‘ಗುಳ್ಟು’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟು, ಸದ್ಯ ಈಗಿನ ಬಹು ಬೇಡಿಕೆಯ, ಬಹು ಭರವಸೆಯ ನಟರಲ್ಲಿ ಒಬ್ಬರಾಗಿರುವ ನವೀನ್ ಶಂಕರ್ ಅವರ ಹೊಸ ಸಿನಿಮಾ ‘ಕ್ಷೇತ್ರಪತಿ’. ಬಹುತೇಕ ಎಲ್ಲ ಭಾವನೆಗಳನ್ನು ಸಲೀಸಾಗಿ ತೋರಿಸಬಲ್ಲ ಪ್ರತಿಭಾನ್ವಿತ ನಟ ನವೀನ್ ಶಂಕರ್ ಅವರು ಈ ಬಾರೀ ಆಕ್ಷನ್ ಸಿನಿಮಾವನ್ನ ಜನರ ಮುಂದೆ ತರುತ್ತಿದ್ದಾರೆ. ಡಾಲಿ ಧನಂಜಯ ಅಭಿನಯದ ‘ಗುರುದೇವ್ ಹೊಯ್ಸಳ’ದಲ್ಲಿನ ‘ಬಲಿ’ ಪಾತ್ರದ ಮೂಲಕ ತಮ್ಮಲ್ಲಿನ ಖಡಕ್ ಡೈಲಾಗ್ ಡೆಲಿವರಿ, ಪಕ್ಕಾ ಮಾಸ್ ಅಭಿನಯಗಳನ್ನ ತೋರಿ, ಕನ್ನಡಿಗರ ಮನಗೆದ್ದಿದ್ದ ಇವರು, ಇದೀಗ ‘ಕ್ಷೇತ್ರಪತಿ’ಯ ಮೂಲಕ ಆಕ್ಷನ್ ಸಿನಿಮಾವೊಂದರಲ್ಲಿ ಪರಿಪೂರ್ಣ ನಾಯಕನಾಗಿ ನಟಿಸಲಿದ್ದಾರೆ. ಈಗಾಗಲೇ ಬಿಡುಗಡೆಯಾದ ಚಿತ್ರದ ಟೀಸರ್ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿರುವ ‘ಕ್ಷೇತ್ರಪತಿ’ ಇದೇ ಆಗಸ್ಟ್ 18ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


ಆಶ್ರಗ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾನವಾಗಿರುವ ‘ಕ್ಷೇತ್ರಪತಿ’ ಸಿನಿಮಾವನ್ನ ಶ್ರೀಕಾಂತ್ ಕಟಗಿ ಅವರು ರಚಿಸಿ ನಿರ್ದೇಶಿಸಿದ್ದಾರೆ. ಕರಾವಳಿ ಪ್ರತಿಭೆ, ಸದ್ಯದ ಸ್ಟಾರ್ ಸಂಗೀತ ನಿರ್ದೇಶಕ ರವಿ ಬಸ್ರುರ್ ಅವರು ಸಿನಿಮಾಗೆ ಸಂಗೀತ ತುಂಬಿದ್ದಾರೆ. ಕೆಜಿಎಫ್ ನ ರಾಕಿ ಭಾಯ್ ತಾಯಿ ಪಾತ್ರದ ಮೂಲಕ ಜನರ ಮನಸೆಳೆದ ಅರ್ಚನಾ ಜೋಯಿಸ್ ಅವರು ಈ ಚಿತ್ರದಲ್ಲಿ ನವೀನ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಇದೇ ಜೋಡಿ ಇತ್ತೀಚೆಗೆ ಬಂದಂತಹ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲೂ ಕೂಡ ತೆರೆಮೇಲಿನ ಜೋಡಿಯಾಗಿ ಕಾಣಿಸಿಕೊಂಡು, ಸಿನಿಪ್ರೇಮಿಗಳ ಮನಗೆದ್ದಿದ್ದರು.
‘ಅನ್ನ ಬೆಳಿಯೋ ಮಣ್ಣಿಗೆ ರೈತಾನ ಕ್ಷೇತ್ರಪತಿ’ ಎಂಬ ಟೀಸರ್ ನಲ್ಲಿದ್ದ ಡೈಲಾಗ್ ಇಡೀ ಕರುನಾಡಿನಲ್ಲಿ ಚಲಿಸುತ್ತಿದೆ. ಇದೊಂದು ರೈತರ ಹೋರಾಟದ ಬಗೆಗಿನ ಸಿನಿಮಾ ಆಗಿರಲಿದೆ. ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಾಹುಲ್ ಐನಪುರ್ ಮುಂತಾದವರು ಕಥೆಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಇನ್ನೆರಡು ತಿಂಗಳಲ್ಲಿ ಈಗಾಗಲೇ ಕನ್ನಡದಿಂದ ಬರುತ್ತಿರುವ ಹಲವು ಬಹುನಿರೀಕ್ಷಿತ ಸಿನಿಮಾಗಳ ಸಾಲಿಗೆ ‘ಕ್ಷೇತ್ರಪತಿ’ ಕೂಡ ಸೇರಿಕೊಂಡಿದೆ. ರೈತರ ಹಕ್ಕಿಗೆ ನಡೆವ ಹೋರಾಟದ ಬಗೆಗಿನ ‘ಕ್ಷೇತ್ರಪತಿ’ ಇದೇ ಆಗಸ್ಟ್ 18ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ.

