ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆ ಕೇಳದೇ ಇರುವವರೂ ಇರುವುದು ಬಾರೀ ಅಪರೂಪ ಎನ್ನಬಹುದು. ಇಲ್ಲಿಯವರೆಗೆ ಯಾವುದು? ಯಾರು ಡೈರೆಕ್ಟರ್? ಎಂದು ಕೇಳುತ್ತಿದ್ದವರು, ಇತ್ತೀಚೆಗೆ ಟೀಸರ್ ಟೀಸರ್ ಅನ್ನುತ್ತಿದ್ದರು. ಸದ್ಯ ಇಷ್ಟೆಲ್ಲಾ ನಿರೀಕ್ಷೆ ಹುಟ್ಟಿಸಿದ್ದ ಸುದೀಪ್ ಅವರ 46ನೇ ಸಿನಿಮಾ, ಇನ್ನು ಹೆಸರಿಡದ ‘ಕಿಚ್ಚ46’ನಿಂದ ಟೀಸರ್ ಅಂದು ಹೊರಬಿದ್ದಿದೆ. ಹಲವಾರು ಹಿಟ್ ಸಿನಿಮಾಗಳನ್ನ ನೀಡಿರುವ ಸುದೀಪ್ ಅವರ ಮುಂದಿನ ಸಿನಿಮಾ ಹೇಗಿರಬಹುದು ಎಂದು ಕಾಯುತ್ತಿದ್ದ ಸಿನಿಪ್ರೇಮಿಗಳಿಗೆ ಒಂದು ಮಾಸ್ ರಸದೌತಣವೆ ದೊರೆತಿದೆ.
ಕತ್ತಲ ದಾರಿ, ಅದ್ಯಾವುದೋ ಹಳೆ ಗಾಡಿ. ಗಾಡಿಯ ತುಂಬಾ ರಕ್ತ, ಅಲ್ಲಲ್ಲಿ ತುಂಡಾಗಿ ಬಿದ್ದ ಕೈಗಳು. ಹೆದರಿಕೊಂಡು ಗಾಡಿ ಓಡಿಸುತ್ತಿರುವವನೊಬ್ಬ. ಹಿಂದೆ ಕೂತು ತಗುಲಿರುವ ಬುಲೆಟ್ ಗಳನ್ನ ತನ್ನ ಕೈಯಾರೆ ತೆಗೆದುಕೊಳ್ಳುತ್ತಿರುವ ಕಥಾ ನಾಯಕ. ‘ಅಷ್ಟು ಜನ ಹೋದ್ರು ಒಬ್ಬನನ್ನ ಬೇಟೆಯಾಡಲು ಆಗಲಿಲ್ವಾ?’ ಎಂದು ಯಾರೋ ವಾಕಿಯಲ್ಲಿ ಕೂಗಿದ್ದು ಕೇಳಿ, ಆ ಡ್ರೈವರ್ ಅನ್ನು ಕೂಡ ಗನ್ ತೆಗೆದುಕೊಂಡು ಶೂಟ್ ಮಾಡಿ, ಬೆಳಕಿಗೆ ಬರುತ್ತಾರೆ ನಮ್ಮ ಕಿಚ್ಚ ಸುದೀಪ್.


ರಕ್ತಸಿಕ್ತ ಮುಖ, ಬಾಯಲ್ಲಿ ಸಿಗರೇಟ್, ಕೆದರಿದ ಕೂದಲು. “I’m not a human, I’m a demon!” ಎಂದು ಹೊರಬರುತ್ತಾರೆ. ಅಲ್ಲಾದ ದೃಶ್ಯಗಳು ಕೂಡ ಅದನ್ನೇ ಹೇಳುತ್ತವೆ. ಯಪ್ಪಾ ಸುದೀಪ್ ಅವರ ಈ ಪಕ್ಕಾ ಮಾಸ್ ಲುಕ್ ಗೆ ಫಿದಾ ಆಗದವರೇ ಇಲ್ಲ. ಒಟ್ಟಿನಲ್ಲಿ ಬಹಳ ದಿನಗಳ ನಂತರ ಒಂದು ಔಟ್ ಅಂಡ್ ಔಟ್ ಮಾಸ್ ಕಮರ್ಷಿಯಲ್ ಎಂಟರ್ಟೈನರ್ ರೀತಿಯ ಸಿನಿಮಾದಲ್ಲಿ ಸುದೀಪ್ ನಟಿಸುತ್ತಿದ್ದಾರ? ಖಾತ್ರಿಯಾಗಿ ಯಾವುದು ತಿಳಿದಿಲ್ಲ. ಆದರೆ ‘ಕಿಚ್ಚ46’ ನ ಪ್ರಪಂಚ ಮಾತ್ರ ಸಕ್ಕತ್ ರಾವ್ ಆಗಿ ಅಷ್ಟೇ ರಕ್ತಸಿಕ್ತವಾಗಿತ್ತು.
ತಮಿಳು ಮೂಲದ ನಿರ್ದೇಶಕರಾದ ವಿಜಯ್ ಕಾರ್ತಿಕೆಯ ಅವರ ಚೊಚ್ಚಲ ನಿರ್ದೇಶನದಲ್ಲಿ ಸುದೀಪ್ ಅವರು ನಟಿಸುತ್ತಿದ್ದು, ಅವರದೇ ಕಿಚ್ಚ ಕ್ರಿಯೇಷನ್ಸ್ ಹಾಗು ಕಲೈಪುಲಿ ಎಸ್ ತನು ಅವರ ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಟೀಸರ್ ನ ತುಂಬಾ ಮಂದವಾಗೆ ಕೇಳಿಸುತ್ತಿದ್ದ ಅಜನೀಶ್ ಲೋಕನಾಥ ಅವರ ಹಿನ್ನೆಲೆ ಸಂಗೀತ ಮೈ ಜುಮ್ಮೆನಿಸಿತ್ತು. ಒಟ್ಟಿನಲ್ಲಿ ‘ಕಿಚ್ಚ46’ ನ ಟೀಸರ್ ಎಲ್ಲೆಡೆ ಬಾರೀ ಸದ್ದು ಮಾಡುತ್ತಿದೆ. ಕಾದು ಕೂತಿದ್ದ ಅಭಿಮಾನಿಗಳಿಗೆ ರಸದೌತಣವೇ ಸಿಕ್ಕಿದೆ.

