ಕ್ರಿಕೆಟ್ ಹಾಗು ಸಿನಿಮಾದ ಸಮಾಗಮ, ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ ಪಂದ್ಯಾಟ ಸದ್ಯ ತನ್ನ ಅಂತಿಮ ಘಟ್ಟಕ್ಕೆ ಸಮೀಪಸುತ್ತಿದೆ. ಲೀಗ್ ಹಂತದ ಎಲ್ಲಾ ಪಂದ್ಯಾಟಗಳನ್ನೂ ಮುಗಿಸಿಕೊಂಡು ಇದೀಗ ಸೆಮಿಫೈನಲ್ ಹಂತ ತಲುಪಿದೆ. ಇಂದು(ಮಾರ್ಚ್ 24) ಎರಡು ಸೆಮಿಫೈನಲ್ ಪಂದ್ಯಗಳು ವೈಜಾಗ್ ನಲ್ಲಿ ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಭೋಜಪುರಿ ದಬಾಂಗ್ಸ್ ಹಾಗು ಮುಂಬೈ ಹೀರೋಸ್ ಎದುರಾಗಿ ಆಡಲಿದ್ದು, ಎರಡನೇ ಸೆಮಿಫೈನಲ್ ನಲ್ಲಿ ನಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡ ಬಲಿಷ್ಠ ತೆಲುಗು ವಾರಿಯರ್ಸ್ ತಂಡವನ್ನ ಎದುರಿಸಲಿದೆ.
ನಟ ಪ್ರದೀಪ್ ನಾಯಕತ್ವದ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನೂ ಗೆದ್ದು, ಅಜೇಯರಾಗಿ ಉಳಿದಿದ್ದಾರೆ. ಡಾರ್ಲಿಂಗ್ ಕೃಷ್ಣ, ರಾಜೀವ್, ಬಚ್ಚನ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಹಾಗು ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ನಿರೂಪ್ ಭಂಡಾರಿ, ಸುನಿಲ್ ರಾವ್, ಪೆಟ್ರೋಲ್ ಪ್ರಸನ್ನ ಸೇರಿದಂತೆ ಹಲವರ ಅದ್ಭುತ ಬೌಲಿಂಗ್ ನ ನೆರವಿನಿಂದ ಈ ಸಾರಿಯ ಸಿಸಿಎಲ್ ನಲ್ಲಿ ‘ಕರ್ನಾಟಕ ಬುಲ್ಡೋಜರ್ಸ್’ ತಂಡವನ್ನ ತಡೆಯುವವರೇ ಇಲ್ಲವಾಗಿದೆ. ಬಾದ್ ಷಾಹ್ ಕಿಚ್ಚ ಸುದೀಪ್ ಅವರ ಕೀಪಿಂಗ್ ಕೂಡ ಗಮನಾರ್ಹ. ಜೆಕೆ ಹಾಗು ಡಾರ್ಲಿಂಗ್ ಕೃಷ್ಣ ಅವರ ಆಲ್ ರೌಂಡ್ ಪ್ರದರ್ಶನ ಎಲ್ಲರ ಮನಗೆದ್ದಿದೆ. ಇನ್ನು ತಂಡದ ಪ್ರಮುಖ ಸದಸ್ಯರಾದ ಕರಣ್ ಆರ್ಯನ್, ತ್ರಿವಿಕ್ರಮ್, ಚಂದನ್ ಮುಂತಾದವರ ಆಟಗಳು ಕೂಡ ತಂಡದ ಗೆಲುವಿಗೆ ಸಹಾಯವಾಗಿತ್ತು.
ಇನ್ನು ಅಖಿಲ್ ಅಕ್ಕಿನೇನಿ ನಾಯಕತ್ವದ ‘ತೆಲುಗು ವಾರಿಯರ್ಸ್’ ತಂಡ ಕೂಡ ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನ ಬಾರೀ ಅಂತರದಲ್ಲಿ ಗೆದ್ದು ಸೆಮಿಫೈನಲ್ ತಲುಪಿದೆ. ನಾಯಕ ಅಖಿಲ್ ಅಕ್ಕಿನೇನಿ ತಮ್ಮ ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾದವರು. ತಂಡದ ಬೌಲಿಂಗ್ ಕೂಡ ಉತ್ತಮವಾಗಿದ್ದು, ಒಂದು ಆಕರ್ಷಕ ಕ್ರಿಕೆಟ್ ಮುಖಮುಖಿ ಇಂದು ಸಂಜೆ 7:30ಕ್ಕೆ ವೈಜಾಗ್ ನಲ್ಲಿ ಆಗುವ ಎಲ್ಲಾ ಸಾಧ್ಯತೆಗಳಿವೆ. ಇಂದು(ಮಾರ್ಚ್ 24)ರಂದು ನಡೆಯಲಿರೋ ಈ ರೋಮಾಂಚಕ ಪಂದ್ಯಾಟವನ್ನ ಜೀ5, ಜೀ ಪಿಚ್ಚರ್ ಹಾಗು ಸಿಸಿಎಲ್ ನ ಯೂಟ್ಯೂಬ್ ಚಾನೆಲ್ ನಲ್ಲೂ ನೋಡಬಹುದಾಗಿದೆ.
ಟ್ರೋಫಿ ತಮ್ಮದಾಗಿಸಿಕೊಳ್ಳಲು ಕೇವಲ ಎರಡೇ ಹೆಜ್ಜೆ ಬಾಕಿಯಿರುವುದು ನಮ್ಮ ಬುಲ್ಡೋಜರ್ಸ್ ಗೆ. ಹಾಗಾಗಿ ಇನ್ನಷ್ಟು ಪರಿಶ್ರಮ ಹಾಕಿ ಇಂದಿನ ಪಂದ್ಯಕ್ಕೆ ಅಭ್ಯಾಸ ಮಾಡುತ್ತಿದ್ದಾರೆ. ಈ ಸೆಮಿಫೈನಲ್ ಪಂದ್ಯಾವನ್ನು ಜಯಿಸುವ ಜಯಶಾಲಿ ಹಂಬಲದಲ್ಲಿದೆ ನಮ್ಮ ‘ಕರ್ನಾಟಕ ಬುಲ್ಡೋಜರ್ಸ್’.

