ಕನ್ನಡ ನಾಡಿನ ನೆಚ್ಚಿನ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಜನಮದಿನದ ಸಂಭ್ರಮ. ‘ಗಾಳಿಪಟ’,’ಮುಂಗಾರು ಮಳೆ’ ರೀತಿಯ ಅದೆಷ್ಟೋ ಮನಮುಟ್ಟುವ ಸಿನಿಮಾಗಳಲ್ಲಿ ನಟಿಸಿರುವ ಗಣೇಶ್ ಅವರ ಮುಂದಿನ ಸಿನಿಮಾ ಇಂದು ಅಧಿಕೃತ ಘೋಷಣೆಯಾಗುತ್ತಿದೆ. ಗಣೇಶ್ ಅವರಿಗೆ ಇದು 41ನೇ ಸಿನಿಮಾ. ‘ದಂಡುಪಾಳ್ಯ’ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿರುವ ಕನ್ನಡದ ಹಲವು ಸಿನಿಮಾಗಳನ್ನ ನಿರ್ದೇಶಸಿರುವ ಶ್ರೀನಿವಾಸ್ ರಾಜು ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಈ ಸಿನಿಮಾಗೆ ‘ಕೃಷ್ಣಂಪ್ರಣಯ ಸಖಿ’ ಎಂಬ ಟೈಟಲ್ ಇಡಲಾಗಿದೆ. ನಾಯಕ ಗಣಿ ಅವರ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಜೊತೆಗೆ ಚಿತ್ರದ ಶೀರ್ಷಿಕೆಯನ್ನ ಚಿತ್ರತಂಡ ಘೋಷಣೆ ಮಾಡಿ, ಗೋಲ್ಡನ್ ಸ್ಟಾರ್ ಗೂ ಹಾಗು ಅವರ ಅಭಿಮಾನಿಗಳಿಗೂ ಸಂತಸದ ಉಡುಗೊರೆ ನೀಡಿದ್ದಾರೆ.


ಈ ಹೊಸ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ತೆಲುಗಿನ ಖ್ಯಾತ ನಟಿ ಮಾಳವಿಕ ನಾಯರ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಇದೊಂದು ಕೌಟುಂಬಿಕ ಕಥಾ ಹಂದಿರ್ಸ್ ಹೊತ್ತಿರುವ ಸಿನಿಮಾ ಆಗಿದ್ದು, ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ಬೆಂಗಳೂರಿನಲ್ಲೇ ನಡೆಯುತ್ತಿದೆ. ಮೈಸೂರು, ರಾಜಸ್ಥಾನ ಜೊತೆಗೆ ಯುರೋಪ್ ನಲ್ಲಿ ಕೂಡ ಸಿನಿಮಾದ ಚಿತ್ರೀಕರಣ ನಡೆಯಲಿದೆ. ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈ ಮೂಲಕ ತಮ್ಮ ಸಂಸ್ಥೆಯ ಮೂರನೇ ಚಿತ್ರಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ಸಿನಿಮಾದಲ್ಲಿರಲಿದೆ. ಜೊತೆಗೆ ಈ ಸಿನಿಮಾದಲ್ಲಿ ಶಶಿಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ಶ್ರುತಿ ಸುಧಾರಾಣಿ, ಬೆನಕ ಗಿರಿ, ಶ್ರೀನಿವಾಸ್ ಮೂರ್ತಿ, ಶಿವಾಧ್ವಜ ಶೆಟ್ಟಿ ಮುಂತಾದ ಹೆಸರಾಂತ ಕಲಾವಿದರು ತಾರಾಗಣದಲ್ಲಿರಲಿದ್ದಾರೆ.



