ನಮ್ಮ ಕನ್ನಡದ ಹೆಮ್ಮೆಯ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಹೊರರಾಜ್ಯಗಳಲ್ಲೂ ಪ್ರಖ್ಯಾತರು. ತಮ್ಮ ಸಿನಿಮಾಗಳು ಹಾಗು ಸಿನಿಮಾಪ್ರೇಮದಿಂದಾಗಿ ಹಲವು ಕಲಾವಿದರ ಸ್ನೇಹ ರಕ್ಷಿತ್ ಅವರಿಗಿದೆ. ಅಂತೆಯೇ ಇದೀಗ ಮಲಯಾಳಂನ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರೊಂದಿಗೆ ರಕ್ಷಿತ್ ಶೆಟ್ಟಿ ಕೈಜೋಡಿಸಿದ್ದಾರೆ. ದುಲ್ಕರ್ ಮುಂದಿನ ಸಿನಿಮಾ, ಬಹುನಿರೀಕ್ಷಿತ ‘ಕಿಂಗ್ ಆಫ್ ಕೊಥಾ’ಗೆ ರಕ್ಷಿತ್ ಶೆಟ್ಟಿ ಸಾಥ್ ನೀಡಲಿದ್ದಾರೆ.
ದುಲ್ಕರ್ ಸಲ್ಮಾನ್ ನಿರ್ಮಿಸಿ ನಟಿಸುತ್ತಿರುವ ಮಲಯಾಳಂ ಭಾಷೆಯ ಪಾನ್ ಇಂಡಿಯನ್ ಸಿನಿಮಾ ‘ಕಿಂಗ್ ಆಫ್ ಕೊಥಾ’. ಇದೊಂದು ಗ್ಯಾಂಗ್ ಸ್ಟರ್ ಸಿನಿಮಾ ಆಗಿರಲಿದ್ದು, ಮೊಲಿವುಡ್ ನಲ್ಲಿ ಬಾರೀ ಸದ್ದು ಮಾಡುತ್ತಿದೆ. ಸದ್ಯ ಈ ಚಿತ್ರದ ಟೀಸರ್ ಬಿಡುಗಡೆಗೆ ತಂಡ ಮುಹೂರ್ತ ಇಟ್ಟಿದೆ.


ಇದೊಂದು ಪಾನ್ ಇಂಡಿಯನ್ ಸಿನಿಮಾ ಆಗಿರಲಿದ್ದು, ಮಲಯಾಳಂ, ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ಟೀಸರ್ ಹೊರಬೀಳಲಿದೆ. ಸದ್ಯ ಈ ‘ಕಿಂಗ್ ಆಫ್ ಕೊಥಾ’ನ ಕನ್ನಡ ಟೀಸರ್ ಅನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ. ಟೀಸರ್ ನಾಳೆ, ಜೂನ್ 28ರಂದು ಬಿಡುಗಡೆಯಾಗಲಿದೆ.
ಉಳಿದಂತೆ ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು, ತಮಿಳಿನಲ್ಲಿ ಸಿಲಂಬರಸನ್ ಟಿ ಆರ್ ಅವರು ‘ಕಿಂಗ್ ಆಫ್ ಕೊಥಾ’ನ ಮೊದಲ ಝಲಕ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಅಭಿಲಾಷ್ ಜೋಶಿ ಅವರು ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರದಿಂದ ಈಗಾಗಲೇ ‘ಪೀಪಲ್ ಆಫ್ ಕೊಥಾ’ ಎಂಬ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಬಾರೀ ಸದ್ದು ಮಾಡುತ್ತಿದೆ. ದುಲ್ಕರ್ ಅವರ ಜೊತೆಗೆ ಸಿನಿಮಾದಲ್ಲಿ ಐಶ್ವರ್ಯ ಲಕ್ಷ್ಮಿ, ಚೆಂಬನ್ ವಿನೋದ್, ಸೌಬಿನ್ ಶಾಹಿರ್, ಅನಿಖ ಸುರೇಂದ್ರನ್ ಸೇರಿದಂತೆ ಹಲವು ಪ್ರಖ್ಯಾತ ನಟರು ಬಣ್ಣ ಹಚ್ಚಿದ್ದಾರೆ. ಆಗಸ್ಟ್ 25ಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.



