ಹಲವು ಉತ್ತಮ ಹಾಡುಗಳಿಗೆ ಸಾಹಿತ್ಯ ಬರೆದಿರುವ ಗೀತರಚನೇಕಾರ ಲೋಕಲ್ ಲೋಕಿ ಅವರು ಇದೀಗ ನಿರ್ದೇಶನಕ್ಕೆ ಇಳಿದಿದ್ದಾರೆ. ಮುರುಗನಂಥನ್ ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ. ಮಹಿಳಾ ಶೋಷಣೆಯ ಬಗೆಗಿನ ಕಥೆ ಇರುವ ಈ ಚಿತ್ರದ ಹಾಡುಗಳನ್ನು ಸಚಿವ ಕೆ ಗೋಪಾಲಯ್ಯ ಅವರು ಇಂದು ಬಿಡುಗಡೆ ಮಾಡಿದ್ದಾರೆ. ‘A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡುಗಳು ಬಿಡುಗಡೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ನಟ ಶ್ರೀನಗರ್ ಕಿಟ್ಟಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ ಮಾ ಹರೀಶ್, ರಾಜಕೀಯ ಮುಖಂಡರಾದ ಜಯರಾಮ್ ಅವರು ಕೂಡ ಉಪಸ್ಥಿತರಿದ್ದರು.


ಈ ಬಗ್ಗೆ ಮಾತನಾಡುವ ನಿರ್ದೇಶಕ ಲೋಕಿ, ” ಬಹಳ ಕಾಲದಿಂದ ಗೀತರಚನೆಕಾರನಾಗಿ ಕೆಲಸ ಮಾಡುತ್ತಿದ್ದ ನನಗೆ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕು ಎಂಬ ಆಸೆಯಿತ್ತು. ಅಂತೆಯೇ ಈಗ ‘ಮಾಜರ್’ ಎಂಬ ಸಿನಿಮಾ ಮಾಡುತ್ತಿದ್ದೇನೆ. ಮಹಿಳೆಯರ ಮೇಲಿನ ಶೋಷಣೆ ನಮ್ಮಲ್ಲಿ ನಡೆಯುತ್ತಲೇ ಇದೆ. ಆದರೆ ಈ ಕೃತ್ಯ ಎಸಗುವವರಿಗೆ ಸರಿಯಾದ ಶಿಕ್ಷೆ ಸಿಗುತ್ತಿಲ್ಲ. ಹೆಣ್ಣನ್ನ ಶೋಷಣೆ ಮಾಡುವವರಿಗೆ ಯಾವ ರೀತಿಯ ಶಿಕ್ಷೆ ನೀಡಬೇಕೆಂದು ನಮ್ಮ ಸಿನಿಮಾದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ. ಜೊತೆಗೆ ಚಿತ್ರದಲ್ಲಿ ಒಂದೊಳ್ಳೆ ಪ್ರೇಮಕತೆ ಕೂಡ ಇದೆ. ಇನ್ನು ಸಿನಿಮಾದಲ್ಲಿ ಮೂರು ಹಾಡುಗಳು ಹಾಗು ಮೂರು ಬಿಟ್ ಗಳಿದ್ದು, ಎಲ್ಲವನ್ನೂ ನಾನೇ ಬರೆದಿದ್ದೇನೆ. ಎ ಟಿ ರವೀಶ್ ಅವರು ಹಾಡುಗಳಿಗೆ ಸಂಗೀತ ತುಂಬಿದ್ದಾರೆ. ಹುಚ್ಚ ವೆಂಕಟ್, ಶಶಾಂಕ್ ಶೇಷಗಿರಿ, ಹಾಗು ಸಂತೋಷ್ ವೆಂಕಿ ಈ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ರಾಜೇಶ್ ರಾಮನಾಥ್ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ತುಂಬಿದ್ದಾರೆ. ಸದ್ಯದಲ್ಲೇ ಸಿನಿಮಾ ಬಿಡುಗಡೆ ಮಾಡಲಿದ್ದೇವೆ” ಎಂದರು.
“ಒಂದೊಳ್ಳೆ ಕನ್ನಡ ಸಿನಿಮಾವನ್ನ ನಿರ್ಮಾಣ ಮಾಡಬೇಕು ಎಂಬ ಆಸೆಯಿತ್ತು. ಅಂತೆಯೇ ಲೋಕಿ ಅವರು ಬಂದು ಈ ಕಥೆ ಹೇಳಿದಾಗ, ಕಥೆ ತುಂಬಾ ಹಿಡಿಸಿ, ಸಂತೋಷದಿಂದ ನಿರ್ಮಾಣ ಮಾಡಲು ಒಪ್ಪಿಕೊಂಡೆ” ಎನ್ನುತ್ತಾರೆ ನಿರ್ಮಾಪಕ ಮುರುಗನಂಥನ್. ಉಗ್ರಂ ರವಿ, ರಂಜಿತ್ ಪ್ರಿನ್ಸ್, ಅರ್ಜುನ್ ಮುಂತಾದವರು ಈ ‘ಮಾಜರ್’ ಚಿತ್ರದಲ್ಲಿ ನಟಿಸಿದ್ದು, ಸದ್ಯದಲ್ಲೇ ಸಿನಿಮಾ ಬೆಳ್ಳಿತೆರೆಗಳ ಮೇಲೆ ಬರಲಿದೆ.



