ಬಾಲಿವುಡ್ ಹಾಗೂ ಕ್ರಿಕೆಟ್ ಲೋಕದಲ್ಲಿ ಡೇಟಿಂಗ್ ನಲ್ಲಿರುವವರ ಬಗ್ಗೆ ಆಗಾಗ್ಗೆ ಕೆಲ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಮದುವೆ,ಬ್ರೇಕಪ್ ಹೀಗೆ ಕೆಲ ವದಂತಿಗಳು ಸತ್ಯ – ಸುಳ್ಳೆಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತವೆ.
ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ನಟ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಗೊತ್ತೇ ಇದೆ. ಇಬ್ಬರು ಇತ್ತೀಚೆಗೆ ಹೆಚ್ಚು ಸಮಯ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರು ಜಂಟಿಯಾಗಿ ಮುಂಬಯಿಯ ಬಾಂದ್ರಾದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದಾರೆ.
ಶೀಘ್ರದಲ್ಲಿ ರಾಹುಲ್ – ಅಥಿಯಾ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸುನಿಲ್ ಶೆಟ್ಟಿ ಸಂದರ್ಶನವೊಂದರಲ್ಲಿ ಸ್ಪಷ್ಟನೆ ಕೊಟ್ಟು, ವದಂತಿಗೆ ತೆರೆ ಎಳೆದಿದ್ದಾರೆ.
ಇಬ್ಬರು ಮದುವೆಯಾಗುವುದು ಖಚಿತ. ಆದರೆ ರಾಹುಲ್ ಸತತವಾಗಿ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಏಷ್ಯಾಕಪ್, ಅದಾದ ಅನಂತರ ವಿಶ್ವಕಪ್, ಆಮೇಲೆ ದಕ್ಷಿಣ ಆಫ್ರಿಕಾ ಪ್ರವಾಸ, ಅನಂತರ ಆಸ್ಟ್ರೇಲಿಯ… ಹೀಗೆ ನಿರಂತರ ಪ್ರವಾಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಮಕ್ಕಳಿಗೆ ಯಾವಾಗ ಬಿಡುವು ಸಿಗುತ್ತದೋ ಆಗ ಮದುವೆಯಾಗಲಿದೆ. ಒಂದೆರಡು ದಿನಗಳ ಬಿಡುವು ವೇಳೆ ಮದುವೆ ಸಾಧ್ಯವಿಲ್ಲ ಎಂದು ಸುನಿಲ್ ಹೇಳಿದರು.

