ಈಗಿನ ಸಿನಿಮಾಗಳಲ್ಲಿ ಮಾತುಗಳೇ ಒಂದು ಬಲ. ವಿಭಿನ್ನ ವಿನೂತನ ಅಷ್ಟೇ ಮನಮುಟ್ಟುವ ಸಂಭಾಷಣೆಗಳನ್ನ ಈಗಿನ ಸಿನಿಮಾಗಳಲ್ಲಿ ನಾವು ಕಾಣಬಹುದು. ಆದರೆ ಮಾತುಗಳೇ ಇಲ್ಲದೆ ಒಂದು ಸಿನಿಮಾ ನಡೆದರೆ. ಬರಿಯ ಸಂಗೀತ ಹಾಗು ಅಭಿನಯದಿಂದ ಭಾವನೆಗಳನ್ನ ಜನರಿಗೆ ತಲುಪಿಸಿದರೆ. 36 ವರ್ಷಗಳ ಹಿಂದೆ ‘ಪುಷ್ಪಕ ವಿಮಾನ’ ಎಂಬ ಮೂಕಿ ಸಿನಿಮಾ ಬಂದಿತ್ತು. ಇದೀಗ ಮತ್ತೆ ಅದೇ ರೀತಿಯ ಮೂಕಿ ಚಿತ್ರವೊಂದು ಸಿದ್ಧವಾಗಿದೆ. ಅದುವೇ ‘ಮಹಾಗುರು’. ಕಸ್ತೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು.
ಕಾಡಿನ ನಡುವೆ ಇರುವಂತಹ ಒಂದು ಗುಪ್ತ ನಿಧಿಯನ್ನ ಹುಡುಕಿ ಹೊರಡುವ ಮಂತ್ರವಾದಿ ಹಾಗು ಅಲ್ಲಿ ನಿಧಿಯನ್ನ ಕಾಯಲು ನಿಂತಿರುವ ಯಕ್ಷಕನ್ಯೆಯ ನಡುವೆ ನಡೆವ ಸಂಘರ್ಷ ಈ ‘ಮಹಾಗುರು’ ಚಿತ್ರದ ಕಥೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಕಸ್ತೂರಿ ಜಗನ್ನಾಥ್, “ಈ ಸಿನಿಮಾ ಆರಂಭವಾಗಿದ್ದು ಒಂದು ವಿಶೇಷ ಪ್ರಯತ್ನ ಎಂದು. ಹಲವು ವರ್ಷಗಳ ನಂತರ ಕನ್ನಡದಲ್ಲಿ ಬರುತ್ತಿರುವ ಮೂಕಿ ಚಿತ್ರವಿದು. ಸೌಂಡ್ ಎಫೆಕ್ಟ್ ಗಳಲ್ಲೇ ಕಥೆ ಹೇಳುತ್ತೇವೆ. ಈ ಸಿನಿಮಾಗೆ ಕೇರಳಮೂಲದ ಎಡಕ್ಕಾವಿಲ್ ಫಿರೋಸ್, ಜಸ್ಸಿನಾ, ಅಶೋಕ್ ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ನನ್ನ ನಿರ್ದೇಶನದ ಮೂರನೇ ಚಿತ್ರವಿದು. ಸಿನಿಮಾಗೆ ಬೇಕಾದಂತಹ ಸಿಜಿ ಕೆಲಸಗಳನ್ನ ಕೂಡ ನಾನೇ ಮಾಡಿದ್ದು, ಸುಮಾರು ೬ ತಿಂಗಳ ಕಾಲ ಕೆಲಸ ಮಾಡಿದ್ದೇನೆ. ಬೆಂಗಳೂರು ಮೂವೀಸ್ ಸ್ಟುಡಿಯೋದಲ್ಲಿ ಸುಮಾರು ೮ ದಿನ ಸೆಟ್ ಹಾಕುವುದರ ಜೊತೆಗೆ ಸಕಲೇಶಪುರ ಕಾಡಿನಲ್ಲಿ ಹೆಚ್ಚಿನ ಸಮಯ ಚಿತ್ರೀಕರಣ ಮಾಡಿದ್ದೇವೆ” ಎಂದರು.


‘ಮಹಾಗುರು’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿಯ ಹಿರಿಯ ನಟ ಮೈಸೂರು ರಮಾನಂದ್, ಬ್ಯಾಂಕ್ ಜನಾರ್ಧನ್, ಹಾಗು ಮುಂಬೈ ಮೂಲದ ನಟಿ ಮಹಿಮಾ ಗುಪ್ತ ನಟಿಸಿದ್ದಾರೆ. ಈ ವೇಳೆ ಮಾತನಾಡಿದ ನಟ ಮೈಸೂರು ರಮಾನಂದ್, ” ಈವರೆಗೆ ಸುಮಾರು 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಾನು ಮಾಡುತ್ತ ಬಂದಿದ್ದೇನೆ. ಈ ಚಿತ್ರದಲ್ಲಿ ಎರಡು ಪಾತ್ರಗಳನ್ನು ಮಾಡಿದ್ದೇನೆ, ಈ ಹಿಂದೆ ಸ್ಟಂಟ್ ಮಾಸ್ಟರ್ ಎಂಬ ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸಿದ್ದೆ. ಈ ಸಿನಿಮಾದ ನನ್ನ ಪಾತ್ರಗಳಲ್ಲಿ ಒಬ್ಬ ಕುಳ್ಳನಾದರೆ, ಮತ್ತೊಬ್ಬ ನಿಧಿಯನ್ನು ಹುಡುಕಿಕೊಂಡು ಹೋಗುವ ಮಂತ್ರವಾದಿ. ಈ ರೀತಿಯ ವಿಭಿನ್ನ ಪಾತ್ರ ನಿರ್ವಹಿಸಲು ನಾನೂ ಸ್ವಲ್ಪ ವಿಶೇಷ ಪ್ರಯತ್ನ ಮಾಡಬೇಕಾಗಿ ಬಂತು. ನನ್ನ ಪಾತ್ರಕ್ಕೆ ನಿಧಿ ಸಿಗುತ್ತದೋ ಇಲ್ಲವೋ ಅವನು ಏನಾಗುತ್ತಾನೆ ಅನ್ನುವುದೇ ಸಿನಿಮಾದ ಕಥೆ. ಮಾತುಗಳೇ ಇಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವಂತಹ ನನ್ನ ಎರಡೂ ಪಾತ್ರಗಳು ಚೆನ್ನಾಗಿವೆ. ಈ ಸಿನಿಮಾದಲ್ಲಿ ಉತ್ತಮ ಚಿತ್ರಕಥೆ ಹಾಗೂ ದೃಶ್ಯಸಂಯೋಜನೆಯನ್ನು ನೀವು ಕಾಣಬಹುದು” ಎಂದರು.
ಇವರ ಜೊತೆಗೆ ಸುಮಾರು 55 ಸಿನಿಮಾಗಳಿಗೆ ಕ್ಯಾಮೆರಾ ಕೆಲಸ ಮಾಡಿರುವ ಖ್ಯಾತಿಯ ಹಿರಿಯ ಛಾಯಾಗ್ರಾಹಕ ಎ ಸಿ ಮಹೇಂದ್ರನ್ ಅವರು ಮಾತನಾಡುತ್ತಾ, “ಈ ಸಿನಿಮಾದ ಮೂಲ ವಿಷಯ ತುಂಬಾ ಚೆನ್ನಾಗಿದೆ. ಈ ಸಿನಿಮಾಗಾಗಿ ಸುಮಾರು 75% ಕಾಡಿನಲ್ಲೇ ಚಿತ್ರೀಕರಣ ಮಾಡಿದ್ದು, ಇನ್ನುಳಿದ 25% ಮನೆಯೊಂದರಲ್ಲಿ ಮಾಡಿದ್ದೇವೆ” ಎಂದರು. ಇನ್ನು ಮೂಲತಃ ಮುಂಬೈ ಮೂಲದ ಮಾಡೆಲ್ ಆಗಿರುವ ಮಹಿಮಾ ಗುಪ್ತ, ಹಲವು ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದರು. ‘ಮಹಾಗುರು’ ಸಿನಿಮಾದಲ್ಲಿ ನಿಧಿ ಕಾಯುವ ಯಕ್ಷಕನ್ಯೆಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

