ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಸ್ಟಾರ್ ಆಟಗಾರರರಲ್ಲಿ ಒಬ್ಬರಾದ ಕನ್ನಡಿಗ ಕೆ ಎಲ್ ರಾಹುಲ್ ಅವರು ಸದ್ಯ ತಮ್ಮ ವೃತ್ತಿಜೀವನದಲ್ಲಿನ ಕರಾಳ ಸಮಯವನ್ನ ಕಾಣುತ್ತಿದ್ದಾರೆ. ಇತ್ತೀಚೆಗೆ ನಡೆದ ಪಂದ್ಯಗಳಲ್ಲಿ ರಾಹುಲ್ ಅವರ ಪ್ರದರ್ಶನ ಅವರ ಅಭಿಮಾನಿಗಳಲ್ಲೂ, ಕ್ರಿಕೆಟ್ ಪ್ರೇಮಿಗಳಲ್ಲೂ ನಿರಾಸೆ ಮೂಡಿಸಿದೆ. ಇದೆ ಕಾರಣದಿಂದಲೇ ಎಲ್ಲೆಡೆಯಿಂದ ರಾಹುಲ್ ಅವರ ವಿರುದ್ಧದ ಮಾತುಗಳೇ ಕೇಳಿಬರುತ್ತಿವೆ. ಟೀಮ್ ಇಂಡಿಯಾ ತಂಡ ಯಶಸ್ವಿ ಪ್ರದರ್ಶನ ನೀಡುತ್ತಲೇ ಇದ್ದರೂ, ಈ ನಿಟ್ಟಿನಲ್ಲಿ ರಾಹುಲ್ ಅವರ ಕೊಡುಗೆ ಕಾಣಸಿಗುವುದು ಕಷ್ಟವೇ. ಆದರೂ ಭಾರತೀಯ ತಂಡ, ಹಲವು ಪಂದ್ಯಗಳ ಸತತ ವೈಫಲ್ಯದ ಬೆನ್ನಲ್ಲೂ, ರಾಹುಲ್ ಅವರಿಗೆ ಮರಳಿ ಅವಕಾಶ ನೀಡುತ್ತಲೇ ಬಂದಿದ್ದಾರೆ. ಆದರೆ ಈಗ ರಾಹುಲ್ ಅವರಿಗೆ ಆಘಾತವೊಂದು ಎದುರಾಗಿದೆ.
ಕೆ ಎಲ್ ರಾಹುಲ್ ಅವರು ಭಾರತೀಯ ಕ್ರಿಕೆಟ್ ತಂಡದ ಉಪನಾಯಕ(Vice-captain) ಆಗಿ ಇದ್ದವರು. ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ತಂಡದ ಎದುರಿನ ‘ಬಾರ್ಡರ್ ಗವಾಸ್ಕರ್ ಟ್ರೋಫಿ’ ಟೆಸ್ಟ್ ಸರಣಿಯಲ್ಲೂ ಕೂಡ ರಾಹುಲ್ ಅವರಿಗೆ ಈ ಸ್ಥಾನ ಮೀಸಲಿತ್ತು. ಸರಣಿಯ ಮೊದಲ ಎರಡು ಪಂದ್ಯಗಳು ಮುಗಿದಿದ್ದು, ಎರಡರಲ್ಲೂ ಭಾರತ ತಂಡ ಭರ್ಜರಿ ಜಯ ಸಾಧಿಸಿದ್ದಾರೆ. ರಾಹುಲ್ ಅವರ ಮಂದಗತಿಯ ಪ್ರದರ್ಶನದ ಹಿನ್ನೆಲೆಯಲ್ಲೂ, ಅವರೇ ಮೊದಲ ಎರಡೂ ಪಂದ್ಯಗಳಿಗೆ ತಂಡದ ಉಪನಾಯಕನಾಗಿದ್ದರು. ಎರಡೂ ಪಂದ್ಯಗಳು ಸೇರಿಯು ಕೂಡ ರಾಹುಲ್ ಅವರ ಬ್ಯಾಟಿನಿಂದ ಬಂದಂತಹ ರನ್ ಗಳು 50 ದಾಟಿಲ್ಲ. ಹೀಗಿರುವಾಗ ಮೂರನೇ ಟೆಸ್ಟ್ ಪಂದ್ಯಕ್ಕೆ ತಮ್ಮ 16 ಆಟಗಾರರ ತಂಡವನ್ನ ಘೋಷಿಸಿರುವ ಬಿಸಿಸಿಐ, ಈ ಸಾಲಿನಲ್ಲಿ ಕೆ ಎಲ್ ರಾಹುಲ್ ಅವರ ಹೆಸರಿಗೆ ಅಂಟಿಕೊಂಡಿದ್ದ ‘ಉಪನಾಯಕ’ ಎಂಬ ಪದವಿಯನ್ನ ತೆಗೆದಿದ್ದಾರೆ. ಮೂಲಗಳ ಪ್ರಕಾರ ಟೀಮ್ ಇಂಡಿಯಾದ ಮುಂದಿನ ಟೆಸ್ಟ್ ಉಪನಾಯಕನನ್ನು ಇನ್ನು ಆರಿಸಲಾಗಿಲ್ಲ. ಮಾರ್ಚ್ 1 ರಂದು ಆರಂಭವಾಗಲಿರೋ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮ ಅವರು ತಮ್ಮ ಉಪನಾಯಕನನ್ನು ಆಯ್ಕೆ ಮಾಡಲಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನದಲ್ಲಿ ಏಳು ಬೀಳು ಸಹಜ. ಪ್ರತಿಯೊಬ್ಬ ಆಟಗಾರನೂ ಕೂಡ ಈ ರೀತಿಯ ಸಮಯವನ್ನ ದಾಟಿಯೇ ಉತ್ತುಂಗ ಏರಿದವರು. ಹಾಗಾಗಿ ಕೆ ಎಲ್ ರಾಹುಲ್ ಅವರ ಮೇಲಿನ ಭರವಸೆ ಹೆಚ್ಚಿನವರಲ್ಲಿ ಹಾಗೆಯೇ ಇದೆ. ಉಪನಾಯಕನ ಪಟ್ಟದಿಂದ ಇಳಿದರೂ, ಅಂಕಣಕ್ಕಿಳಿಯುವ 11 ಜನರ ತಂಡದಲ್ಲಿ ಇದ್ದೇ ಇರುವ ರಾಹುಲ್ ಅವರಿಗೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಲು ಅವಕಾಶ ಇನ್ನೂ ಇದೆ. ರಾಹುಲ್ ಅವರು ಮರಳಿ ತಮ್ಮ ಹಳೆಯ ಆಟಕ್ಕೆ ಮರಳಲು ಅಸಂಖ್ಯ ಅಭಿಮಾನಿಗಳು ಕಾಯುತ್ತಿದ್ದಾರೆ.

