ತಮಿಳಿನ ಸ್ಟಾರ್ ನಟ ತಳಪತಿ ವಿಜಯ್ ಅವರಿಗೆ ಇಂದು(ಜೂನ್ 22) ಜನುಮದಿನದ ಸಂಭ್ರಮ. ಅದೆಷ್ಟೋ ಅಭಿಮಾನಿಗಳ ನೆಚ್ಚಿನ ನಟರಾಗಿರುವ ವಿಜಯ್ ಅವರ ಅಭಿಮಾನಿಗಳಿಗೆ ಈ ದಿನ ಭರ್ಜರಿ ಗಿಫ್ಟ್ ಸಿಕ್ಕಿದೆ. ಅದೇನೆಂದರೆ, ವಿಜಯ್ ಅವರ ಮುಂದಿನ ಸಿನಿಮಾದ ಹೊಸ ಹಾಡು ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ವಿಜಯ್ ಅವರ ಮುಂದಿನ ಸಿನಿಮಾದ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೇ. ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕಣಗರಾಜ್ ಅವರ ಜೊತೆಗೆ ವಿಜಯ್ ಮತ್ತೆ ಕೈಜೋಡಿಸುತ್ತಿದ್ದಾರೆ. ಅದುವೇ ‘ಲಿಯೋ’.


‘ಮಾಸ್ಟರ್’ ಸಿನಿಮಾದ ನಂತರ ಮತ್ತೆ ಒಂದಾಗುತ್ತಿರುವ ಈ ಜೋಡಿಯ ಮುಂದಿನ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಸದ್ಯ ವಿಜಯ್ ಅವರ ಜನ್ಮದಿನದ ಸಲುವಾಗಿ ಈ ‘ಲಿಯೋ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಇದರ ಜೊತೆಗೆ ಸಿನಿಮಾದ ಮೊದಲ ಹಾಡು, ‘ನಾ ರೆಡಿ’ಯ ಪ್ರೊಮೊ ಕೂಡ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಪೂರ್ತಿ ಹಾಡು ಕೂಡ ಬಿಡುಗಡೆಯಾಗಲಿದೆ. ಇದರಿಂದ ವಿಜಯ್ ಅವರ ಅಭಿಮಾನಿಗಳು ಸಂತುಷ್ಟಾರಾಗಿದ್ದಾರೆ. ಅನಿರುದ್ ರವಿಚಂದರ್ ಅವರ ಸಂಗೀತಾlವಿರುವ ‘ನಾ ರೆಡಿ’ ಹಾಡಿನ ಪ್ರೊಮೊ ವಿಡಿಯೋ ಯೂಟ್ಯೂಬ್ ನ ಟ್ರೆಂಡಿಂಗ್ ಪಟ್ಟಿಯನ್ನ ಕೂಡ ಸೇರಿದೆ.
ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿದ್ದವಾಗುತ್ತಿರುವ ಈ ‘ಲಿಯೋ’ ಚಿತ್ರವನ್ನ ನಿರ್ದೇಶಕ ಲೋಕೇಶ್ ಕಣಗರಾಜ್ ಅವರೇ ಕಥೆ ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತ್ರಿಷಾ ಅವರು ನಾಯಕಿಯಾಗಿ ನಟಿಸುತ್ತಿದ್ದು, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಬಾಲಿವುಡ್ ನ ಸಂಜಯ್ ದತ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಹುನಿರೀಕ್ಷಿತ ‘ಲಿಯೋ’ ಸಿನಿಮಾ ಅಕ್ಟೋಬರ್ 19ರಂದು, ಪಂಚ ಭಾಷೆಗಳಲ್ಲಿ ಪಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.



