‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜ ಅವರ ಮುಂದಿನ ಚಿತ್ರಕ್ಕೆ ಅವರ ಅಭಿಮಾನಿಗಳೆಲ್ಲರೂ ಅತ್ಯಂತ ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ತಮ್ಮ ಮೊದಲ ಸಿನಿಮಾದ ನಿರ್ದೇಶಕರಾದ ಎ ಪಿ ಅರ್ಜುನ್ ಅವರ ಜೊತೆಗೆ ಸೇರಿ ತಮ್ಮ ಮುಂದಿನ ಸಿನಿಮಾ ‘ಮಾರ್ಟಿನ್’ ಮಾಡುತ್ತಿದ್ದಾರೆ ಎಂದು ತಿಳಿದಾಗ ಸಿನಿರಸಿಕರೆಲ್ಲರಿಗೂ ಅತ್ಯಂತ ಸಂತಸವಾಗಿತ್ತು. ಸುಮಾರು ಒಂದೂವರೆ ವರ್ಷಗಳ ಪರಿಶ್ರಮ, ಚಿತ್ರೀಕರಣದ ನಂತರ ಇದೀಗ ‘ಮಾರ್ಟಿನ್’ ಸಿನಿಮಾದಿಂದ ಮೊದಲ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗಾಗಿಯೇ ಪ್ರೀಮಿಯರ್ ಶೋ ಕೂಡ ಹೊಂದಿದ್ದ ಈ ಟೀಸರ್ ಸದ್ಯ ಎಲ್ಲೆಡೆ ಭಾರೀ ಪ್ರಶಂಸೆ ಪಡೆಯುತ್ತಿದೆ.
ಉದಯ್ ಕೆ ಮೆಹತಾ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ‘ಮಾರ್ಟಿನ್’ ಸಿನಿಮಾದ ಟೀಸರ್ ವಿಜೃಂಭಣೆಯಿಂದ ಕೂಡಿದೆ. ಪ್ರತಿಯೊಂದು ದೃಶ್ಯದಲ್ಲೂ ಕೂಡ ಶ್ರೀಮಂತಿಕೆ ಕಾಣುತ್ತಿದ್ದು, ನೋಡುಗನ ಕಂಗಳಿಗೆ ಸಂತೃಪ್ತಿ ನೀಡುವಂತಿದೆ. ಪಾಕಿಸ್ತಾನ ಎಂದು ತೋರಿಸಿ ಟೀಸರ್ ಆರಂಭವಾಗಿದ್ದು, ಇದೊಂದು ಗೂಢಚಾರಿ ಅಥವಾ ಪಾಕಿಸ್ತಾನದಲ್ಲಿರುವ ಭಾರತೀಯ ಏಜೆಂಟ್ ಬಗೆಗಿನ ಕಥೆಯೇನೋ ಎಂಬ ಸಂಶಯ ಎಲ್ಲರನ್ನು ಕಾಡುತ್ತಿದೆ. ವಿಶೇಷವೆಂದರೆ ಈ ಸಿನಿಮಾಗೆ ಕತೆ ಬರೆದಿರುವುದು ‘ಆಕ್ಷನ್ ಕಿಂಗ್’ ಎಂದೇ ಖ್ಯಾತರಾಗಿರುವ ಅರ್ಜುನ್ ಸರ್ಜಾ ಅವರು. ಟೀಸರ್ ನ ತುಂಬಾ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳೇ ಕಂಡಿದ್ದು, ಒಂದು ಪಕ್ಕಾ ಆಕ್ಷನ್ ಎಂಟರ್ಟೈನರ್ ಸಿನಿಮಾಗೆ ಸಿದ್ದವಾಗಿರಲು ಸಿನಿಪ್ರಿಯರಿಗೆ ಸುಳಿವು ಕೊಟ್ಟಂತಿದೆ. ಈ ಚಿತ್ರಕ್ಕಾಗಿಯೇ ಧ್ರುವ ಸರ್ಜ ಅವರು ತೂಕ ಕೂಡ ಹೆಚ್ಚಿಸಿಕೊಂಡಿದ್ದು, ಧೃಡಕಾಯರಾಗಿ ಸಕತ್ ಮಾಸ್ ಲುಕ್ ನಲ್ಲಿ ಧ್ರುವ ಅವರು ಕಾಣಿಸಿಕೊಳ್ಳುತ್ತಾರೆ.
‘You think you are strong, but I know I am strong’ ಎನ್ನುವ ಧ್ರುವ ಸರ್ಜಾ ಅವರ ಡೈಲಾಗ್ ಅಭಿಮಾನಿಗಳ ಬಾಯಲ್ಲಿ ಗುನುಗುತ್ತಿದೆ. ಮೊದಲಿನಿಂದಲೇ ತಮ್ಮ ಡೈಲಾಗ್ ಗಳಿಗೇ ಹೆಸರಾಗಿರುವ ಧೃವ ಸರ್ಜಾ ಅವರು ‘ಮಾರ್ಟಿನ್’ ಸಿನಿಮಾದ ಮೂಲಕ ತಮ್ಮ ನಟನೆಯಲ್ಲಿನ ಅತ್ಯಂತ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಅವರ ಜೊತೆಯಲ್ಲೇ ವೈಭವಿ ಶಾಂಡಿಲ್ಯ, ಅಚ್ಯುತ್ ಕುಮಾರ್, ಮಾಳವಿಕ ಅವಿನಾಶ್, ಚಿಕ್ಕಣ್ಣ, ನಿಕಿತಿನ್ ಧೀರ್, ಅನ್ವೇಷಿ ಜೈನ್ ಸೇರಿದಂತೆ ಹಲವು ಹೆಸರಾಂತ ನಟರ ದಂಡೇ ಚಿತ್ರದಲ್ಲಿದೆ. ಇನ್ನು ಟೀಸರ್ ನಲ್ಲಿ ಕೇಳಿಬರುವ ರವಿ ಬಸ್ರುರ್ ಅವರ ಹಿನ್ನೆಲೆ ಸಂಗೀತ, ಮೈ ನವೀರೇಳಿಸುವಂತಿದ್ದು, ಆಕ್ಷನ್ ಚಿತ್ರವೊಂದಕ್ಕೆ ಹೇಳಿ ಮಾಡಿಸಿದಂತಿದೆ. ಹಿನ್ನೆಲೆ ಸಂಗೀತದಲ್ಲಿ ತಮ್ಮದೇ ಛಾಪು ಮೂಡಿಸಿರೋ ರವಿ ಬಸ್ರುರ್ ಮತ್ತೊಮ್ಮೆ ತಮ್ಮ ಸಂಗೀತದ ಮೂಲಕ ಇತಿಹಾಸ ಬರೆಯುವಂತಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿ ಶರ್ಮ ಅವರ ಸಂಗೀತವಿರಲಿದೆ.
ಎ ಪಿ ಅರ್ಜುನ್ ಅವರ ನಿರ್ದೇಶನದಲ್ಲಿ ಬಹಳ ಶ್ರೀಮಂತವಾಗಿ, ಅಷ್ಟೇ ಅದ್ಭುತವಾಗಿ ಸಿನಿಮಾ ಮೂಡಿಬಂದಿರೋ ಸಾಧ್ಯತೆಗಳೂ ಟೀಸರ್ ನ ಮೂಲಕ ಎದ್ದು ಕಾಣುತ್ತಿವೆ. ಉದಯ್ ಕೆ ಮೆಹತಾ ಅವರ ‘ವಾಸವಿ ಎಂಟರ್ಪ್ರೈಸಸ್’ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿರುವ ಪಾನ್ ಇಂಡಿಯನ್ ಆಕ್ಷನ್ ಸಾಗ ಆಗಿರಲಿದೆ ‘ಮಾರ್ಟಿನ್’. ಹೆಸರಾಂತ ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಕೈ ಚಳಕ ಕೂಡ ಟೀಸರ್ ನಲ್ಲಿ ಕಾಣಬಹುದು. 2023ರಲ್ಲೇ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ತಿಳಿಸಿದ್ದು, ನಿಗದಿತ ದಿನಕ್ಕೆ ಕಾಯಬೇಕಿದೆಯಷ್ಟೇ.

