‘ಚಿನ್ನಾರಿ ಮುತ್ತ’ ಎಂದೇ ಕನ್ನಡಿಗರ ಮನಗಳಲ್ಲಿ ಮನೆಮಾಡಿಕೊಂಡಿರುವ ವಿಜಯ್ ರಾಘವೇಂದ್ರ ಅವರು, ಹರ್ಷಿಕಾ ಪೂಣಚ್ಚ ಜೊತೆಗೇ ಉಮಾಶ್ರೀ ಸೇರಿದಂತೆ ಹಲವು ಹೆಸರಾಂತ ನಟರು ನಟಿಸಿರುವ ‘ಕಾಸಿನ ಸರ’ ಸಿನಿಮಾ ಮಾರ್ಚ್ 3ಕ್ಕೆ ಎಲ್ಲೆಡೆ ತೆರೆಕಂಡಿತ್ತು. ‘ಹೆಬ್ಬೆಟ್ ರಾಮಕ್ಕ’ ಸಿನಿಮಾ ಖ್ಯಾತಿಯ ನಿರ್ದೇಶಕ ಎನ್ ಆರ್ ನಂಜುಂಡೇಗೌಡ ಅವರ ನಿರ್ದೇಶನದಲ್ಲಿ ಮೂಡಿಬಂದಂತಹ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಾ ತನ್ನ ಚಿತ್ರಮಂದಿರದ ಓಟದ ಎರಡನೇ ವಾರಕ್ಕೆ ಯಶಸ್ವಿಯಾಗಿ ಲಗ್ಗೆ ಇಟ್ಟಿದೆ. ಈ ಸಂತಸದ ವಿಚಾರಗಳ ಬಗ್ಗೆ ಮಾತನಾಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.
ಈ ವೇಳೆ ಮಾತನಾಡಿದ ನಿರ್ದೇಶಕ ನಂಜುಂಡೇಗೌಡ ಅವರು, “ಮೊದಲಿನಿಂದಲೂ ನನಗೆ ನಾ ಬಂದ ಬೇರಿನ ಬಗ್ಗೆ ಸಿನಿಮಾ ಮಾಡಬೇಕು ಎಂಬ ಹಂಬಲ ಇತ್ತು. ‘ಕಾಸಿನ ಸರ’ ಸಿನಿಮಾ ನನ್ನ ಜೀವನಕ್ಕೆ ಹಾಗಿ ರೈತ ಸಮುದಾಯಕ್ಕೆ ತುಂಬಾ ಹತ್ತಿರವಾದಂತಹ ಸಿನಿಮಾ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಯಶಸ್ವಿಯಾಗಿ ಸಾಗುತ್ತಿದೆ. ನನ್ನ 30ವರ್ಷಗಳ ಸಿನಿಮಾಪಯಣದಲ್ಲಿ ಇಂತಹ ಪ್ರತಿಕ್ರಿಯೆಯನ್ನ ಇಲ್ಲಿವರೆಗೆ ಕಂಡಿರಲಿಲ್ಲ. ಹಲವರು ನಮ್ಮ ಸಿನಿಮಾ ನೋಡಿ ನಮ್ಮಲ್ಲಿ ಒಳ್ಳೆಯ ಮಾತುಗಳನ್ನ ನೀಡಿದ್ದಾರೆ. ಶಿವಮೊಗ್ಗದ ಕೃಷಿ ವಿದ್ಯಾಲಯದ ಉಪಕುಲಪತಿಗಳು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಜಿಕೆವಿಕೆಯಲ್ಲಿ ನಮ್ಮ ಸಿನಿಮಾವನ್ನ ಎಲ್ಲರಿಗೂ ತೋರಿಸಬೇಕೆಂಬ ತಯಾರಿ ನಡೆಯುತ್ತಿದೆ. ಮಂಡ್ಯದಲ್ಲಿ ಇಡೀ ರೈತಸಂಗದವರು ಚಿತ್ರಮಂದಿರ ಬುಕ್ ಮಾಡಿಕೊಂಡು ಸಿನಿಮಾ ನೋಡಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಒಂದು ಸಾರ್ಥಕತೆಯ ಭಾವನೆ ನೀಡಿದೆ. ರಾಜ್ಯದಾದ್ಯಂತ ಒಟ್ಟು 70 ಸ್ಕ್ರೀನ್ ಗಳ ಮೇಲೆ ನಮ್ಮ ಸಿನಿಮಾ ಬಿಡುಗಡೆಯಗಿತ್ತು. ಜನರ ಪ್ರಶಂಸೆ ಹಾಗು ಮಾಧ್ಯಮಗಳು ನೀಡಿದ ಸಹಾಯದಿಂದ ಸಿನಿಮಾ ಇದೀಗ ಎಲ್ಲರನ್ನ ತಲುಪುತ್ತಿದೆ. ಇದರಲ್ಲಿ ಪತ್ರಿಕಾ ಮಾಧ್ಯಮದ ಪಾಲು ಅಪಾರ. ನೀವು ತೋರಿದ ಸಹಾಯಕ್ಕೆ ನಮ್ಮಿಡೀ ತಂಡ ಚಿರಋಣಿ. ಹೆಚ್ಚೇಚ್ಚು ಬೆಳೆ ತೆಗೆಯುವ ಆಸೆಯಲ್ಲಿ ಕೃಷಿಭೂಮಿಯನ್ನು ವಿರೂಪಗೊಳಿಸುವದನ್ನ ಕಡಿಮೆ ಮಾಡಬೇಕಿದೆ. ರೈತರು ಅನುಭವಿಸುವ ಸಮಸ್ಯೆಗಳ ಕಡೆಗೆ ಗಮನ ಹರಸಬೇಕಿದೆ” ಎಂದು ತಮ್ಮ ಸಿನಿಮಾದಲ್ಲಿ ಅಡಗಿದ್ದ ಮುಖ್ಯ ವಿಚಾರವನ್ನ ಹೇಳುವುದರ ಜೊತೆಗೇ ಮಾಧ್ಯಮಗಳಿಗೆ ಧನ್ಯವಾದ ತಿಳಿಸುತ್ತಾ ತಮ್ಮ ಮಾತು ಮುಗಿಸಿದರು ನಿರ್ದೇಶಕರು.
ಇನ್ನೂ ನಾಯಕಿ ಹರ್ಷಿಕಾ ಪೂಣಚ್ಚ ಮಾತನಾಡಿ, “ಈ ಸಿನಿಮಾ ನನಗೆ ಹೊಸದೊಂದು ಅನುಭವ ನೀಡಿದೆ. ನನ್ನಿಡೀ ಜೀವನ ನೆನಪಲ್ಲಿ ಉಳಿವಂತಹ ಸಿನಿಮಾ ಇದು. ನಮ್ಮಮ್ಮ ನನ್ನ ಯಾವುದೇ ಸಿನಿಮಾ ನೋಡಿದರೂ ಏನಾದರೊಂದು ಹೇಳುತ್ತಿದ್ದರು, ಆದರೆ ಈ ಸಿನಿಮಾವನ್ನ ಮನತುಂಬಿ ಇಷ್ಟ ಪಟ್ಟಿದ್ದಾರೆ. ಎಲ್ಲರ ಮನೆಯಲ್ಲಿಯೂ ನನ್ನ ಪಾತ್ರದ ರೀತಿಯ ಹುಡುಗಿಯರಿದ್ದರೆ, ಯಾವ ಕುಟುಂಬದಲ್ಲೂ ಜಗಳಗಳೇ ಇರುವುದಿಲ್ಲ. ಸಂಭಂದಗಳ ಮಹತ್ವದ ಜೊತೆಗೇ ಆರ್ಗಾನಿಕ್ ಫಾರ್ಮಿಂಗ್ ಬಗ್ಗೆಯೂ ಸಿನಿಮಾದಲ್ಲಿ ತೋರಿಸಲಾಗಿದೆ” ಎಂದರು. ನಿರ್ಮಾಪಕ ದೊಡ್ಡನಾಗಯ್ಯ ಅವರೂ ಕೂಡ ಸಂತಸ ವ್ಯಕ್ತಪಡಿಸುತ್ತ “ನಮ್ಮ ‘ಕಾಸಿನ ಸರ’ ಸಿನಿಮಾವನ್ನ ಅಣ್ಣಾವ್ರ ‘ಬಂಗಾರದ ಮನುಷ್ಯ’ ಸಿನಿಮಾಗೆ ಹೋಲಿಸಿ ಜನರು ಪ್ರಶಂಸೆ ನೀಡುತ್ತಿದ್ದಾರೆ. ಈಗಿನ ಕಾಲದಲ್ಲಿ ಕೂಡುಕುಟುಂಬ, ಸಂಬಂಧ ಭಾದವ್ಯಗಳ ಮಹತ್ವ ಎಲ್ಲರಲ್ಲಿ ಮರೆಯಾಗುತ್ತಿವೆ. ನಮ್ಮ ಸಿನಿಮಾದಲ್ಲಿ ಅವೆಲ್ಲವನ್ನ ತೋರಿಸೋ ಪ್ರಯತ್ನ ಮಾಡಿದ್ದು, ಎಲ್ಲರೂ ಮೆಚ್ಚಿದ್ದಾರೆ. ವಿದ್ಯಾಭ್ಯಾಸ ಮುಗಿಸಿದ ಹುಡುಗಿ ಹಳ್ಳಿಗೆ ಬಂದು ಕೃಷಿ ಮಾಡುವುದು ಎಲ್ಲರ ಮನಸೆಳೆದಿದೆ. ನಿರೀಕ್ಷೆಗೂ ಮೀರಿ ನಮ್ಮ ಸಿನಿಮಾ ಜನರನ್ನ ತಲುಪಿದೆ ” ಎಂದರು.
ವಿಶೇಷತೆಯೆಂದರೆ ಈ ‘ಕಾಸಿನ ಸರ’ ಸಿನಿಮಾದಲ್ಲಿ ಸಚಿವ ಸೋಮಶೇಖರ್ ಅವರು ಕೃಷಿ ಸಚಿವರಾಗಿಯೇ ಕಾಣಿಸಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಅವರು ಒಬ್ಬ ಪ್ರಗತಿಪರ ರೈತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ನಿರ್ದೇಶಕ ನಂಜುಂಡೇಗೌಡ ಅವರೇ ಚಿತ್ರದ ಕಥೆ ಹಾಗು ಚಿತ್ರಕತೆ ರಚಿಸಿದ್ದಾರೆ. ಶ್ರೀಧರ್ ಸಂಭ್ರಮ್ ಅವರ ಸಂಗೀತ ಹಾಗು ವೇಣು ಅವರ ಛಾಯಾಗ್ರಾಹಣ ಸಿನಿಮಾದಲ್ಲಿದೆ.

