ಈ ಕಳೆದೆರಡು ದಿನಗಳಿಂದ ಸ್ಯಾಂಡಲ್ವುಡ್ ತುಂಬಾ ಒಂದೇ ಸುದ್ದಿ. “ಕಿಚ್ಚ ಸುದೀಪ್ ಅವರು ನನ್ನಿಂದ ಹಣ ತೆಗೆದುಕೊಂಡು, ಜೊತೆಯಾಗಿ ಸಿನಿಮಾ ಮಾಡುತ್ತೇನೆ ಎಂದು ಒಪ್ಪಿಕೊಂಡು ಸುಮಾರು ಎಂಟು ವರ್ಷಗಳು ಕಳೆದಿವೆ, ಇನ್ನೂ ಕೂಡ ಡೇಟ್ಸ್ ಕೊಡುತ್ತಿಲ್ಲ” ಎಂದು ಪ್ರಖ್ಯಾತ ನಿರ್ಮಾಪಕರಾದ ಎಂ ಎನ್ ಕುಮಾರ್ ಅವರು ಮಾಧ್ಯಮಗಳ ಸುದ್ದಿಗೋಷ್ಠಿ ಕರೆಸಿ ಎಲ್ಲರೆದುರು ಆರೋಪಿಸಿದ್ದಾರೆ. ಈ ಬಗ್ಗೆ ಇಡೀ ರಾಜ್ಯದಾದ್ಯಂತ ಪ್ರತಿಕ್ರಿಯೆಗಳು ಬರುತ್ತಿವೆ. ಎಂ ಎನ್ ಕುಮಾರ್ ಅವರನ್ನ ಬೆಂಬಲಿಸಿ ಸುರೇಶ್ ಹಾಗು ಇತರರು ನಿಂತರೆ, ಸುದೀಪ್ ಅವರ ಜೊತೆಗೆ ಬಹುಪಾಲು ಚಿತ್ರರಂಗ ಹಾಗು ಅವರ ಅಭಿಮಾನಿಗಳು ನಿಂತಿದ್ದರು. ಸುದೀಪ್ ಆಪ್ತ ಹಾಗು ಕನ್ನಡದ ನಿರ್ಮಾಪಕ ಜಾಕ್ ಮಂಜು ಅವರು ಸುದೀಪ್ ಪರವಾಗಿ ಸುದ್ದಿಗೋಷ್ಠಿಗಳಲ್ಲಿ ಮಾತನಾಡಿದ್ದರು. ಆದರೆ ಈ ವರೆಗೆ ಸುದೀಪ್ ಅವರು ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ್ ಸುದೀಪ್ ಖುದ್ದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.


ಈ ಘಟನೆಗೆ ಸಂಭಂಧಿಸಿದಂತೆ, ನಿರ್ಮಾಪಕ ಎಂ ಎನ್ ಕುಮಾರ್ ಹಾಗು ಸುರೇಶ್ ಅವರು ತಮಗೆ ಮಾಡಿದಂತಹ ತೇಜೋವಧೆಯನ್ನು ಖಂಡಿಸುತ್ತ, ಅದರ ಬಗೆಗೆ ತಮ್ಮ ಅಸಮಾಧಾನ ಹೊರಹಾಕುತ್ತ, ವಾಣಿಜ್ಯ ಮಂಡಳಿಗೆ ಕಿಚ್ಚ ಭಾವುಕ ಪತ್ರವನ್ನ ಬರೆದಿದ್ದಾರೆ. ಸುಮಾರು 26 ವರ್ಷಗಳಿಂದ, ಈವರೆಗೆ ಸುಮಾರು 45 ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಾ, ಕನ್ನಡ ಚಿತ್ರರಂಗಕ್ಕೆ ನನ್ನ ಅಳಿಲುಸೇವೆ ಮಾಡುತ್ತಾ ಬಂದಿದ್ದೇನೆ. ಇಲ್ಲಿಯವರೆಗೆ ನಾನು ಕಾಪಾಡಿಕೊಂಡು ಬಂದಂತಹ ಗೌರವ, ಪ್ರಾಮಾಣಿಕತೆಗೆ ಮಣ್ಣು ಎರಚುವ ಕೆಲಸ ನಡೆಯುತ್ತಿದೆ. ನನ್ನ ಮೇಲೆ ಆಧಾರವಿಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಹಾಗಾಗಿ ನಾನು ಇದನ್ನೆಲ್ಲಾ ನ್ಯಾಯಾಲಯದ ಮೊರೆ ಹೋಗಿಯೇ ಸರಿಮಾಡಿಕೊಳ್ಳಲು ನಿಮ್ಮ ಅನುಮತಿ ಕೇಳಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಕಿಚ್ಚ.
ನಿರ್ಮಾಪಕ ಎಂ ಎನ್ ಕುಮಾರ್ ಹಾಗು ಸುರೇಶ್ ಇಬ್ಬರಿಗೂ ಕೂಡ ಸುದೀಪ್ ನ್ಯಾಯಾಲಯದ ಮೂಲಕ ನೋಟೀಸ್ ಕಳಿಸಿದ್ದಾರೆ. ಅದರಂತೆಯೇ ನ್ಯಾಯದೇವತೆಯ ಮುಂದೆಯೇ ಎಲ್ಲ ತೀರ್ಮಾನ ಕೈಗೊಳ್ಳಲು ವಾಣಿಜ್ಯ ಮಂಡಳಿಯ ಅನುಮತಿ ಕೋರಿದ್ದಾರೆ. ಈ ಹಿಂದೆಯೂ ಕೂಡ ಮಂಡಳಿಗೆ ಹಾಗು ಚಿತ್ರರಂಗದ ಹಿರಿಯರಿಗೆ ಗೌರವ ನೀಡುತ್ತಾ ಬಂದಿದ್ದೇನೆ, ಇನ್ನೂ ಮುಂದೆ ಕೂಡ ನೀಡುತ್ತಲಿರುತ್ತೇನೆ. ನನ್ನ ಮೇಲಿನ ಅಪರಾಧಗಳನ್ನ ಅಲ್ಲಗಳೆಯಲು ನನ್ನ ಬಳಿ ಆಧಾರಗಳಿವೆ. ಅದರಂತೆಯೇ ನ್ಯಾಯಯುತ ದಾರಿಯಲ್ಲಿ ನಾನು ಇದನ್ನೆಲ್ಲಾ ಸರಿಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂಬುದು ಕಿಚ್ಚ ಸುದೀಪ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬರೆದಿರುವ ಪತ್ರದ ಸಾರಾಂಶ. ಈ ಘಟನೆ ಇನ್ನೂ ಎಲ್ಲಿಗೆ ಹೋಗಿ ತಲುಪಲಿದೆ ಎಂದು ಕಾದುನೋಡಬೇಕಿದೆ.

