HomeNewsಮತ್ತೊಂದು ಪಂದ್ಯ ಮತ್ತೊಂದು ಜಯ! ಸಿಸಿಎಲ್ ಟ್ರೋಫಿಗೆ ಕರ್ನಾಟಕ ಬುಲ್ಡೋಜರ್ಸ್ ಗೆ ಕೇವಲ ಎರಡೇ ಹೆಜ್ಜೆ!

ಮತ್ತೊಂದು ಪಂದ್ಯ ಮತ್ತೊಂದು ಜಯ! ಸಿಸಿಎಲ್ ಟ್ರೋಫಿಗೆ ಕರ್ನಾಟಕ ಬುಲ್ಡೋಜರ್ಸ್ ಗೆ ಕೇವಲ ಎರಡೇ ಹೆಜ್ಜೆ!

ಮನರಂಜನೆಯ ಎರಡು ಪ್ರಮುಖ ಪಾತ್ರಧಾರಿಗಳು ಕ್ರಿಕೆಟ್ ಹಾಗು ಸಿನಿಮಾ. ಈ ಎರಡರ ಸಮಾಗಮವಾದ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ ಯಶಸ್ವಿಯಾಗಿ ನಡೆಯುತ್ತಿದೆ. ಅಷ್ಟೇ ಯಶಸ್ವಿಯಾಗಿ ಅದರಲ್ಲಿ ಪಾಲ್ಗೊಂಡಿರುವ ನಮ್ಮ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಕೂಡ ಸಾಗುತ್ತಿದೆ. ಲೀಗ್ ಪಂದ್ಯಾಟದಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯಗಳನ್ನ ಜಯಿಸಿ ಶನಿವಾರ(ಮಾರ್ಚ್ 11) ಪಂಜಾಬ್ ದೆ ಶೇರ್ ತಂಡದ ಎದುರು ನಾಲ್ಕನೇ ಪಂದ್ಯ ಆಡಿದ ಕರ್ನಾಟಕ ತಂಡ ಆ ಪಂದ್ಯವನ್ನು ಕೂಡ ಭರ್ಜರಿಯಾಗಿ ಜಯಿಸಿ ಸೆಮಿಫೈನಲ್ ಪ್ರವೇಶ ಪಡೆದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಡಿದ ಪಂಜಾಬ್ ತಂಡ ಮೊದಲ 10 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 80ರನ್ ಪೇರಿಸಿದರು. ನಂತರ ತಮ್ಮ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆಡಿದ ಕರ್ನಾಟಕ ಬುಲ್ಡೋಜರ್ಸ್ ನಾಯಕ ಪ್ರದೀಪ್, ಡಾರ್ಲಿಂಗ್ ಕೃಷ್ಣ ಹಾಗು ರಾಜೀವ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ 10 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ಬರೋಬ್ಬರಿ 140ರನ್ ಗಳಿಸಿದರು. ಈ ಪೈಕಿ ರಾಜೀವ್ ಅವರು 9 ಎಸೆತಕ್ಕೆ 33ರನ್, ಕೃಷ್ಣ ಅವರು 17 ಎಸೆತಕ್ಕೆ 37ರನ್ ಸಿಡಿಸಿದರೆ ನಾಯಕ ಪ್ರದೀಪ್ ಅವರ ಆಕರ್ಷಕ ಅರ್ಧಶತಕ ಗಳಿಸಿದ್ದರು.

ನಂತರ ತಮ್ಮ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಗೆ ಇಳಿದ ಪಂಜಾಬ್ ದೆ ಶೇರ್ ತಂಡ 7 ವಿಕೆಟ್ ನಷ್ಟಕ್ಕೆ 100 ರನ್ ಗಳಿಸುವಲ್ಲಿ ಯಶಸ್ವಿಯಾದರು. ಕರ್ನಾಟಕ ತಂಡದ ಎಸೆತಗಾರಿಕೆಯ ಪರವಾಗಿ ಕರಣ್ ಆರ್ಯನ್, ಡಾರ್ಲಿಂಗ್ ಕೃಷ್ಣ ನಿರೂಪ್ ಭಂಡಾರಿ ಹಾಗು ಸುನಿಲ್ ರಾವ್ ತಲಾ ಎರಡು ವಿಕೆಟ್ ಪಡೆದಿದ್ದರು. ಜೊತೆಗೇ ಕಿಚ್ಚ ಸುದೀಪ್ ಅವರ ಅಮೋಘ ಕೀಪಿಂಗ್ ಪ್ರದರ್ಶನ ಕೂಡ ಈ ಪಂದ್ಯದಲ್ಲಿ ಕಾಣಲು ಸಿಕ್ಕಿತು. ಈ 41ರನ್ ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಸುಲಭವಾಗಿ ಜಯ ಸಾಧಿಸಿ ಈ ಸಾಲಿನ ಸಿಸಿಎಲ್ ಪಂದ್ಯಾವಳಿಯಲ್ಲಿ ಅಜೇಯರಾಗಿ ಉಳಿದರು.

ನಾಲ್ಕು ಪಂದ್ಯದಲ್ಲಿ ನಾಲಕ್ಕೂ ಪಂದ್ಯಗಳನ್ನ ಜಯಿಸಿರುವ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಪಾಯಿಂಟ್ಸ್ ಟೇಬಲ್ ನ ಅಗ್ರಸ್ಥಾನವನ್ನ ಅಲಂಕರಿಸಿದೆ. ಮುಂದಿನ ಶನಿವಾರ (ಮಾರ್ಚ್ 18) ನಡೆಯಲಿರೋ ಸೆಮಿಫೈನಲ್ ಪಂದ್ಯ ಕರ್ನಾಟಕ ತಂಡದ ಮುಂದಿನ ಪಂದ್ಯವಾಗಿರಲಿದ್ದು, ಯಾವ ತಂಡದ ವಿರುದ್ಧ ಆಡಲಿದ್ದಾರೆ ಎಂಬುದು ಇಂದು ನಡೆವ ಪಂದ್ಯಗಳಿಂದ ನಿರ್ಧಾರವಾಗಲಿದೆ. ಒಟ್ಟಿನಲ್ಲಿ ಸೆಮಿಫೈನಲ್ ಪಂದ್ಯವನ್ನು ಕೂಡ ಜಯಿಸಿ ಫೈನಲ್ ನಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಹಾಗು ಅಭಿಮಾನಿಗಳು.

RELATED ARTICLES

Most Popular

Share via
Copy link
Powered by Social Snap