ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಭಜರಂಗಿ 2’ ಚಿತ್ರದಲ್ಲಿನ ‘ಆರಕ’ ಪಾತ್ರಕ್ಕೆ ಕನ್ನಡಿಗರಿಂದ ಅಪಾರ ಪ್ರಶಂಸೆ ಪಡೆದ ನಟ ಚೆಲುವರಾಜು ಹಾಗು ಹಲವು ವರ್ಷಗಳಿಂದ ಚಂದನವನದಲ್ಲಿ ತಮ್ಮ ನಟನೆಯಿಂದ ಗುರುತಿಸಿಕೊಂಡಿರುವ ನಟಿ ವಿದ್ಯಾವಿಜಯ್ ಅವರು ಅಭಿನಯಿಸಿರುವ ಹೊಚ್ಚಹೊಸ ಆಲ್ಬಮ್ ಸಾಂಗ್ ‘ಮನಸು ಜಾರಿದೆ’ ಇದೀಗ ಬಿಡುಗಡೆಯಾಗಿದೆ. ವಿಶೇಷವೆಂದರೆ ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಪ್ರಣಯರಾಜ ಶ್ರೀನಾಥ್ ಅವರಿಗೆ, ಅವರ ಜೀವಮಾನ ಸಾಧನೆಗಾಗಿ ಗೌರವಿಸುವ ಪ್ರಶಸ್ತಿಯನ್ನ ಕೂಡ ಹಾಡಿನ ತಂಡದವರು ನೀಡಿದರು.


ಈ ಬಗ್ಗೆ ತಮ್ಮ ಸಂತಸ ಹಂಚಿಕೊಂಡ ಶ್ರೀನಾಥ್ ಅವರು, “ಇಲ್ಲಿರುವವರೆಲ್ಲ ಬಹಳ ಚಿಕ್ಕವರು. ಈಗಿನ ಪೀಳಿಗೆಯವರಾದ ಇವರು, ನನ್ನನ್ನೂ ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಿರುವುದು ಬಹಳ ಸಂತಸ” ಎಂದಿದ್ದಾರೆ. ಈ ಕಾರ್ಯಕ್ರಮವನ್ನ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿತ್ತು. ಇದೇ ಸಂಧರ್ಭದಲ್ಲಿ ಮಕ್ಕಳಿಗಿ ‘ದೇಸಿ ನಡಿಗೆ’ ಎಂಬ ದೇಸಿ ಶೈಲಿಯ ಫ್ಯಾಷನ್ ಶೋ ಕೂಡ ತಂಡ ಆಯೋಜಿಸಿದ್ದರು.
ಈ ಶುಭಗಳಿಗೆಯಲ್ಲಿ ಮಾಜಿ ಸಚಿವರಾದ ಕೃಷ್ಣಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ ಮಾ ಹರೀಶ್, ಇತರ ಗಣ್ಯರ ಜೊತೆಗೆ ನಟ ಚೆಲುವರಾಜು, ನಟಿ ವಿದ್ಯಾ ವಿಜಯ್ ಸೇರಿದಂತೆ ತಂಡದ ಇತರ ಸದಸ್ಯರು ಕೂಡ ಉಪಸ್ಥಿತರಿದ್ದರು.

