ಲವ್ ಮಾಕ್ಟೇಲ್ ಮೂಲಕ ಕನ್ನಡಿಗರ ನೆಚ್ಚಿನ ನಟ ನಿರ್ದೇಶಕರಲ್ಲಿ ಒಬ್ಬರಾಗಿರುವ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾಗೆ ಕನ್ನಡಿಗರು ಹಾತೊರೆದು ಕಾಯುತ್ತಿದ್ದಾರೆ. ಚಂದನವನದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಶಶಾಂಕ್ ಹಾಗು ಡಾರ್ಲಿಂಗ್ ಕೃಷ್ಣ ಅವರ ಜೋಡಿಯಲ್ಲಿ ಹೊಸ ಸಿನಿಮಾ ಬರುತ್ತಿರುವುದು ತಿಳಿದಿರುವ ವಿಚಾರ. ಈ ಸಿನಿಮಾವೇ ‘ಕೌಸಲ್ಯಾ ಸುಪ್ರಜಾ ರಾಮ’. ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಈ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರತಂಡ ತನ್ನ ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಿದೆ.
‘ಟೇಲ್ ಆಫ್ ಅ ರಿಯಲ್ ಮ್ಯಾನ್’ ಎಂಬ ಅಡಿಬರಹ, ತನ್ನ ಟೀಸರ್, ಹಾಡುಗಳು, ಡಾರ್ಲಿಂಗ್ ಕೃಷ್ಣ ಅವರ ಆಂಗ್ರಿ ಯಂಗ್ ಮ್ಯಾನ್ ಲುಕ್ ಈ ಎಲ್ಲದರಿಂದ ಸಿನಿಪ್ರೇಮಿಗನ್ನ ಸೆಳೆದಂತಹ ಸಿನಿಮಾ ‘ಕೌಸಲ್ಯಾ ಸುಪ್ರಜಾ ರಾಮ’ ಇದೇ ಜುಲೈ 28ರಂದು ಎಲ್ಲೆಡೆ ಬಿಡುಗಡೆಯಾಗಲಿದೆ.


ಈ ಬಗ್ಗೆ ಅಧಿಕೃತ ಘೋಷಣೆಯನ್ನ ಚಿತ್ರತಂಡ ಇಂದು ಮಾಡಿದೆ. ನಮ್ಮೊಳಗೇ ಒಬ್ಬನ್ನಾಗಿರುವ ಸಾಮಾನ್ಯ ಯುವಕನ ಕಥೆಯನ್ನ ಹೊತ್ತು ಈ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಬರುತ್ತಿದೆ. ಲವರ್ ಬಾಯ್ ಕೃಷ್ಣ ಅವರನ್ನ ಸಿಡುಕು ಮೂತಿಯ ಸೀದಾಸಾದಾ ಹುಡುಗನಾಗಿ ಹೇಗೆ ಕಾಣಬಹುದು ಎಂದು ನೋಡಲು ಕನ್ನಡ ಸಿನಿಪ್ರೇಮಿಗಳು ಕಾಯುತ್ತಿದ್ದಾರೆ.
‘ಪ್ರೇಮಂ ಪೂಜ್ಯಂ’ ಸಿನಿಮಾದ ಮೂಲಕ ಜನಪ್ರಿಯತೆ ಪಡೆದಂತಹ ಬೃಂದಾ ಆಚಾರ್ಯ ಅವರು ಈ ಸಿನಿಮಾದಲ್ಲಿ ಕೃಷ್ಣ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಇವರ ಜೊತೆಗೆ ರಂಗಾಯಣ ರಘು, ನಾಗಭೂಷಣ, ಸುಧಾ ಬೆಳವಾಡಿ ಸೇರಿದಂತೆ ಹಲವು ಹೆಸರಾಂತ ಕಲಾವಿದರು ತಾರಾಗಣದಲ್ಲಿದ್ದಾರೆ. ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ‘ಕೌಸಲ್ಯಾ ಸುಪ್ರಜ ರಾಮ’ ಸಿನಿಮಾ ಇದೇ ಜುಲೈ 28ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಲು ಲಭ್ಯವಾಗಿರುತ್ತದೆ.

