ಕ್ರಿಕೆಟ್ ಹಾಗು ಸಿನಿಮಾರಂಗದ ಸಮಾಗಮವಾದರೆ ಅದು ಅಭಿಮಾನಿಗಳಿಗೆ ರಸದೌತಣದಂತೆಯೇ ಸರಿ. ಇದಕ್ಕೊಂದು ಅತ್ಯದ್ಭುತ ಉದಾಹರಣೆ ‘ಕನ್ನಡ ಚಲನಚಿತ್ರ ಕಪ್ -ಕೆಸಿಸಿ 2023’. ಕನ್ನಡ ಸಿನಿರಂಗದ ಪ್ರತಿಭಾನ್ವಿತ ಕಲಾವಿದರ ಜೊತೆಗೆ ವೃತ್ತಿಪರ ಕ್ರಿಕೆಟಿಗರೂ ಸೇರಿ ಆಡುವ ಪಂದ್ಯಾಟವೇ ಈ ‘ಕೆಸಿಸಿ’. ಸದ್ಯ ಈ ಪಂದ್ಯಾವಳಿಯ ಮೂರನೇ ಆವೃತ್ತಿ ಸಂಪೂರ್ಣಗೊಂಡಿದ್ದು, ಡಾಲಿ ಧನಂಜಯ ನೇತೃತ್ವದ ‘ಗಂಗಾ ವಾರಿಯರ್ಸ್’ ತಂಡ ಭರ್ಜರಿ ಜಯ ಸಾಧಿಸಿದೆ.
ಒಟ್ಟು ಆರು ತಂಡಗಳು, ಆರು ತಂಡಗಳ ಪ್ರಸ್ತಿನಿಧಿಸೋ ಆರು ಸೂಪರ್ ಸ್ಟಾರ್ ಗಳು, ಆರು ಅಂತರ್ರಾಷ್ಟ್ರೀಯ ಆಟಗಾರರು ಹಾಗು ಹನ್ನೆರಡು ‘ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)’ ನ ಆಟಗಾರರು. ಜೊತೆಗೆ ಈ ಆರು ತಂಡಗಳಿಗೆ ಕನ್ನಡ ನಾಡಿನ ಹೆಸರಾಂತ ರಾಜವಂಶಗಳ ಹೆಸರು. ಇದು ಕನ್ನಡ ಚಲನಚಿತ್ರ ಕಪ್ ನ ವಿಶೇಷತೆ. ಫೆಬ್ರವರಿ 24 ಹಾಗೂ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯಾಟ ನಡೆಸಲಾಗಿತ್ತು. ಆರು ತಂಡಗಳನ್ನ ಎರಡು ಗುಂಪುಗಳಾಗಿ ಮಾಡಿ, ಪ್ರತೀ ತಂಡಕ್ಕೆ ಹತ್ತು ಓವರ್ ಗಳ ಎರಡು ಪಂದ್ಯಗಳು ಬರುವಂತಹ ಲೀಗ್ ಪಂದ್ಯಾಟ, ಕೊನೆಗೆ ಫೈನಲ್ ಪಂದ್ಯ ನಡೆಸುವ ಮೂಲಕ ಈ ರೋಚಕ ಪಂದ್ಯಾವಳಿ ಸಮಾಪ್ತಿ ಕಂಡಿತು.
ಕಿಚ್ಚ ಸುದೀಪ್ ನಾಯಕತ್ವದ ತಂಡ,’ಹೊಯ್ಸಳ ಈಗಲ್ಸ್’ ಹಾಗು ಇದರ ಅಂತ್ರರಾಷ್ಟ್ರೀಯ ಆಟಗಾರನಾಗಿ ಕ್ರಿಸ್ ಗೇಲ್ ಕಣಕ್ಕಿಳಿದಿದ್ದರು. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಕದಂಬ ಲಯನ್ಸ್’ ತಿಲಕರತ್ನೆ ದಿಲ್ಶಾನ್ ಅವರ ಜೊತೆಗೆ ಆಟವಾಡಿತ್ತು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ‘ವಡೆಯರ್ ಚಾರ್ಜರ್ಸ್’ ತಂಡದ ಪರವಾಗಿ ಬ್ರಿಯನ್ ಲಾರ ಅವರು ಪ್ರಮುಖ ಆಟಗಾರನಾಗಿ ಕಂಡುಬಂದರೆ, ಧ್ರುವ ಸರ್ಜಾ ಅವರ ನೇತೃತ್ವದ ಜೆಕೆ ನಾಯಕತ್ವದ ‘ರಾಷ್ಟ್ರಕೂಟ ಪ್ಯಾಂಥರ್ಸ್’ ತಂಡಕ್ಕೆ ಸುಬ್ರಹ್ಮಣ್ಯಮ್ ಬದ್ರಿನಾಥ್ ಅವರ ಬಲವಿತ್ತು. ಇನ್ನು ಉಪೇಂದ್ರ ಅವರ ನೇತೃತ್ವದ ಪ್ರದೀಪ್ ಅವರ ನಾಯಕತ್ವದ ‘ವಿಜಯನಗರ ಪ್ಯಾಟ್ರಿಯಟ್ಸ್’ ತಂಡಕ್ಕೆ ಹೆರ್ಶಲ್ ಗಿಬ್ಸ್ ಹಾಗು ಡಾಲಿ ನೇತೃತ್ವದ ಡಾರ್ಲಿಂಗ್ ಕೃಷ್ಣ ನಾಯಕತ್ವದ ‘ಗಂಗಾ ವಾರಿಯರ್ಸ್’ ತಂಡಕ್ಕೆ ಸುರೇಶ ರೈನಾ ಅವರು ಅಂತರ್ರಾಷ್ಟ್ರೀಯ ಆಟಗಾರನಾಗಿ ಕಾಣಿಸಿಕೊಂಡಿದ್ದರು.


ಲೀಗ್ ಪಂದ್ಯಗಳಲ್ಲಿ ಎರಡಕ್ಕೆ ಎರಡನ್ನೂ ಜಯಿಸಿ ಫೈನಲ್ ತಲುಪಿದ ತಂಡ ಡಾಲಿಯವರ ‘ಗಂಗಾ ವಾರಿಯರ್ಸ್’ ಹಾಗು ಎರಡರಲ್ಲಿ ಒಂದು ಪಂದ್ಯ ಗೆದ್ದು, ರನ್ ರೇಟ್ ಮೂಲಕ ಫೈನಲ್ ತಲುಪಿದ ತಂಡ ಉಪೇಂದ್ರ ಅವರ ‘ವಿಜಯನಗರ ಪ್ಯಾಟ್ರಿಯಟ್ಸ್’. ಟಾಸ್ ಸೋತು ಬ್ಯಾಟಿಂಗ್ ಇಳಿದ ಪ್ರದೀಪ್ ನಾಯಕತ್ವದ ವಿಜಯನಗರ ತಂಡ ಹತ್ತು ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದರು. ಈ ಗುರಿಯನ್ನ ಬೆನ್ನತ್ತಿದ ‘ಗಂಗಾ ವಾರಿಯರ್ಸ್’ ತಂಡ ರೈನಾ ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ ಸುಲಭವಾಗಿಯೇ ಈ ಗುರಿಯನ್ನ ದಾಟಿ, ಕನ್ನಡ ಚಲನಚಿತ್ರ ಕಪ್ 2023’ರ ವಿಜಯಶಾಲಿಗಳಾಗಿ ಹೊರಹೊಮ್ಮಿದರು.
ಗೆದ್ದ ‘ಗಂಗಾ ವಾರಿಯರ್ಸ್’ ತಂಡದ ಪರವಾಗಿ ಕಾರ್ತಿಕ್ ಕೆ ಆರ್ ಜಿ ನೇತೃತ್ವ ವಹಿಸಿದರೆ, ಡಾರ್ಲಿಂಗ್ ಕೃಷ್ಣ ಅವರ ನಾಯಕತ್ವದಲ್ಲಿ, ಡಾಲಿ ಧನಂಜಯ, ಸುನಿಲ್ ರಾವ್, ಕರಣ್ ಆರ್ಯ, ಸಿಂಪಲ್ ಸುನಿ, ರಂಜನ್ ಹಾಸನ್, ನವೀನ್ ರಘು, ಮಲ್ಲಿಕಾರ್ಜುನ್ ಮುಂತಾದ ಕಲಾವಿದರು,ಕೆಪಿಎಲ್ ಆಟಗಾರರಾಗಿ ಪ್ರವೀಣ್ ಹಾಗು ಶಿವಕುಮಾರ್ ಬಿ ಯು ಜೊತೆಗೇ ಸುರೇಶ ರೈನಾ ಅವರು ಆಟಗಾರರಾಗಿದ್ದರು. ಕಿಚ್ಚ ಸುದೀಪ್ ಅವರ ಹೊಯ್ಸಳ ಈಗಲ್ಸ್ ಹಾಗು ಶಿವರಾಜ್ ಕುಮಾರ್ ಅವರ ವಡೆಯರ್ ಚಾರ್ಜರ್ಸ್ ತಂಡದ ಎದುರಿನ ಎರಡೂ ಲೀಗ್ ಪಂದ್ಯಗಳನ್ನ ಜಯಿಸಿ, ಫೈನಲ್ ತಲುಪಿ, ಫೈನಲ್ ಕೂಡ ಗೆಲ್ಲುವ ಮೂಲಕ ಇಡೀ ಪಂದ್ಯಾವಳಿಯಲ್ಲಿ ಅಜೇಯರಾಗಿ ಉಳಿದರು ‘ಗಂಗಾ ವಾರಿಯರ್ಸ್’ ತಂಡ. ವಿಶೇಷವೆಂದರೆ ಹಿಂದಿನ ಬಾರಿ ನಡೆದ ಕೆಸಿಸಿ ಯ ಎರಡನೇ ಅವ್ರುತ್ತಿಯಲ್ಲಿ ಇದೆ ‘ಗಂಗಾ ವಾರಿಯರ್ಸ್’ ತಂಡವನ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮುನ್ನಡೆಸಿದ್ದರು. ಈ ಬಾರಿ ಅದೇ ತಂಡ ಜಯಶಾಲಿಯಾಗಿರುವುದು ವಿಶೇಷವೇ ಸರಿ.

