HomeNewsಸಿಸಿಎಲ್ ನಲ್ಲಿ ಮುಂದುವರೆಯಿತು 'ಕರ್ನಾಟಕ ಬುಲ್ಡೋಜರ್ಸ್'ನ ಗೆಲುವಿನ ಓಟ! ಬಚ್ಚನ್ ಭರ್ಜರಿ ಬ್ಯಾಟಿಂಗ್!

ಸಿಸಿಎಲ್ ನಲ್ಲಿ ಮುಂದುವರೆಯಿತು ‘ಕರ್ನಾಟಕ ಬುಲ್ಡೋಜರ್ಸ್’ನ ಗೆಲುವಿನ ಓಟ! ಬಚ್ಚನ್ ಭರ್ಜರಿ ಬ್ಯಾಟಿಂಗ್!

ಪ್ರಸ್ತುತ ಸಿನಿಪ್ರೇಮಿಗಳು ಹಾಗು ಕ್ರಿಕೆಟ್ ಅಭಿಮಾನಿಗಳಿಬ್ಬರ ಆಕರ್ಷಣೆಯಾಗಿರುವ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ ಯಾವುದೇ ಅಡೆ-ತಡೆಗಳಿಲ್ಲದೆ ಯಶಸ್ವಿಯಾಗಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ನಮ್ಮ ‘ಕರರ್ನಾಟಕ ಬುಲ್ಡೋಜರ್ಸ್’ ಕೂಡ ಯಾವುದೇ ಸೋಲು ಕಾಣದೆ ಎರಡು ಜಯದ ಜೊತೆಗೆ ತಮ್ಮ ಮೂರನೇ ಪಂದ್ಯವನ್ನ ಶನಿವಾರ ಆಡಿತ್ತು. ಚೆನ್ನೈ ರೈನೋಸ್ ಎದುರು ಆಡಿದ ಮೂರನೇ ಪಂದ್ಯವನ್ನು ಕೂಡ ಜಯಿಸುವ ಮೂಲಕ ‘ಕರ್ನಾಟಕ ಬುಲ್ಡೋಜರ್ಸ್’ ಸೋಲಿಲ್ಲದ ಸರದಾರನಂತೆ ಮುಂದುವರೆಯುತ್ತಿದೆ.

ಪ್ರದೀಪ್ ಬೊಗಾಡಿ ನಾಯಕತ್ವದ ತಂಡದಲ್ಲಿ ಕಿಚ್ಚ ಸುದೀಪ್, ರಾಜೀವ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಕರಣ್ ಆರ್ಯನ್, ಜೆಕೆ, ಪೆಟ್ರೋಲ್ ಪ್ರಸನ್ನ, ಸುನಿಲ್ ರಾವ್, ಅರುಣ್ ಬಚ್ಚನ್ ಹಾಗು ಅರ್ಜುನ್ ಯೋಗಿ ಕಣಕ್ಕಿಳಿದಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಆರ್ಯ ಅವರ ನಾಯಕತ್ವದ ಚೆನ್ನೈ ರೈನೋಸ್ ತಂಡ ಎರಡು ವಿಕೆಟ್ ನಷ್ಟಕ್ಕೆ 84ರನ್ ಗಳಿಸಿದರು. ನಂತರದ 10 ಓವರ್ ಗಳ ಬ್ಯಾಟಿಂಗ್ ಗೆ ಬಂದ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಡಾರ್ಲಿಂಗ್ ಕೃಷ್ಣ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಯಾವುದೇ ವಿಕೆಟ್ ನಷ್ಟವಿಲ್ಲದೆ 109 ರನ್ ಗಳಿಸಿದರು. ಮರಳಿ ತಮ್ಮ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಗೆ ಇಳಿದ ಚೆನ್ನೈ ತಂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಆರು ವಿಕೆಟ್ ನಷ್ಟಕ್ಕೆ 125ರನ್ ಪೇರಿಸಿ, ಅಂತಿಮವಾಗಿ ಕರ್ನಾಟಕ ತಂಡಕ್ಕೆ 10ಓವರ್ ಗಳಿಗೆ 100ರನ್ ಗಳ ಗುರಿ ನೀಡಿತು.

ಈ ದೊಡ್ಡ ಮೊತ್ತವನ್ನ ಬೆನ್ನಟ್ಟಿ ಬ್ಯಾಟಿಂಗ್ ಗೆ ಇಳಿದ ಕರ್ನಾಟಕ ತಂಡ ವಿಕೆಟ್ ಆಘಾತ ಕಂಡಿತ್ತು. ಇನ್ನೇನು ಪಂದ್ಯ ಕೈ ತಪ್ಪಿತು ಎನ್ನುವಾಗ ಬ್ಯಾಟಿಂಗ್ ಗೆ ಬಂದವರು ಅರುಣ್ ಬಚ್ಚನ್. ಆಡಿದ ಕೇವಲ 28 ಎಸೆತಗಳಲ್ಲಿ ಮೂರು ಫೋರ್ ಹಾಗು ನಾಲ್ಕು ಸಿಕ್ಸರ್ ಗಳ ನೆರವಿನಿಂದ ಭರ್ಜರಿ 57 ರನ್ ಗಳನ್ನ ಗಳಿಸಿ ತಂಡದ ಗೆಲುವಿಗೆ ಬಚ್ಚನ್ ಅವರು ಕಾರಣರಾದರು. ಬಚ್ಚನ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲಾ ಅಭಿಮಾನಿಗಳು ಸಂತೃಪ್ತರಾದರು. ಈ ಪಂದ್ಯದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗು ‘ಕರ್ನಾಟಕ ಬುಲ್ಡೋಜರ್ಸ್’ ತಂಡದ ಮಾಲೀಕರಾದ ಅಶೋಕ್ ಕೇಣಿ ಅವರು ಕೂಡ ಉಪಸ್ಥಿತರಿದ್ದರು. ಮೂರಕ್ಕೆ ಮೂರು ಪಂದ್ಯಗಳನ್ನ ಜಯಿಸುವುದರ ಮೂಲಕ ಕರ್ನಾಟಕ ತಂಡ ಅಂಕಪಟ್ಟಿಯ ಅಗ್ರಸ್ಥಾನಿಯಾಗುವುದು ಮಾತ್ರವಲ್ಲದೆ ಎಲ್ಲಾ ಸಿಸಿಎಲ್ ಪ್ರೇಕ್ಷಕರ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.

RELATED ARTICLES

Most Popular

Share via
Copy link
Powered by Social Snap