HomeSportsಕೆ ಎಲ್ ರಾಹುಲ್ ಹೊರತಾಗಿಯೇ ಆರಂಭವಾಯಿತು ಮೂರನೇ ಟೆಸ್ಟ್!

ಕೆ ಎಲ್ ರಾಹುಲ್ ಹೊರತಾಗಿಯೇ ಆರಂಭವಾಯಿತು ಮೂರನೇ ಟೆಸ್ಟ್!

ಭಾರತ ಹಾಗು ಆಸ್ಟ್ರೇಲಿಯಾ ವಿರುದ್ಧದ ‘ಬಾರ್ಡರ್ ಗವಾಸ್ಕರ್ ಟ್ರೋಫಿ’ ಒಂದು ಹೈ ವೋಲ್ಟೇಜ್ ಟೆಸ್ಟ್ ಸರಣಿ. ಪ್ರಪಂಚದಾದ್ಯಂತದ ಅದೆಷ್ಟೋ ಕ್ರಿಕೆಟ್ ಪ್ರೇಮಿಗಳು ಈ ಸರಣಿಯನ್ನ ಒಂದಿನಿತು ಬಿಡದೇ ನೋಡುವವರಿದ್ದಾರೆ. ಈಗಾಗಲೇ ಎರಡು ಪಂದ್ಯಗಳು ಮುಗಿದಿರುವ ಈ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದು(ಮಾರ್ಚ್ 1) ಆರಂಭವಾಗಿದೆ. ಈ ಪಂದ್ಯದ ಆರಂಭದಲ್ಲಿಯೇ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ, ಅದರಲ್ಲೂ ಕೆ ಎಲ್ ರಾಹುಲ್ ಅವರ ಅಭಿಮಾನಿಗಳಿಗೆ ನಿರಾಸೆಯೊಂದು ಕಾಡಿದೆ.

‘ಬಾರ್ಡರ್ ಗವಾಸ್ಕರ್ ಟ್ರೋಫಿ’ಯ ಎರಡನೇ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅವರನ್ನು ಉಪನಾಯಕ(Vice-Captain) ಪಟ್ಟದಿಂದ ಕೆಳಗಿಳಿಸಲಾಗಿತ್ತು. ಮೊದಲ ಎರಡೂ ಪಂದ್ಯಗಳಲ್ಲಿ ಕೆ ಎಲ್ ಅವರ ಪ್ರದರ್ಶನ ಹೇಳಿಕೊಳ್ಳುವಂತದ್ದೇನು ಇರಲಿಲ್ಲ. ಹಲವು ದಿನಗಳಿಂದಲೇ ತಮ್ಮ ಕ್ರಿಕೆಟ್ ವೃತ್ತಿಯಲ್ಲಿನ ಕತ್ತಲ ಕಾಲವನ್ನ ಕಾಣುತ್ತಿದ್ದ ರಾಹುಲ್ ಅವರ ಮಂದಗತಿಯ ಪ್ರದರ್ಶನ ‘ಬಾರ್ಡರ್ ಗವಾಸ್ಕರ್ ಟ್ರೋಫಿ’ಯಲ್ಲೂ ಮುಂದುವರೆದಿತ್ತು. ಅದೇ ಕಾರಣಕ್ಕೆ ಉಪನಾಯಕನ ಪಟ್ಟ ಕೈತಪ್ಪಿತು ಎನ್ನಲಾಗುತ್ತಿದೆ. ಈ ಸಂಧರ್ಭದಲ್ಲಿ ಹಲವು ಕ್ರಿಕೆಟ್ ಪ್ರೇಮಿಗಳು ಕೆ ಎಲ್ ರಾಹುಲ್ ಅವರಿಗೆ ಇನ್ನೆಷ್ಟು ಅವಕಾಶಗಳು? ಅವರನ್ನ ಕಣಕ್ಕಿಳಿಯುವ 11 ಜನರ ಪಟ್ಟಿಗೆ ಸೇರಿಸಬಾರದು ಎಂದರೆ, ಇನ್ನು ಕೆಲವರು ಅವರೊಬ್ಬ ಪ್ರತಿಭಾನ್ವಿತ ಆಟಗಾರ. ಹಾಗಾಗಿ ಇನ್ನಷ್ಟು ಅವಕಾಶಗಳು ಕೊಡುವದರಲ್ಲಿ ತಪ್ಪಿಲ್ಲ ಎಂದಿದ್ದರು. ಸಾಮಾಜಿಕ ಜಾಲತಾಣಗಳು ಈ ಎಲ್ಲಾ ಅಭಿಪ್ರಾಯಗಳಿಂದ ತುಂಬಿ ಹೋಗಿತ್ತು. ಅಂತಿಮವಾಗಿ ಇಂದು ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅವರನ್ನ ತಂಡದ ಆರಂಭಿಕ 11 ಜನರ ಪಟ್ಟಿಯಿಂದಲೂ ಕೈ ಬಿಡಲಾಯಿತು. ಇಂದು ನಡೆಯುತ್ತಿರುವ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅವರ ಬದಲಾಗಿ ಶುಭ್ಮನ್ ಗಿಲ್ ಅವರು ಆರಂಭಿಕ ದಾಂಡಿಗನಾಗಿ ಆಡುತ್ತಿದ್ದಾರೆ.

ಇಂದಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ ಭಾರತ ತಂಡ. ರೋಹಿತ್ ಶರ್ಮ ನೇತೃತ್ವದ ಈ ತಂಡದಲ್ಲಿ ಕೆ ಎಲ್ ರಾಹುಲ್ ಅವರ ಬದಲಿಗೆ ಗಿಲ್ ತಂಡ ಸೇರಿದರೆ, ವಿಶ್ರಾಂತಿ ಪಡೆದ ಮೊಹಮದ್ ಶಮಿ ಅವರ ಬದಲಿಗೆ ಉಮೇಶ್ ಯಾದವ್ ಕಣಕ್ಕಿಳಿದಿದ್ದಾರೆ. ರೋಹಿತ್ ಶರ್ಮ(ನಾಯಕ), ಶುಭ್ಮನ್ ಗಿಲ್, ಚೇತೇಶ್ವರ್ ಪುಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಸ್ ಭರತ್(ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್ ಹಾಗು ಉಮೇಶ್ ಯಾದವ್ ಹನ್ನೊಂದು ಜನರ ತಂಡವಾಗಿ ಕಣಕ್ಕಿಳಿದಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲೂ ಕೂಡ ನಾಯಕ ಪ್ಯಾಟ್ ಕಮಿನ್ಸ್ ಅವರು ಆಟವಾಡಲು ಲಭ್ಯವಿರದ ಕಾರಣ ಸ್ಟೀವ್ ಸ್ಮಿತ್ ಅವರು ತಂಡವನ್ನ ಮುನ್ನಡೆಸಲಿದ್ದಾರೆ. ತಂಡದ ಪ್ರಭಲ ಆಟಗಾರರಾದ ಕ್ಯಾಮೆರನ್ ಗ್ರೀನ್ ಹಾಗು ಮಿಚೆಲ್ ಸ್ಟಾರ್ಕ್ ಅವರು ಈ ಪಂದ್ಯದ ಮೂಲಕ ಮರಳಿದ್ದಾರೆ. ಒಂದೊಳ್ಳೆ ರೋಚಕ ಕ್ರಿಕೆಟ್ ಪಂದ್ಯದ ನಿರೀಕ್ಷೆಯಲ್ಲಿ ಪ್ರಪಂಚದ ಎಲ್ಲೆಡೆಯ ಕ್ರಿಕೆಟ್ ಪ್ರೇಮಿಗಳಿದ್ದಾರೆ.

RELATED ARTICLES

Most Popular

Share via
Copy link
Powered by Social Snap