ಹಾಸ್ಯಕ್ಕೆ ಹೆಸರಾದ ಕೋಮಲ್ ಕುಮಾರ್ ಅವರು ನಾಯಕನಟನಾಗಿ ಕನ್ನಡಿಗರನ್ನು ರಂಜಿಸುತ್ತಾ ಬಂದಿರುವವರು. ಇವರ ನಟನೆಯಲ್ಲಿ ಮೂಡಿಬಂದ ಹಲವು ಸಿನಿಮಾಗಳು ಕನ್ನಡಿಗರ ಮೆಚ್ಚುಗೆ ಪಡೆದಿವೆ. ಬಹುಪಾಲು ಹಾಸ್ಯಕ್ಕೆ ಸೀಮಿತವಾಗಿರುವ ಕೋಮಲ್ ಅವರ ಸಿನಿಮಾಗಳಲ್ಲಿ ಹಲವು ವಿಭಿನ್ನ ಅಂಶಗಳಿಗೂ ವಿಶೇಷ ಸ್ಥಾನ ಸಿಕ್ಕಿವೆ. ಸೆನ್ಸೇಷನಲ್ ಸ್ಟಾರ್ ಎಂಬ ಪಟ್ಟ ಪಡೆದಿರುವ ಕೋಮಲ್ ಅವರ ಹಿಟ್ ಸಿನಿಮಾಗಳಲ್ಲಿ ಒಂದು ‘ನಮೋ ಭೂತಾತ್ಮ’. ಸದ್ಯ ಈ ಸಿನಿಮಾದ ಎರಡನೇ ಭಾಗಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಈ ಬಗ್ಗೆ ನಾಯಕ ನಟ ಕೋಮಲ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೇಕ್ ಅಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಹೇಳಿಕೊಂಡಿದ್ದಾರೆ.
ಸುಮಾರು ಒಂಬತ್ತು ವರ್ಷಗಳ ಹಿಂದೆ 2014ರಲ್ಲಿ ಬಿಡುಗಡೆಯಾದ ‘ನಮೋ ಭೂತಾತ್ಮ’, ತಮಿಳಿನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದಂತಹ ‘ಯಾಮಿರುಕ ಭಯಮೇ’ ಎಂಬ ಸಿನಿಮಾದ ರಿಮೇಕ್ ಆಗಿತ್ತು. ವಿ ಮುರಳಿ ಅವರ ನಿರ್ದೇಶನದಲ್ಲಿ ಮೂಡಿಬಂದಂತಹ ಈ ಚಿತ್ರದಲ್ಲಿ ಕೋಮಲ್ ಅವರ ಜೊತೆಗೆ ಹರೀಶ್ ರಾಜ್, ಮೊಹಮ್ಮದ್ ಅಲಿ, ಅವಿನಾಶ್ ನಟಿಸಿದ್ದರೆ ಈಶ್ವರ್ಯ ಮೆನನ್ ಹಾಗು ಗಾಯತ್ರಿ ಅಯ್ಯರ್ ಇಬ್ಬರು ನಾಯಕಿಯರಾಗಿ ಬಣ್ಣ ಹಚ್ಚಿದ್ದರು. ಹಾರರ್ ಕಾಮಿಡಿ ರೀತಿಯ ಈ ಚಿತ್ರ ಜನರನ್ನ ಹೊಟ್ಟೆ ತುಂಬಾ ನಗಿಸುತ್ತಾ ಒಂದಷ್ಟು ಭಯವನ್ನು ನೀಡುತ್ತಾ ಜನರನ್ನ ಮೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸುಮಾರು ಒಂಬತ್ತು ವರ್ಷಗಳ ನಂತರ ಚಿತ್ರದ ಎರಡನೇ ಭಾಗ ಸಿದ್ದವಾಗುತ್ತಿದೆ. ಕೋಮಲ್ ಅವರು ತಾವೂ ಮೇಕ್ ಅಪ್ ಹಚ್ಚಿಕೊಳ್ಳುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡು ‘ನಮೋ ಭೂತಾತ್ಮ 2’ ನ ಸಿದ್ಧತೆಯಲ್ಲಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ತಾರಾಗಣದ ಬಗೆಗಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

