ಕನ್ನಡ ಚಿತ್ರರಂಗದ ಯುವ, ಬಹುಬೇಡಿಕೆಯ ನಟ ಡಾರ್ಲಿಂಗ್ ಕೃಷ್ಣ ಹಾಗು ಸ್ಟಾರ್ ನಿರ್ದೇಶಕ ಶಶಾಂಕ್ ಅವರು ಸೇರಿ ಮಾಡಿರುವ ಹೊಸ ಬಹುನಿರೀಕ್ಷಿತ ಸಿನಿಮಾ,’ಕೌಸಲ್ಯಾ ಸುಪ್ರಜಾ ರಾಮ’ ಇದೀಗ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ಬಿಡುಗಡೆಯ ದಿನಾಂಕವನ್ನೂ ಕೂಡ ಚಿತ್ರತಂಡ ಹೊರಹಾಕಿದೆ. ಇದೀಗ ಟ್ರೈಲರ್ ಬಿಡುಗಡೆಯ ಬಗ್ಗೆ ಅಧಿಕೃತ ಅಪ್ಡೇಟ್ ನೀಡಿದ್ದಾರೆ. ಅದು ಕೂಡ ವಿಶೇಷವಾಗಿ.
ತನ್ನ ಕೆಲಸಗಳನ್ನ ಮುಗಿಸಿಕೊಂಡು, ಜನರ ಮುಂದೆ ಬರಲು ಸಿದ್ದವಾಗಿರುವ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದ ಟ್ರೈಲರ್ ಅನ್ನು, ಬಿಡುಗಡೆಗೂ ಮುನ್ನವೇ ಚಿತ್ರತಂಡ ಕೆಲವಷ್ಟು ಸಿನಿಪ್ರೇಮಿಗಳಿಗೆ ತೋರಿಸಿದ್ದಾರೆ. ಅವರೆಲ್ಲರ ಪ್ರತಿಕ್ರಿಯೆ ತಂಡವನ್ನ ಇನ್ನಷ್ಟು ಪ್ರೋತ್ಸಾಹಿಸಿದೆ. ಒಂದಿಷ್ಟು ಜನಸಾಮಾನ್ಯರಿಗೆ ಟ್ರೈಲರ್ ತೋರಿಸಿರುವ ಚಿತ್ರತಂಡ, ಅವರಿಂದ ಸಿಕ್ಕಿದ ಭರಪೂರ ಪ್ರಶಂಸೆಗಳನ್ನ ಹಂಚಿಕೊಂಡಿದೆ. “ನಮ್ಮೆಲ್ಲ ಚಿಂತೆಗಳ ನಡುವೆ, ಇಂತದೊಂದು ಹಾಸ್ಯಮಯ ಮನರಂಜನೆ ನೀಡುವ ಸಿನಿಮಾ ನೋಡಬೇಕು ಅನಿಸುತ್ತದೆ. ನಾವು ಕಾಯುತ್ತಿದ್ದೇವೆ” ಎಂದು ಒಬ್ಬರೆಂದರೆ, “ಟ್ರೈಲರ್ ಸಕತ್ ಆಗಿದೆ. ಈಗಿನ ಯುವಪೀಳಿಗೆಗೆ ಸರಿಯಾಗಿ ಹೊಂದಿಕೊಳ್ಳುವಂತಹ ಸಿನಿಮಾ ಅನಿಸುತ್ತಿದೆ.


ನಮ್ಮಲ್ಲೇ ಒಬ್ಬರ ಕಥೆಯಂತಿದೆ” ಎಂದರು ಮತ್ತೊಬ್ಬರು. “ನಿರ್ದೇಶಕ ಶಶಾಂಕ್ ಅವರು ಈಗಾಗಲೇ ಕೃಷ್ಣನ್ ಲವ್ ಸ್ಟೋರಿ, ಲವ್360 ರೀತಿಯ ಉತ್ತಮ ಸಿನಿಮಾಗಳನ್ನ ನೀಡಿದ್ದಾರೆ. ಈ ಟ್ರೈಲರ್ ನಿಂದ ಇವರ ಹೊಸ ಸಿನಿಮಾದ ಮೇಲೆ ಕೂಡ ನಿರೀಕ್ಷೆ ಹುಟ್ಟುತ್ತಿದೆ” ಎಂದಿದ್ದಾರೆ. ಅಲ್ಲದೇ, “ಡಾರ್ಲಿಂಗ್ ಕೃಷ್ಣ ಅವರ ನಟನೆ ಜೊತೆಗೆ ರಂಗಾಯಣ ರಘು ಅವರ ಅಭಿನಯ ನೋಡಲು ನಾವಂತೂ ಕಾಯುತ್ತಿದ್ದೇವೆ. ಇದೊಂದು ಒಳ್ಳೆಯ ಸಿನಿಮಾ ಆಗಿರಲಿದೆ ಎಂಬ ನಂಬಿಕೆ ಬರುತ್ತಿದೆ” ಎಂದಿದ್ದಾರೆ ಇನ್ನಷ್ಟು ಜನ. ಒಟ್ಟಿನಲ್ಲಿ ನೋಡಿದವರೆಲ್ಲ ‘ಕೌಸಲ್ಯಾ ಸುಪ್ರಜ ರಾಮ’ನನ್ನ ಹಾಡಿ ಹೊಗಳಿದ್ದಾರೆ.
ಇದೇ ಜುಲೈ 28ಕ್ಕೆ ಎಲ್ಲೆಡೆ ಬಿಡುಗಡೆಯಾಗಲಿರುವ ‘ಕೌಸಲ್ಯಾ ಸುಪ್ರಜ ರಾಮ’ ಸಿನಿಮಾದ ಟ್ರೈಲರ್ ಬಿಡುಗಡೆಯ ಮುಹೂರ್ತವನ್ನ ಚಿತ್ರತಂಡ ಹೊರಬಿಟ್ಟಿದೆ. ಇದೇ ಜುಲೈ 14ರಂದು ಒಂದು ಅದ್ದೂರಿ ಕಾರ್ಯಕ್ರಮದಲ್ಲಿ, ಸಂಜೆ 6:45ಕ್ಕೆ ಸರಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಎಲ್ಲೆಡೆ ಬಾರೀ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ, ನಾಗಭೂಷಣ, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ. ಶಶಾಂಕ್ ಅವರ ನಿರ್ದೇಶನ ಹಾಗು ಅರ್ಜುನ್ ಜನ್ಯ ಅವರ ಸಂಗೀತ ಸಿನಿಮಾದಲ್ಲಿದೆ.

