ತಮ್ಮ ಸಿನಿಮಾದ ಟ್ರೈಲರ್, ಪೋಸ್ಟರ್ ಹಾಗು ಹಾಡುಗಳಿಂದ ಎಲ್ಲೆಡೆ ಸದ್ದು ಮಾಡುತ್ತಿರುವ ಹೊಸಬಗೆಯ ಸಿನಿಮಾ ‘ಮಾರಿಗುಡ್ಡದ ಗಡ್ಡಧಾರಿಗಳು’.ಎಲ್ಲೆಡೆ ವೈರಲ್ ಆಗುತ್ತಾ ಬರುತ್ತಿರುವ ಪ್ರಶಂಸೆಗಳಿಂದ ಸಂತುಷ್ಟಾರಾಗಿರುವ ಚಿತ್ರತಂಡ ರಾಜ್ಯದ ಮೂವತ್ತು ಜಿಲ್ಲೆಗಳಿಗೂ ಭೇಟಿ ಕೊಟ್ಟು ಚಿತ್ರದ ಪ್ರಚಾರ ಕಾರ್ಯ ನಡೆಸುತ್ತಿದೆ. ಸಿನಿಮಾವನ್ನ ಸಲಗ ಸೂರಿಯಣ್ಣ ಅವರು ನಿರ್ಮಾಣ ಮಾಡಿ, ಮುಖ್ಯಪಾತ್ರದಲ್ಲಿ ನಟನೇ ಕೂಡ ಮಾಡಿದ್ದಾರೆ. ಇದೀಗ ಅಂತಿಮವಾಗಿ ಸಿನಿಮಾದ ಪ್ರಚಾರಕ್ಕಾಗಿಯೇ ಮಾಡಿದ ‘ಹುಲಿಯನ ದಂಡು’ ಎಂಬ ಗೀತೆಯನ್ನು ಕುರುಬರಹಳ್ಳಿಯಲ್ಲಿರುವ ಡಾ| ರಾಜಕುಮಾರ್ ಅವರ ಪುತ್ಥಳಿ ಎದುರು ಬಿಡುಗಡೆ ಮಾಡಿದರು. ಈ ಗೀತೆಯನ್ನು ಮ್ಯಾಡಿ ಅವರು ಸಂಗೀತ ನೀಡಿದ್ದು, ಸಿನಿಮಾದ ಕಲಾ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ವಿಶ್ವ ಅವರು ಸಾಹಿತ್ಯ ನೀಡಿ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.


ಈ ವೇಳೆ ಚಿತ್ರದ ಖಡಕ್ ಡೈಲಾಗ್ ಒಂದನ್ನು ಹೇಳಿ ನಂತರ ಮಾತನಾಡಿದ ಸಲಗ ಸೂರಿಯಣ್ಣ, ” ಕಟುಕನಿಗೂ ಒಳ್ಳೆತನ ಇರುತ್ತದೆ ಎಂಬುದನ್ನ ವಿಭಿನ್ನವಾಗಿ, ಹಲವು ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ. ತುಂಬಾ ಇಷ್ಟದಿಂದ ಕಷ್ಟಪಟ್ಟು ಈ ಸಿನಿಮಾ ನಿರ್ಮಾಣ ಮಾಡಿದ್ದೇವೆ. ನಮ್ಮನ್ನು ಬೆಳೆಸಿರಿ” ಎಂದರು. ಇನ್ನು ಪ್ರಚಾರದ ಪ್ರವಾಸದ ಅನುಭವಗಳನ್ನ ಹಂಚಿಕೊಂಡ ನಿರ್ದೇಶಕ ರಾಜೀವ್ ಚಂದ್ರಕಾಂತ್ ಮಾತನಾಡುತ್ತಾ , “ವಿಲನ್ ಗಾಗಿಯೇ ಕಥೆ ಬರೆದಿರುವುದು ಈ ಸಿನಿಮಾದ ವಿಶೇಷ. ಸಿನಿಮಾದ ಒಂದು ಕಡೆಯಲ್ಲಿನ ಕಥೆ ಸುಮಾರು 90ರ ದಶಕದ ಕಾಲಘಟ್ಟದಲ್ಲಿ ನಾವೇ ಹುಟ್ಟಿಸಿದ ಕಾಲ್ಪನಿಕ ಮಾರಿಗುಡ್ಡ ಎಂಬ ಊರಿನಲ್ಲಿ ಕಳ್ಳರಾದ ಗಡ್ಡಧಾರಿಗಳು ಅಲ್ಲಿನ ಜನರ ಹಣ, ಬೆಲೆಬಾಳುವ ವಸ್ತುಗಳನ್ನೆಲ್ಲ ಕದಿಯುತ್ತಿರುವ ಬಗೆಗೆ ಹೇಳಿದರೆ, ಇನ್ನೊಂದು ಕಡೆಯಿಂದ ಒಂದೊಳ್ಳೆ ಪ್ರೇಮಕತೆ ತೆರೆದುಕೊಳ್ಳುತ್ತದೆ. ಒಂದು ಸಮಯದಲ್ಲಿ ಈ ಎರಡು ಕಥೆಗಳು ಸೇರಿಕೊಳ್ಳುತ್ತವೆ. ಕೋಲಾರ, ಕೆಜಿಎಫ್, ನರಸಾಪುರ ಘಟ್ಟ, ಏರೋಹಳ್ಳಿ ಘಟ್ಟ,ಮುಂತಾದ ಕಡೆ ಶೂಟಿಂಗ್ ಮಾಡಿದ್ದೇವೆ” ಎಂದರು.
ಚಿತ್ರದ ನಾಯಕ ಪ್ರವೀಣ್ ಕೂಡ ಈ ವೇಳೆ ಉಪಸ್ಥಿತರಿದ್ದರು. ಕೆ ಎಂ ಇಂದ್ರ ಅವರ ಸಂಗೀತ, ಕೆ ಎಂ ವಿಶ್ವ ಅವರ ಸಂಕಲನ ಈ ಸಿನಿಮಾದಲ್ಲಿದ್ದು, ಸತ್ಯ ಹಾಗು ಎಂ ಬಿ ಹಳ್ಳಿಕಟ್ಟಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಾಯಕರಾಗಿ ಪ್ರವೀಣ್, ಮುಖ್ಯ ಪಾತ್ರಗಳಲ್ಲಿ ನಿರ್ಮಾಪಕ ಸಲಗ ಸೂರಿಯಣ್ಣ, ನಮ್ರತಾ ಅಗಸಿಮನಿ, ಗಣೇಶ್ ರಾವ್, ಗಾಯತ್ರಿ, ರಕ್ಷಿಯ್ ಮುಂತಾದವರು ನಟಿಸಿದ್ದಾರೆ. ಇದೇ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಸಿನಿಮಾ ತೆರೆಮೇಲೆ ಬರಲಿದೆ.



