ನಮ್ ಟಾಕೀಸ್.ಇನ್ ರೇಟಿಂಗ್ 【3.25 /5】
ಆಧುನಿಕ ಜೀವನದಲ್ಲಿ ಎಲ್ಲವೂ ದುಬಾರಿ. ಅದರಲ್ಲೂ ಈಗಿನ ಮಾತ್ರೆಗಳು, ಔಷಧಿ, ವೈದ್ಯರ ಸೇವೆಯಂತೂ ಮುಗಿಲ ಎತ್ತರದ ಬೆಲೆಯಲ್ಲಿದೆ. ಆರೋಗ್ಯ ವೃದ್ಧಿಯ ಹೆಸರಿನಲ್ಲಿ ಈಗಿನ ಅಲೋಪತಿ ವ್ಯವಸ್ಥೆ ನಮ್ಮನ್ನೆಲ್ಲ ಸುಲಿಗೆ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವುದೇ ಆಗಿದ್ದರು ಕೂಡ ನಮ್ಮಲ್ಲೇ ಇರುವ ಮನೆಯೊಳಗಿನ ಆಸ್ಪತ್ರೆಯ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ. ಅರ್ಥಾತ್ ನಮ್ಮದೇ ಸ್ವಂತ, ಹಲವು ದಶಕಗಳ ಇತಿಹಾಸ ಹೊಂದಿರುವ ಆಯುರ್ವೇದ ಪದ್ದತಿಯ ಬಗ್ಗೆ. ಸದ್ಯ ಆಯುರ್ವೇದದ ಪ್ರಾಮುಖ್ಯತೆ ಸಾರಲು ಸಿನಿಮಾವೊಂದು ಬಂದಿದೆ. ಸ್ವತಃ ಆಯುರ್ವೇದ ವೈದ್ಯರಾದ ಮಧುಸೂದನ್ ಅವರು, ಸಾಮಾನ್ಯರಿಗೆ ಸಿನಿಮಾ ಮೂಲದಲ್ಲಿ ಇದರ ಪ್ರಾಮುಖ್ಯತೆ ಸಾರುವ ಪ್ರಯತ್ನ ಹೊತ್ತು ಬಂದಿದ್ದಾರೆ. ಅದುವೇ ‘ಮಧುರಕಾವ್ಯ’ ಎಂಬ ಸಿನಿಮಾ. ಹಾಗಾದರೆ ಹೇಗಿದೆ ಸಿನಿಮಾ?


ರೋಗದಿಂದ ಬಳಲುತ್ತ, ಈ ದುಬಾರಿ ಅಲೋಪತಿ ಉಪಚಾರಗಳನ್ನು ಪಡೆಯಲಾಗದೆ, ಆರೋಗ್ಯದ ಸಮಸ್ಯೆಗಳನ್ನ ಅನುಭವಿಸುತ್ತಿರುವ ಬಡ ರೋಗಿಗಳಿಗೆ, ಆಯುರ್ವೇದ ಪಂಡಿತರಾದಂತಹ ಕಥಾನಾಯಕ ಇಲ್ಲಿ ಸಹಾಯ ಮಾಡುತ್ತಿರುತ್ತಾರೆ. ಈ ಮೂಲಕ ಆಯುರ್ವೇದದ ಮಹತ್ವ ಸಾರುವ ಪ್ರಯತ್ನದಲ್ಲಿರುತ್ತಾರೆ. ಆಧುನಿಕ ಅಲೋಪತಿ ಎಷ್ಟು ಮುಂದುವರೆದಿದೆ, ಎಷ್ಟು ಆವರಿಸಿದೆ ಎಂದರೆ, ಬಡರೋಗಿಗಳನ್ನ ಅಪಹರಿಸಿಕೊಂಡು ಬಂದು, ತಮ್ಮದೇ ಜಾಗದಲ್ಲಿ ಇರಿಸಿಕೊಂಡು ಅಲ್ಲಿ ಆಯುರ್ವೇದದ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ ಇದನ್ನೂ ಕೂಡ ನಾಯಕ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ. ಆಯುರ್ವೇದದ ಸಹಾಯದಿಂದ, ಕಡಿಮೆ ವೆಚ್ಚದಲ್ಲೇ ಜನರ ಜೀವ ಉಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಎಲ್ಲ ಅಂಶಗಳ ಸುತ್ತ ಸುತ್ತುತ್ತಾ ಹೆಣಿದುಕೊಂಡಿರುವ ಸಿನಿಮಾ ಈ ‘ಮಧುರಕಾವ್ಯ’.
ಮೂಲತಃ ಆಯುರ್ವೇದ ವೈದ್ಯರಾಗಿರುವ ಮಧುಸೂಧನ್ ಖ್ಯಾತನಹಳ್ಳಿ ಅವರು ಈ ಸಿನಿಮಾವನ್ನ ರಚಿಸಿ ನಿರ್ದೇಶಿಸಿ, ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಹಲವು ಕಿರುಚಿತ್ರಗಳನ್ನ ಮಾಡಿರುವ ಅನುಭವದಲ್ಲಿ ಈ ಸಿನಿಮಾವನ್ನ ಕೈಗೆತ್ತಿಕೊಂಡಿದ್ದರು ನಿರ್ದೇಶಕರು. ಮೊದಲ ಬಾರೀ ಸಿನಿಮಾವೊಂದನ್ನು ನಿರ್ದೇಶನ ಮಾಡಿರುವುದರಿಂದ, ಅಲ್ಲಲ್ಲಿ ಕೆಲವು ಲೋಪದೋಷಗಳು ಕಂಡುಬರುತ್ತವೆ. ಆದರೂ ಕೂಡ ಒಂದೊಳ್ಳೆ ಉತ್ತಮ ಸಂದೇಶದ ಜೊತೆಗೆ ಮನರಂಜನಾತ್ಮಕವಾಗಿ ಮೂಡಿಬಂದಿರುವ ಈ ಸಿನಿಮಾವನ್ನ ಕುಟುಂಬದವರು ಕೂಡಿ ನೋಡಬಹುದಾಗಿದೆ.
ನಾಯಕಿಯ ಪಾತ್ರವೇ ಇಲ್ಲದಿರುವುದು ‘ಮಧುರಕಾವ್ಯ’ದ ಮತ್ತೊಂದು ವಿಶೇಷ. ರಂಗಭೂಮಿ ಕಲಾವಿದೆ ಯಶೋಧ ಗೌಡ, ರಾಜಕುಮಾರ್ ನಾವಿಕ, ಅಣ್ಣಪ್ಪ ಸ್ವಾಮಿ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದು, ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸತೀಶ್ ಮೌರ್ಯ ಅವರ ಸಂಗೀತದಲ್ಲಿ ಮೂಡಿ ಬಂದ ಸಿನಿಮಾದ ಒಂದಷ್ಟು ಹಾಡುಗಳು ಮನಸೆಳೆಯುತ್ತವೆ.
ಒಟ್ಟಿನಲ್ಲಿ ಹಾಸ್ಯ, ಆಕ್ಷನ್, ಲವ್ ಸ್ಟೋರಿ ಎಂಬೆಲ್ಲ ಸಿನಿಮಾಗಳ ನಡುವೆ, ಒಂದೊಳ್ಳೆ ಸಂದೇಶ ಹೊತ್ತು ಬಂದಿರುವ, ಈ ಸಮಾಜಸ್ನೇಹಿ ಸಿನಿಮಾ ವಿಶೇಷವಾಗಿ ನಿಲ್ಲುತ್ತದೆ. ಸದ್ಯ ಎಲ್ಲೆಡೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾವನ್ನ, ಒಂದಷ್ಟು ಅಲ್ಪ ಲೋಪಗಳಿಗೆ ಹೊಂದಿಕೊಂಡರೆ, ಆರಾಮಾಗಿ ನೋಡಿಕೊಂಡು ಬರಬಹುದು.



