HomeExclusive Newsಮೊಟ್ಟಮೊದಲ ಬಾರಿಗೆ ಟೀಸರ್ ಬಿಡುಗಡೆಗೆ ಪ್ರೀಮಿಯರ್ ಶೋ! ಅಭಿಮಾನಿಗಳಿಗೆ ಭಾರೀ ಉಡುಗೊರೆ ಕೊಟ್ಟ 'ಮಾರ್ಟಿನ್'!

ಮೊಟ್ಟಮೊದಲ ಬಾರಿಗೆ ಟೀಸರ್ ಬಿಡುಗಡೆಗೆ ಪ್ರೀಮಿಯರ್ ಶೋ! ಅಭಿಮಾನಿಗಳಿಗೆ ಭಾರೀ ಉಡುಗೊರೆ ಕೊಟ್ಟ ‘ಮಾರ್ಟಿನ್’!

ಧ್ರುವ ಸರ್ಜಾ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಮಾರ್ಟಿನ್’. ಧ್ರುವ ಸರ್ಜಾ ಅವರ ಅಭಿಮಾನಿಗಳು, ಕನ್ನಡ ಸಿನಿರಸಿಕರು ಎಲ್ಲರೂ ಕೂಡ ಹಾತೊರೆದು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಸದ್ಯ ಚಿತ್ರದ ಬಗೆಗಿನ ಹೊಸ ವಿಷಯವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಅದುವೇ ‘ಮಾರ್ಟಿನ್’ ಸಿನಿಮಾದ ಟೀಸರ್ ಬಿಡುಗಡೆಯ ಬಗ್ಗೆ. ಎ ಪಿ ಅರ್ಜುನ್ ಹಾಗು ಧ್ರುವ ಸರ್ಜಾ ಅವರ ಜೋಡಿಯಲ್ಲಿ ಬರುತ್ತಿರುವ ಬಹುನಿರೀಕ್ಷಿತ ‘ಮಾರ್ಟಿನ್’ ಸಿನಿಮಾದ ಟೀಸರ್ ಇದೇ ಫೆಬ್ರವರಿ 23ಕ್ಕೆ ಬಿಡುಗಡೆಯಾಗುತ್ತಿದೆ. ಈ ಬಗೆಗಿನ ಪೋಸ್ಟರ್ ಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಸದ್ಯ ಚಿತ್ರತಂಡ ಟೀಸರ್ ಬಿಡುಗಡೆಯ ಬಗ್ಗೆ ಇನ್ನೊಂದಿಷ್ಟು ವಿಚಾರಗಳನ್ನು ಹೊರಬಿಟ್ಟಿದೆ. ಮೊದಲ ಬಾರಿ ಅಭಿಮಾನಿಗಳಿಗಾಗಿ ಟೀಸರ್ ಬಿಡುಗಡೆಯ ಪ್ರೀಮಿಯರ್ ಶೋ ಮಾಡಲಿದ್ದಾರಂತೆ ‘ಮಾರ್ಟಿನ್’!

ಎ ಪಿ ಅರ್ಜುನ್ ಹಾಗು ಧ್ರುವ ಸರ್ಜಾ ಅವರ ಜೋಡಿಯಲ್ಲಿ ಈ ಹಿಂದೆ ಬಂದಂತಹ ‘ಅದ್ದೂರಿ’ ಸಿನಿಮಾ ಒಂದು ಒಳ್ಳೆ ಪ್ರೇಮಕತೆಯಾಗಿ ಯಶಸ್ಸು ಕಂಡಿತ್ತು. ಈ ಬಾರಿ ಪಕ್ಕ ಆಕ್ಷನ್ ಎಂಟರ್ಟೈನರ್ ಅನ್ನು ಹೊತ್ತು ತಂದಿರುವ ಇವರು ಅಭಿಮಾನಿಗಳ ನಿರೀಕ್ಷೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಸದ್ಯ ‘ಮಾರ್ಟಿನ್’ ಚಿತ್ರತಂಡ ಸುದ್ದಿಗೋಷ್ಟಿಯನ್ನು ಏರ್ಪಡಿಸಿದ್ದು, ನಾಯಕರಾದ ಧ್ರುವ ಸರ್ಜಾ, ನಿರ್ದೇಶಕರಾದ ಎ ಪಿ ಅರ್ಜುನ್, ನಿರ್ಮಾಪಕರಾದ ಉದಯ್ ಕೆ ಮೆಹತಾ, ಹಾಗು ಛಾಯಾಗ್ರಾಹಕರಾದ ಸತ್ಯ ಹೆಗ್ಡೆ ಅವರು ಈ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮಾತನಾಡಿದ ನಿರ್ದೇಶಕರು, “ಸುಮಾರು ಒಂದೂವರೆ ವರ್ಷಗಳ ಕಾಲ ಸತತವಾಗಿ ಕೆಲಸ ಮಾಡಿದ್ದೇವೆ. ನಮ್ಮ ಇಡೀ ತಂಡವೇ ಸೇರಿ ಒಂದೊಳ್ಳೆ ಸಿನಿಮಾವನ್ನು ಜನರ ಮುಂದೆ ಇಡಬೇಕೆಂಬ ಗುರಿಯ ಜೊತೆಗೆ ಕೆಲಸ ಮಾಡಿದ್ದೇವೆ. ನಾವು ಈಗ ಹೆಚ್ಚೇನು ಹೇಳುವುದಿಲ್ಲ. 23ನೇ ತಾರೀಕಿನಂದು ಬಿಡುಗಡೆಯಾಗಲಿರುವ ಟೀಸರ್ ಅನ್ನು ನೀವು ನೋಡುವ ನಂತರವೇ, ನಮ್ಮ ಕೆಲಸದ ಬಗ್ಗೆ ನಿಮಗೆ ತಿಳಿದ ನಂತರವೇ ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ” ಎಂದಿದ್ದಾರೆ.

ಇನ್ನು ವಿಶೇಷತೆಯೆಂದರೆ, ಫೆಬ್ರವರಿ 23ರಂದು ಟೀಸರ್ ಬಿಡುಗಡೆಗೆ ಪೈಡ್ ಪ್ರೀಮಿಯರ್ ಶೋ ಒಂದನ್ನು ಚಿತ್ರತಂಡ ಏರ್ಪಡಿಸಲಿದ್ದಾರೆ. ಅಭಿಮಾನಿಗಳಿಗಾಗಿಯೇ ಇರಲಿರುವ ಈ ಪ್ರೀಮಿಯರ್ ಶೋ, ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಮಾತ್ರ ನಡೆಯಲಿದೆ. ಈ ಶೋ ಸಂಪೂರ್ಣವಾಗಿ ‘ನನ್ನ ವಿಐಪಿ’ಗಳಿಗಾಗಿ ಎನ್ನುತ್ತಾರೆ ಧ್ರುವ ಸರ್ಜಾ. ಚಿತ್ರಮಂದಿರದಲ್ಲಿನ ಬಾಲ್ಕನಿ ಸೀಟುಗಳಿಗೆ 100ರೂ ಹಾಗು ಸೆಕಂಡ್ ಕ್ಲಾಸ್ ಸೀಟುಗಳಿಗೆ 80ರೂ ದರ ಇಡಲಾಗುತ್ತದಂತೆ. ಈ ಪ್ರೀಮಿಯರ್ ಶೋನಲ್ಲಿ ಬಂದಂತಹ ಹಣವನ್ನ ಗೋ ಶಾಲೆಗೆ ನೀಡುವ ನಿರ್ಧಾರವನ್ನ ಚಿತ್ರತಂಡ ತೆಗೆದುಕೊಂಡಿರುವುದು ಇನ್ನು ಸಂತಸದ ಸುದ್ದಿ. ಒಟ್ಟಿನಲ್ಲಿ ಟೀಸರ್ ಬಿಡುಗಡೆಗೂ ಮುನ್ನವೇ ಚಿತ್ರದ ಬಗೆಗೆ ಪರ್ವತದೆತ್ತರದ ನಿರೀಕ್ಷೆ ಹುಟ್ಟಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಸಿನಿಮಾದ ಬಿಡುಗಡೆಯ ಬಗ್ಗೆ ಕೇಳಿದಾಗ, “ಎಲೆಕ್ಷನ್, ಐಪಿಎಲ್, ಎಕ್ಸಾಮ್ ಗಳು ಎಲ್ಲವೂ ಮುಗಿಯಲಿ. ಎಲ್ಲಾ ಜಂಜಾಠಗಳು ಮುಗಿದ ಮೇಲೆಯೇ ನಮ್ಮ ಸಿನಿಮಾದ ಬಿಡುಗಡೆಯ ಬಗ್ಗೆ ಯೋಚನೆ ಮಾಡುತ್ತೇವೆ. ಅಲ್ಲಿಯವರೆಗೆ ಟೀಸರ್ ಅನ್ನು ನೋಡಿಯೇ ಚಿತ್ರದ ಬಗೆಗಿನ ನಿರೀಕ್ಷೆಯನ್ನ ಉಳಿಸಿಕೊಳ್ಳಬೇಕಾಗುತ್ತದೆ” ಎನ್ನುತ್ತಾರೆ ನಿರ್ದೇಶಕರಾದ ಅರ್ಜುನ್. ಚಿತ್ರದ ಕಥೆಯ ಬಗ್ಗೆ ಎಳ್ಳಷ್ಟು ಮಾಹಿತಿಯನ್ನೂ ಕೂಡ ಹೊರಹಾಕದ ಚಿತ್ರತಂಡ, ಎಲ್ಲವೂ ಟೀಸರ್ ಬಿಡುಗಡೆಯ ನಂತರವೇ ನೋಡೋಣ ಎಂದು ಹೇಳಿ ಮೌನವಹಿಸಿದ್ದಾರೆ.

ಚಿತ್ರದ ಹಾಡುಗಳಿಗೆ ಮಣಿ ಶರ್ಮ ಅವರು ಸಂಗೀತ ನೀಡಿದ್ದು, ಹಿನ್ನೆಲೆ ಸಂಗೀತಕ್ಕಾಗಿ ರವಿ ಬಸ್ರುರ್ ಅವರು ‘ಮಾರ್ಟಿನ್’ ತಂಡವನ್ನ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಫೆಬ್ರವರಿ 23ಕ್ಕೆ ವಿಜೃಂಭಣೆಯಿಂದ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಧೃವ ಸರ್ಜಾ ಅವರ ಜೊತೆಗೆ ವೈಭವಿ ಶಾಂಡಿಲ್ಯ ಅವರು ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಪಾನ್ ಇಂಡಿಯನ್ ಸಿನಿಮಾ ಆಗಿರಲಿದೆ.

RELATED ARTICLES

Most Popular

Share via
Copy link
Powered by Social Snap