‘ರತ್ನನ್ ಪ್ರಪಂಚ’,’ಗುರುದೇವ್ ಹೊಯ್ಸಳ’ದಂತಹ ಉತ್ತಮ ಸಿನಿಮಾಗಳನ್ನ ಕನ್ನಡಿಗರಿಗೆ ನೀಡಿದಂತಹ ಕೆ ಆರ್ ಜಿ ಸ್ಟುಡಿಯೋಸ್ ಇದೀಗ ತನ್ನ ನಾಲ್ಕನೇ ಸಿನಿಮಾವನ್ನ ಘೋಷಣೆ ಮಾಡಿದೆ. ಅದುವೇ ‘ಕಿರಿಕ್et 11’. ವಿಭಿನ್ನವಾಗಿರುವ ಈ ಶೀರ್ಷಿಕೆಯೇ ಹೇಳುವಂತೆ ಈ ಚಿತ್ರದಲ್ಲಿ ಕ್ರಿಕೆಟ್ ಕೂಡ ಇರುತ್ತದಂತೆ ಜೊತೆಗೆ ಕಿರಿಕ್ ಕೂಡ. ಇಂದು ಘೋಷಣೆಯಾಗಿರುವ ಈ ಸಿನಿಮಾದಲ್ಲಿ ‘ಗುಳ್ಟು’ ಹಾಗು ಇತ್ತೀಚಿನ ‘ಗುರುದೇವ್ ಹೊಯ್ಸಳ’ ಸೇರಿದಂತೆ ಇನ್ನು ಹಲವು ಸಿನಿಮಾಗಳ ಖ್ಯಾತಿಯ ನವೀನ್ ಶಂಕರ್ ಹಾಗು ‘ಹಂಬಲ್ ಪೊಲಿಟಿಶಿಯನ್ ನೊಗರಾಜ್’ ಸಿನಿಮಾ ಖ್ಯಾತಿಯ ದಾನಿಶ್ ಶೇಟ್ ಅವರು ಮುಖ್ಯಪಾತ್ರಧಾರಿಗಳಾಗಿ ನಟಿಸಲಿದ್ದಾರೆ.


ಒಂದಷ್ಟು ಯುವಕರು, ತಮ್ಮ ಜೀವನದಲ್ಲಿ ಏನೂ ಸರಿಯಾಗದಿದ್ದಾಗ, ಮುಂದಿನ ದಾರಿ ಏನೂ ಅಂತ ತಿಳಿಯದೇ ಇದ್ದಾಗ ಒಂದು ಆಲೋಚನೆ ಮಾಡುತ್ತಾರೆ. ನಮ್ಮ ದೇಶದಲ್ಲಿ ಅತ್ಯಂತ ಸಂತಸದಿಂದ ಆಡುವ, ಅಷ್ಟೇ ಸಂತಸ ನಿರೀಕ್ಷೆಗಳ ಜೊತೆಗೆ ನೋಡುವ ಕ್ರಿಕೆಟ್ ನಲ್ಲೇ ಏನಾದರೂ ಸಾಧಿಸೋಣ ಎಂದು. ಇದರಿಂದ ಅವರ ಜೀವನ ಎಲ್ಲಿಗೆ ಹೋಗಿ ತಲುಪುತ್ತದೆ, ಏನೆಲ್ಲಾ ಆಗುತ್ತದೆ ಎಂಬುದೇ ಸಿನಿಮಾದ ಕಥೆ. ಈ ಹೊಸಪರಿಯ ಕಥೆಯನ್ನು ಮನೋಜ್ ಕುಮಾರ್ ಕಾಲವನನ್ ಅವರು ಬರೆದಿದ್ದಾರೆ. ಓಟಿಟಿ ಯಲ್ಲಿ ಬಾರೀ ಸದ್ದು ಮಾಡಿ, ಅಪಾರ ಜನರ ನೆಚ್ಚಿನವುಗಳಾದ ‘ದಿ ಫ್ಯಾಮಿಲಿ ಮ್ಯಾನ್’ ಹಾಗು ‘ಫರ್ಜಿ’ಗೆ ಕಥೆ ಹೆಣೆದಿರುವ ಸುಮನ್ ಕುಮಾರ್ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದ ‘ರಘು ತಾತ’ ಎಂಬ ಸಿನಿಮಾಗೆ ಕೂಡ ಸುಮನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇನ್ನು ಚಿತ್ರಕ್ಕೆ ಜನಪ್ರಿಯ ಸಂಗೀತಗಾರ ವಾಸುಕಿ ವೈಭವ್ ಅವರ ಸಂಗೀತ ಇರಲಿದೆ.


ಒಬ್ಬರು ತಮ್ಮ ಗಂಭೀರ ನಟನೆಗೆ ಹೆಸರಾದ ನವೀನ್ ಶಂಕರ್, ಇನ್ನೊಬ್ಬರು ತಮ್ಮ ಹಾಸ್ಯಕ್ಕೆ ಹೆಸರಾದ ದಾನಿಶ್ ಶೇಟ್. ಇವರಿಬ್ಬರನ್ನು ಜೊತೆಯಾಗಿ ತೆರೆಮೇಲೆ ನೋಡಬಹುದು ಎಂಬ ಹಂಬಲವೇ ಪ್ರೇಕ್ಷಕರನ್ನ ಸಂತುಷ್ಟರನ್ನಾಗಿಸಿದೆ. ಜೊತೆಗೆ ಇದು ಕೆ ಆರ್ ಜಿ ತಂಡದ ನಿರ್ಮಾಣದ ನಾಲ್ಕನೇ ಸಿನಿಮಾ ಆಗಿರುವುದು ಇನ್ನಷ್ಟು ಮೌಲ್ಯ ನೀಡಿದೆ. ಸಧಭಿರುಚಿಯ ಸಿನಿಮಾಗಳನ್ನ ನೀಡುತ್ತಾ ಬಂದಿರುವ ಕೆ ಆರ್ ಜಿ ಅವರಿಂದ ಇನ್ನೊಂದು ಉತ್ತಮ ಸಿನಿಮಾದ ನಿರೀಕ್ಷೆಯಲ್ಲಿ ಪ್ರೇಕ್ಷಕರಿದ್ದಾರೆ. ಸದ್ಯ ಈ ‘ಕಿರಿಕ್et 11’ ಚಿತ್ರದ ಶೂಟಿಂಗ್ ಈ ಅಕ್ಟೋಬರ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನ ಜೊತೆಗೆ ಪ್ರಾರಂಭವಾಗಲಿದೆ.

