ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ, ಅದೆಷ್ಟೋ ಹಿಟ್ ಸಿನಿಮಾಗಳ ಸರ್ದಾರ ಜೋಗಿ ಪ್ರೇಮ್ ಅವರು ಸದ್ಯ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜೊತೆಗೇ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿರುವುದು ಗೊತ್ತಿರುವ ವಿಚಾರ. ಅದುವೇ ‘KD’. ಪಕ್ಕ ಆಕ್ಷನ್ ಸಿನಿಮಾ ಆಗಿರಲಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ‘ಕೆಜಿಎಫ್’ನ ಅಧೀರ ಸಂಜಯ್ ದತ್ ಕೂಡ ನಟಿಸುತ್ತಿದ್ದಾರೆ. ಹೀಗಿರುವಾಗ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಸಂಜಯ್ ದತ್ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಇದೀಗ ಚಿತ್ರತಂಡ ಹಾಗು ಸಂಜು ಬಾಬ ಸ್ಪಷ್ಟನೆ ನೀಡಿದ್ದಾರೆ.
ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ಮಾಗಡಿ ರಸ್ತೆಯ ಸೀಗೇನಹಳ್ಳಿಯ ಸಮೀಪ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣದಲ್ಲಿನ ಆಕ್ಷನ್ ದೃಶ್ಯ ಒಂದಕ್ಕಾಗಿ, ಬಾಂಬ್ ಸ್ಫೋಟದ ಸನ್ನಿವೇಶ ಒಂದರ ಸಂಧರ್ಭದಲ್ಲಿ, ಗ್ಲಾಸ್ ಚೂರು ಒಂದು ಸಂಜಯ್ ದತ್ ಅವರಿಗೆ ಸಿಡಿದಿದೆ. ಅವರ ಕಣ್ಣಿನ ಕೆಳಭಾಗಕ್ಕೆ ಈ ಚೂರು ತಾಗಿ ಸಂಜಯ್ ದತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಶೂಟಿಂಗ್ ಸದ್ಯಕ್ಕೆ ನಿಲ್ಲಿಸಿ ಕೂಡಲೇ ಮುಂಬೈಗೆ ತೆರಳಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಈ ವಿಚಾರ ಎಲ್ಲೆಡೆ ವೈರಲ್ ಆಗತೊಡಗಿತು. ಸದ್ಯ ಈ ಎಲ್ಲಾ ಸುದ್ದಿಗಳಿಗೆ ಸಂಜಯ್ ದತ್ ಹಾಗು ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. “ನನಗೆ ಗಂಭೀರ ಗಾಯವಾಗಿದೆ ಎಂಬ ಸುದ್ದಿಗಳೆಲ್ಲ ಸಂಪೂರ್ಣ ಸುಳ್ಳು. ನಾನು ಸದ್ಯ ‘KD’ ಚಿತ್ರದ ಶೂಟಿಂಗ್ ನಲ್ಲಿದ್ದೇನೆ. ಚಿತ್ರತಂಡ ನನ್ನ ಭಾಗದ ಚಿತ್ರೀಕರಣವನ್ನ ತುಂಬಾ ಜಾಗ್ರತೆಯಿಂದ ನಡೆಸುತ್ತಿದೆ. ಯಾವುದೇ ತೊಂದರೆ ಆಗಿಲ್ಲ. ನಿಮ್ಮ ಕಾಳಜಿಗಾಗಿ ಧನ್ಯವಾದಗಳು” ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಿರ್ದೇಶಕ ಪ್ರೇಮ್ ಅವರು ಕೂಡ ” ಗಂಭೀರವಾಗಿ ಏನೂ ನಡೆದಿಲ್ಲ. ಚಿಕ್ಕ ಅವಘಡ ನಡೆದಿದ್ದು ಹೌದು. ಆದರೆ ಈಗ ಚಿತ್ರೀಕರಣ ಮರಳಿ ಮೊದಲಿನಂತೆಯೇ ನಡೆಯುತ್ತಿದೆ. ಸಂಜು ಬಾಬಾಗೆ ಏನೂ ಆಗಿಲ್ಲ, ಹುಷಾರಾಗಿಯೇ ಇದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ‘KD’ ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ತಮ್ಮ ದೇಹವನ್ನು ಕೂಡ ದಂಡಿಸಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಭರ್ಜರಿಯಾಗಿ ಸಿದ್ದುವಾಗುತ್ತಿರುವ ಈ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿದಂತೆ ಇನ್ನ ಹಲವು ಸ್ಟಾರ್ ನಟರು ನಟಿಸುತ್ತಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

