ಕನ್ನಡದ ಬ್ಯುಸಿ ಯುವ ನಾಯಕನಟ ಡಾರ್ಲಿಂಗ್ ಕೃಷ್ಣ ಹಾಗು ‘ಕೃಷ್ಣಲೀಲಾ’,’ಬಚ್ಚನ್’ನಂತಹ ವಿಭಿನ್ನ ಹಾಗು ಅಷ್ಟೇ ಉತ್ತಮ ಸಿನಿಮಾಗಳನ್ನ ನೀಡುತ್ತಾ ಬಂದಿರುವ ಕನ್ನಡದ ಸ್ಟಾರ್ ನಿರ್ದೇಶಕ ಶಶಾಂಕ್ ಅವರು ಜೊತೆಯಾಗಿ ಮಾಡುತ್ತಿರುವ ಹೊಸ ಸಿನಿಮಾ ‘ಕೌಸಲ್ಯಾ ಸುಪ್ರಜಾ ರಾಮ’. ಘೋಷಣೆಯಾದಾಗಿನಿಂದ ಬಾರೀ ಸದ್ದು ಮಾಡುತ್ತಿರುವ ಈ ಸಿನಿಮಾ ಇದೀಗ ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ. ಇದೇ ಜುಲೈ 28ಕ್ಕೆ ಎಲ್ಲೆಡೆ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಈ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇಂದು ನಡೆದಿದೆ. ತನ್ನ ಹಾಡುಗಳು, ಪ್ರೊಮೊ ಈ ಎಲ್ಲದರಿಂದ ಜನರಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾದ ಟ್ರೈಲರ್ ಗು ಕೂಡ ಅಷ್ಟೇ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.


ಇಷ್ಟೆಲ್ಲಾ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು. ಸುದೀಪ್ ಹಾಗು ಶಶಾಂಕ್ ಅವರು ಜೊತೆಯಾಗಿ ಸಿನಿಮಾ ಮಾಡಿರುವವರು. ಅಲ್ಲದೇ ಸುದೀಪ್ ಅವರೇ ಹೇಳುವಂತೆ ಇಬ್ಬರು ಕೂಡ ಉತ್ತಮ ಸ್ನೇಹಿತರು. ಅದೇ ಆತ್ಮೀಯತೆಯ ಜೊತೆಗೆ, ಅಲ್ಲದೇ ಉತ್ತಮ ಸಿನಿಮಾಗಳಿಗೆ ಸಹಜವಾಗಿಯೇ ಪ್ರೋತ್ಸಾಹ ನೀಡುವ ತಮ್ಮ ಗುಣದ ಜೊತೆಗೆ ಕಿಚ್ಚ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ, ಟ್ರೈಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಜೊತೆಗೆ ತಂಡದವರ ಜೊತೆಗೆ ಬೆರೆತು, ಎಂದಿನಂತೆ ತಮ್ಮ ಆತ್ಮೀಯರೆಲ್ಲರ ಕಾಲೆಳೆಯುತ್ತ, ಇಡೀ ಚಿತ್ರತಂಡಕ್ಕೆ, ಹಾಗು ಸಿನಿಮಾಗೆ ಮನತುಂಬಿ ಹರಸಿದ್ದಾರೆ. ಚಂದನವನದ ಹಿರಿಯ ನಟ, ಹಾಗು ಈ ಸಿನಿಮಾದ ನಿರ್ಮಾಪಕ ಕೌರವ ಬಿ ಸಿ ಪಾಟೀಲ್ ಅವರು ಕೂಡ ಈ ಶುಭಗಳಿಗೆಯಲ್ಲಿ ಉಪಸ್ಥಿತರಿದ್ದರು.


‘ಕೌಸಲ್ಯಾ ಸುಪ್ರಜಾ ರಾಮ’ ನಮ್ಮೊಳಗೊಬ್ಬ ಎನಿಸೋ ಸಾಮಾನ್ಯ ಯುವಕನ ಕಥೆಯಾಗಿರಲಿದೆ. ಕೌರವ ಪ್ರೊಡಕ್ಷನ್ ಹೌಸ್ ಹಾಗು ಶಶಾಂಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಸಿಡುಕ, ಮಹಿಳೆಯರನ್ನ ಕಡೆಗಣಿಸೋ ತಂದೆಯ ಜೊತೆ ಬೆಳೆದ ಮಗನ ಬದುಕನ್ನ ಸಾರುವ ಸಿನಿಮಾ. ಅವನ ಜೀವನ, ಅದರೊಳಗಿನ ಸ್ನೇಹ ಪ್ರೀತಿ ಬಾಂಧವ್ಯ, ಅಮ್ಮ ಮಗನ ನಡುವಣ ಮಧುರ ಸಂಬಂಧ ಇವನ್ನೆಲ್ಲ ಅಚ್ಚುಕಟ್ಟಾಗಿ ಮನಮುಟ್ಟುವ ಹಾಗೇ, ಭಾವನೆಗಳನ್ನ ತೆರೆಮೇಲೆ ತರುವಲ್ಲಿ ಪರಿಣತಿ ಪಡೆದಿರುವ ಶಶಾಂಕ್ ಅವರು ಹೆಣೆದಿದ್ದಾರೆ. ನಗಿಸಲು ಹಾಸ್ಯ, ಮನತುಂಬುವ ಭಾವನೆಗಳು ಎಲ್ಲವೂ ಇರುವಂತಹ ಈ ಸಿನಿಮಾದಲ್ಲಿ ನಾಯಕನಾಗಿ ಡಾರ್ಲಿಂಗ್ ಕೃಷ್ಣ, ನಾಯಕಿಯಾಗಿ ‘ಪ್ರೇಮಮ್ ಪೂಜ್ಯಮ್’ ಸಿನಿಮಾ ಖ್ಯಾತಿಯ ಬೃಂದಾ ಆಚಾರ್ಯ, ಇತರ ಪ್ರಮುಖ ಪಾತ್ರಗಳಲ್ಲಿ ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ ಜೊತೆಗೆ ವಿಶೇಷ ಪಾತ್ರದಲ್ಲಿ ಮಿಲನ ನಾಗರಾಜ್ ಅವರು ಕೂಡ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಿನಿಮಾದಲ್ಲಿದ್ದು, ಇದೇ ಜುಲೈ 28ಕ್ಕೆ ಸಿನಿಮಾ ಎಲ್ಲೆಡೆ ಬಿಡುಗಡೆಯಾಗುತ್ತಿದೆ.



