ಕನ್ನಡದ, ಕನ್ನಡಿಗರ ಹೆಮ್ಮೆಯ ಚಿತ್ರ ರಿಷಬ್ ಶೆಟ್ಟಿ ಅವರ ನಿರ್ದೇಶನದ ‘ಕಾಂತಾರ’ ಸಿನಿಮಾ ಹೆಜ್ಜೆಹೆಜ್ಜೆಗೂ ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸುತ್ತಲಿದೆ. ಪ್ರತಿಷ್ಟಿತ ಸಿನಿಮಾ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲಂಸ್’ ನಿರ್ಮಾಣದಲ್ಲಿ ಮೂಡಿಬಂದಿದ್ದ ಸಿನಿಮಾ ಚಿತ್ರಮಂದಿರದಲ್ಲೇ ದಾಖಲೆ ಬರೆದಿತ್ತು. ಹಿಂದೆಂದೂ ಕಂಡಿರದಷ್ಟು ಸಿನಿಮಾ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆತಂದ ಕೀರ್ತಿ ‘ಕಾಂತಾರ’ ಸಿನಿಮಾದ್ದು. ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ಇದೀಗ ವಿದೇಶೀ ಭಾಷೆಗಳಲ್ಲೂ ಬಿಡುಗಡೆಯಾಗಲು ಸಿದ್ಧವಾಗಿದೆ.
ಆರಂಭದಲ್ಲಿ ಕೇವಲ ಕನ್ನಡ ಭಾಷೆಯಲ್ಲಷ್ಟೇ ಬಿಡುಗಡೆಯಾಗಿದ್ದ ‘ಕಾಂತಾರ’ ಸಿನಿಮಾ, ನಂತರ ಹೆಚ್ಚಿದ ಬೇಡಿಕೆಯ ಕಾರಣದಿಂದ ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಗಳಲ್ಲಿ ಇಡೀ ಭಾರತ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡ ಸಿನಿಮಾ ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು. ಇತ್ತೀಚಿಗಷ್ಟೇ ‘ಕಾಂತಾರ’ ಸಿನಿಮಾ ವಿಶ್ವಸಂಸ್ಥೆಯಲ್ಲೂ ಪ್ರದರ್ಶನ ಕಂಡಿತ್ತು. ಇಷ್ಟೆಲ್ಲಾ ಹೆಗ್ಗಳಿಕೆ ಹೊಂದಿರುವ ಈ ಸಿನಿಮಾ ಇದೀಗ ವಿದೇಶೀ ಭಾಷೆಗಳಲ್ಲೂ ಬಿಡುಗಡೆಯಾಗಲು ಸಿದ್ಧತೆ ನಡೆಸುತ್ತಿದೆ. ಪ್ರಪಂಚದಾದ್ಯಂತ ಸದ್ದು ಹಬ್ಬಿಸಿರೋ ಈ ಚಿತ್ರ ಇದೀಗ ಇಟಲಿಯನ್ ಹಾಗು ಸ್ಪಾನಿಷ್ ಭಾಷೆಗಳಲ್ಲಿ ತೆರೆಕಾಣಲು ಸಿದ್ಧತೆ ನಡೆಸುತ್ತಿದೆ. ಸದ್ಯ ಸಿನಿಮಾದ ಎಡಿಟಿಂಗ್ ಹಾಗು ಡಬ್ಬಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ‘ಕಾಂತಾರ’ ಸಿನಿಮಾ ಇಟಲಿಯನ್ ಹಾಗು ಸ್ಪಾನಿಷ್ ಭಾಷೆಗಳಲ್ಲಿ ಅಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಚಿತ್ರತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಘೋಷಣೆ ಮಾಡಿದೆ.
ರಿಷಬ್ ಶೆಟ್ಟಿ ರಚಿಸಿ,ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾಜಗತ್ತಿನಲ್ಲಿ ಒಂದು ಭವ್ಯ ಗುರುತಾಗಿ ಉಳಿದುಕೊಂಡಿದೆ. ವಿಜಯ್ ಕಿರಗಂದೂರ್ ಅವರ ನಿರ್ಮಾಣದಲ್ಲಿ, ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗು ಅರವಿಂದ್ ಕಶ್ಯಪ್ ಅವರ ಛಾಯಾಗ್ರಾಹಣ ಚಿತ್ರದಲ್ಲಿದೆ. ರಿಷಬ್ ನಾಯಕರಾಗಿರುವ ಈ ಸಿನಿಮಾದಲ್ಲಿ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮುಂತಾದ ಮೇರು ನಟರು ಚಿತ್ರದಲ್ಲಿದ್ದಾರೆ. ಸದ್ಯ ಇಟಲಿಯನ್ ಹಾಗು ಸ್ಪಾನಿಷ್ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು, ಚಿತ್ರತಂಡಕ್ಕೆ ಹಾಗು ಇಡೀ ಕನ್ನಡದ ಜನತೆಗೆ ಹೆಮ್ಮೆಯ ವಿಚಾರವಾಗಿದೆ.

