ತೊಡಲಾಟದ ಕಥೆಗಳಿಗೆ ಬೇಡಿಕೆಯಾಗಲಿ, ಅಭಿಮಾನಿಗಳಾಗಲಿ ಎಂದಿಗೂ ಕಡಿಮೆಯಾಗುವುದಿಲ್ಲ. ಇಂತಹ ಅದೆಷ್ಟೋ ಸಿನಿಮಾಗಳು ಬಂದು, ಎವರ್ಗ್ರೀನ್ ಎಂಬ ಪಟ್ಟಿ ಸೇರಿವೆ. ಇಂತದ್ದೇ ಇನ್ನೊಂದು ಸುಮಧುರ ಪ್ರೇಮಕತೆಯನ್ನ ಒಳಗೊಂಡ ಸಿನಿಮಾ ಇದೀಗ ಬರುತ್ತಿದೆ. ಅದುವೇ ‘ಮೆಲೋಡಿ ಡ್ರಾಮಾ’. ‘ನಿನ್ನ ಕಥೆ ನನ್ನ ಜೊತೆ’ ಎಂಬ ಮನಸೆಳೆಯುವ ಟ್ಯಾಗ್ ಲೈನ್ ಇರುವ ಈ ಸಿನಿಮಾ ಇದೇ ಏಪ್ರಿಲ್ ಗೆ ತೆರೆಮೇಲೆ ಬರುತ್ತಿದೆ.

ಸುಮಾರು 15ವರ್ಷಗಳಿಂದ ಚಿತ್ರರಂಗದ ನಡುವೆಯೇ ಇರುವಂತಹ, ಪಿ ಎನ್ ಸತ್ಯ ಸೇರಿದಂತೆ ಹಲವು ಹೆಸರಾಂತ ನಿರ್ದೇಶಕರ ಜೊತೆಗೆ ಕೆಲಸ ಮಾಡಿರುವ ಅನುಭವವಿರುವ ಮಂಜುಕಾರ್ತಿಕ್ ಜಿ ಎಂಬ ಯುವನಿರ್ದೇಶಕರ ಚೊಚ್ಚಲ ನಿರ್ದೇಶನದಲ್ಲಿ ‘ಮೆಲೋಡಿ ಡ್ರಾಮಾ’ ಮೂಡಿಬರುತ್ತಿದೆ. ‘ದ್ವಿಪಾತ್ರ’ ಎಂಬ ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಸತ್ಯ ಅವರು ಕಥೆಯ ನಾಯಕನಾದರೆ, ಕಿರುತೆರೆಯ ಧಾರವಾಹಿಗಳಿಂದ ಕನ್ನಡಿಗರ ಮನೆಮಗಳಾಗಿರುವ,’ಲಾಂಗ್ ಡ್ರೈವ್’ ಎಂಬ ಸಿನಿಮಾದ ಮೂಲಕ ಬೆಳ್ಳಿತೆರೆಗೂ ಪರಿಚಿತವಾಗಿರುವ ಸುಪ್ರಿತಾ ಸತ್ಯನಾರಾಯಣ ಅವರು ಚಿತ್ರದ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರ ಜೊತೆಯಲ್ಲಿ ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಲ ರಾಜವಾಡಿ, ಅಶ್ವಿನ್ ರಾವ್ ಪಲ್ಲಕ್ಕಿ ಮುಂತಾದ ಹೆಸರಾಂತ ನಟರು ಸಹ ಚಿತ್ರ ತಾರಗಾನದಲ್ಲಿದ್ದಾರೆ. ನಟ ಚೇತನ್ ಚಂದ್ರ ಅವರು ಕೂಡ ವಿಶೇಷ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

ಇನ್ನು ಈ ಸಿನಿಮಾದ ಬಹುಮುಖ್ಯದ ಅಂಶವೆಂದರೆ ಅದು ಇದರ ಹಾಡುಗಳು. ಹೆಸರೇ ಹೇಳುವಂತೆ ‘ಮೆಲೋಡಿ ಡ್ರಾಮಾ’ದ ಹಾಡುಗಳು ಕೂಡ ಕಿವಿಗೆ ಇಂಪಾಗಿರಲಿವೆ. ಹಲವು ವರ್ಷಗಳಿಂದ ಚಂದನವನದಲ್ಲಿರುವ ಕಿರಣ್ ರವೀಂದ್ರನಾಥ್ ಅವರ ಸಂಗೀತದಲ್ಲಿ, ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್, ಧನಂಜಯ್ ರಂಜನ್ ರಂತಹ ಪ್ರಸಿದ್ಧ ಸಾಹಿತ್ಯಗಾರರ ಸಾಲುಗಳನ್ನೊಳಗೊಂಡ ಹಾಡುಗಳಿಗೆ ದೇಶದಾದ್ಯಂತ ಅಭಿಮಾನಿಗಳನ್ನ ಹೊಂದಿರುವಂತಹ ಸೋನು ನಿಗಮ್, ಕೈಲಾಶ್ ಕೇರ್, ಪಾಲಕ್ ಮುಚ್ಚಲ್ ಮುಂತಾದ ಹೆಸರಾಂತ ಗಾಯಕರು ಧ್ವನಿ ನೀಡಿದ್ದಾರೆ. ಎಂ ನಂಜುಂಡ ರೆಡ್ಡಿ ಅವರ ನಿರ್ಮಾಣದಲ್ಲಿ ಸಿದ್ದವಾಗಿರುವ ಈ ಸಿನಿಮಾವನ್ನು ಬೆಂಗಳೂರು, ಮಂಡ್ಯ, ಮೈಸೂರು, ಕುಶಾಲನಗರ, ಮಡಿಕೇರಿ, ಮಂಗಳೂರು, ಕುಂದಾಪುರ ಸೇರಿದಂತೆ ಹಲವು ಕಣ್ಮನ ಸೆಳೆಯುವ ಜಾಗಗಳಲ್ಲಿ ಸುಮಾರು 45ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಚಿತ್ರತಂಡದ ಪ್ರಕಾರ ಏಪ್ರಿಲ್ ಮೊದಲನೇ ವಾರದಲ್ಲಿ ಚಿತ್ರ ತೆರೆಮೇಲೆ ಬರಲಿದ್ದು, ಸಿನಿಮಾದ ಮೊದಲ ಪ್ರತಿ ಸಿದ್ದವಿದ್ದು, ಶೀಘ್ರದಲ್ಲೇ ಸೆನ್ಸರ್ ಮಂಡಳಿಯ ಮುಂದೆ ಸಿನಿಮಾ ಪ್ರದರ್ಶನ ಕಾಣಲಿದೆ. ಹಲವು ಭಾವನೆಗಳು, ಅದರಲ್ಲೂ ಪ್ರೀತಿ, ಪ್ರೇಮ ನಂಬಿಕೆ ವಿಶ್ವಾಸಗಳ ಬಗೆಗೆ ಪ್ರೇಕ್ಷಕರ ಮನದಲ್ಲಿ ಮೂಡುವ ಗೊಂದಲಗಳನ್ನೇ ಹೇಳುವಂತಹ ಈ ಚಿತ್ರ ಸಿನಿರಸಿಕರಿಗೆ ಒಂದೊಳ್ಳೆ ಅನುಭವವಾಗುತ್ತದೆ ಎನ್ನುತ್ತಾರೆ ಚಿತ್ರತಂಡ.

RELATED ARTICLES

Most Popular

Share via
Copy link
Powered by Social Snap