ನಮ್ಮಲ್ಲಿ ಆಯುರ್ವೇದದ ವೈದ್ಯಕೀಯ ಪದ್ಧತಿ, ಅದಕ್ಕಿರುವ ಮಹತ್ವ ಇವನ್ನೆಲ್ಲ ಅದೆಷ್ಟೋ ಜನ ಕಡೆಗಣಿಸುತ್ತಾರೆ. ಎಷ್ಟೋ ಜನಕ್ಕೆ ಆಯುರ್ವೇದದ ಬಗ್ಗೆ ಏನೂ ತಿಳಿಯದೇ, ಇಡೀ ಪ್ರಪಂಚವನ್ನೇ ಆವರಿಸಿಕೊಂಡಿರುವ ಅಲೋಪತಿಗೆ ಮಾರುಹೋಗಿದ್ದಾರೆ. ಸದ್ಯ ಈ ಆಯುರ್ವೇದದ ಪ್ರಾಮುಖ್ಯತೆಯನ್ನ ಜನಸಾಮಾನ್ಯರಿಗೆ ತಲುಪಿಸಲು ಸ್ವತಃ ವೈದ್ಯರಾಗಿರುವವರೊಬ್ಬರೂ ಸಿನಿಮಾವೊಂದರ ಮೂಲಕ ಬರುತ್ತಿದ್ದಾರೆ. ‘ಮಧುರಕಾವ್ಯ’ ಎಂಬ ಹೆಸರಿನ ಈ ಸಿನಿಮಾವನ್ನು ಆಯುರ್ವೇದ ವೈದ್ಯರಾದ ಮಧುಸೂಧನ್ ಅವರು ರಚಿಸಿ ನಿರ್ದೇಶಿಸಿ ಜೊತೆಗೆ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ ಕೂಡ. ಈ ಸಿನಿಮಾದ ನಾಲ್ಕು ಹಾಡುಗಳ ಪ್ರದರ್ಶನ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಎಸ್‌ಆರ್‌ವಿ ಥಿಯೇಟರಿನಲ್ಲಿ ನೆರವೇರಿತು. ಸತೀಶ್ ಮೌರ್ಯ ಅವರ ಸಂಗೀತವಿರುವ ಈ ಸಿನಿಮಾದ ಆಡಿಯೋವನ್ನು ಹಿರಿಯ, ಪ್ರಖ್ಯಾತ ಸಂಗೀತ ನಿರ್ದೇಶಕರಾದ ವಿ ಮನೋಹರ್ ಅವರು ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು.
ಈ ಶುಭಗಳಿಗೆಯಲ್ಲಿ ಮಾತನಾಡಿದ ನಟ ನಿರ್ದೇಶಕ ಮಧುಸೂಧನ್ ಅವರು, ” ‘ಮಧುರಕಾವ್ಯ’ ಎಂಬ ಈ ಸಿನಿಮಾ ನನ್ನ ಕನಸು. ಯಾವುದೋ ಲಾಭಕ್ಕಾಗಿ ನಾವು ಈ ಸಿನಿಮಾ ಮಾಡಿಲ್ಲ. ಸಮಾಜಕ್ಕೊಂದು ಸಂದೇಶ ಕೊಡಬೇಕೆಂದು ಚಿತ್ರ ನಿರ್ಮಿಸಿದ್ದೇವೆ. ನಾನು ಪ್ರತಿನಿತ್ಯ ರೋಗಿಗಳಿಗೆ ಮಾಡ್ತಿರುವ ಸೇವೆಯೇ ನಾನೀ ಸಿನಿಮಾ ಮಾಡಲು ಸ್ಪೂರ್ತಿ. ಬಹುತೇಕ ಖಾಯುಲೆಗಳಿಗೆ ನಮ್ಮ ಸುತ್ತಮುತ್ತಲೇ ಔಷಧಿಗಳಿರುತ್ತವೆ. ಹಿತ್ತಲ ಗಿಡವನ್ನು ಹೇಗೆ ಬಳಸಿಕೊಳ್ಳಬೇಕು, ಅದರಿಂದ ನಮ್ಮ ಆರೋಗ್ಯ ಎಷ್ಟರಮಟ್ಟಿಗೆ ಸುಧಾರಿಸಿಕೊಳ್ಳಬಹುದು ಎಂಬ ಅಂಶವನ್ನ ಈ ಸಿನಿಮಾದಲ್ಲಿ ಹೇಳಿದ್ದೇವೆ. ಅಲೋಪಥಿ ವೈದ್ಯರು ತಮ್ಮ ವೈಯಕ್ತಿಕ ಲಾಭಕ್ಕಾಗಿ, ಅಪಾರ ವರ್ಷಗಳ ಇತಿಹಾಸವಿರುವ ನಾಟಿ ವೈದ್ಯ ಪದ್ದತಿಯನ್ನು ಹೇಗೆಲ್ಲಾ ಕೊನೆಗಾಣಿಸಲು ನೋಡುತ್ತಿದ್ದಾರೆ, ಪಾರಂಪರಿಕವಾಗಿ ಜನಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ಯಾವರೀತಿ ತುಳಿಯುತ್ತಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಹಳ್ಳಿಯ ನಾಟಿವೈದ್ಯರ ಕುಟುಂಬವೊಂದು ಈಗಿನ ಆಧುನಿಕ ವೈದ್ಯರು ನಡೆಸುವ ಮೆಡಿಕಲ್ ಲಾಭಿಯ ವಿರುದ್ದ ಹೋರಾಡುವ ಕಥೆಯಿದು.


ಇದರ ಜೊತೆಗೆ ನಾವು ತೆಗೆದುಕೊಳ್ಳುವ, ದೈನಂದಿನ ಜೀವನದ ಒತ್ತಡಗಳಿಂದಲೇ ರೋಗಗಳು ಹೇಗೆ ಹೆಚ್ಚಾಗುತ್ತವೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಅನಾದಿಕಾಲದಿಂದ ಜನರ ಆರೋಗ್ಯವನ್ನು ಸಂರಕ್ಷಿಸುತ್ತ ಬಂದಿರುವ ಆಯುರ್ವೇದವನ್ನು ಉಳಿಸಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ. ಇಂತಹ ಉತ್ತಮ ವಿಚಾರವುಳ್ಳ ನಮ್ಮ ಸಿನಿಮಾದಲ್ಲಿ ಜನರಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಒಬ್ಬ ಆಯುರ್ವೇದದ ವೈದ್ಯನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಲಾಭಕ್ಕೆ ಆಸೆಪಡುವ ಆಧುನಿಕ ಡಾಕ್ಟರ್ ಗಳ ವಿರುದ್ದ ಹೋರಾಟ ನಡೆಸಿ ನಮ್ಮ ಸ್ವಂತ ಆಯುರ್ವೇದ ಪದ್ದತಿಯನ್ನು ರಕ್ಷಿಸುವಂಥ ಪಾತ್ರವದು. ಚಿತ್ರದಲ್ಲಿ ತಾಯಿ, ಮಗನ ನಡುವಿನ ಪ್ರೀತಿ ವಾತ್ಸಲ್ಯವಿದೆ, ಕೌಟುಂಬಿಕ ಮೌಲ್ಯಗಳ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಮೆಸೇಜ್ ಕೂಡ ಇರಲಿದೆ. ಈ ಸಿನಿಮಾಗೆ ಸ್ವತಃ ನಾನೇ ಬಂಡವಾಳ ಹೂಡಿದ್ದೇನೆ. ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಮಾಡಿದ್ದೇವೆ. ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ” ಎಂದರು.
ತಮ್ಮ ಮೊದಲ ಸಿನಿಮಾ ಮಾಡುತ್ತಿರುವ ಮಧುಸೂದನ್ ಖ್ಯಾತನಹಳ್ಳಿ ಅವರಿಗೆ ಕಿರುಚಿತ್ರಗಳನ್ನ ಮಾಡಿರುವ ಅಭ್ಯಾಸವಿದೆ. ಅಂತೆಯೇ ಅವರೇ ಕಥೆ ಚಿತ್ರಕತೆ ಬರೆದು, ನಿರ್ಮಾಣ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿದ್ದಾರೆ. ವಿಶೇಷವೆಂದರೆ ‘ಮಧುರಕಾವ್ಯ’ ಸಿನಿಮಾದಲ್ಲಿ ನಾಯಕನಟಿಯ ಪಾತ್ರವೇ ಇಲ. ನಾಯಕ ತಂಗಿಯ ಪಾತ್ರದಲ್ಲಿ ರಂಗಭೂಮಿ ಖ್ಯಾತ ನಟಿ ಯಶೋಧಾ ಹಾಗು ಖಳನಾಯಕನಾಗಿ ರಾಜಕುಮಾರ್ ನಾಯಕ್ ಬಣ್ಣ ಹಚ್ಚಿದ್ದಾರೆ.
ಹಂಸಲೇಖ ಅವರ ದೇಸಿ ಕಾಲೇಜಿನಲ್ಲಿ ಪಳಗಿದ ಸತೀಶ್ ಮೌರ್ಯ ಅವರು ಈ ಚಿತ್ರದ ಸಂಗೀತ ನಿರ್ದೇಶಕರು. ಒಟ್ಟು ಸಿನಿಮಾದಲ್ಲಿ ನಾಲ್ಕು ಹಾಡುಗಳು ಹಾಗು ಎಂಟು ಬಿಟ್ ಸಾಂಗ್ ಗಳು ಇರಲಿದ್ದು, ಎಲ್ಲವನ್ನೂ ದೇಸಿ ಶೈಲಿಯ ವಾದ್ಯಗಳ ಸಹಾಯದಿಂದಲೇ ಮಾಡಿರುವುದು ಇನ್ನೊಂದು ವಿಶೇಷ. ರಾಜೇಶ್ ಕೃಷ್ಣನ್, ಮಧು ಬಾಲಕೃಷ್ಣನ್, ಚಿತ್ರಾರಂತಹ ಪ್ರಖ್ಯಾತ ಗಾಯಕರು ಈ ಸಿನಿಮಾದ ಹಾಡುಗಳಿಗೆ ದನಿಯಗಿದ್ದಾರೆ.

