ದೊಡ್ಡ ಹಿಟ್ ಆಗಿ 400 ಕೋಟಿಗೂ ಅಧಿಕ ಗಳಿಕೆ ಕಂಡ ‘ಕಾಂತಾರ’ ಸಿನಿಮಾಕ್ಕೆ ಬಂದ ಶ್ಲಾಘನೆ ಒಂದೆರಡಲ್ಲ. ರಜಿನಿಕಾಂತ್, ಸುನಿಲ್ ಶೆಟ್ಟಿ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ ಕಮಲ್ ಹಾಸನ್ ಸೇರಿದಂತೆ ಹತ್ತಾರು ಖ್ಯಾತನಾಮರು ಸಿನಿಮಾದ ಕೊಂಡಾಡಿ ರಿಷಬ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.
ಪ್ಯಾನ್ ಇಂಡಿಯಾದಲ್ಲಿ ಮಿಂಚು ಹರಿಸಿದ ಸಿನಿಮಾ ಇದೀಗ ಕಿರುತೆರೆಯಲ್ಲಿ ಬರಲು ಸಿದ್ದವಾಗಿದೆ. ಈ ನಡುವೆ ನಟ ಕಮಲ್ ಹಾಸನ್ ಪತ್ರವೊಂದನ್ನು ಬರೆದು ರಿಷಬ್ ಹಾಗೂ ಚಿತ್ರ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಿನಿಮಾ ನೋಡಿ ಶ್ಲಾಘಿಸಿದ್ದ ಕಮಲ್ ಹಾಸನ್ ಈಗ ಪತ್ರ ಬರೆದಿದ್ದಾರೆ.
ಕಾಂತಾರ ಸಿನಿಮಾ ನೋಡಿದ ರಾತ್ರಿಯೇ ಈ ಪತ್ರ ಬರೆದಿದ್ದೇನೆ. ಕಾಂತಾರ ಸಿನಿಮಾ ಹಲವು ದಿನಗಳಿಂದ ನಿಮ್ಮಲ್ಲೇ ಅಡಗಿ ಕುಳಿತಿತ್ತು. ನಿಮ್ಮ ಮನಸ್ಸಿನಲ್ಲಿ ಅರಳಿದ ಹೂವು. ದೇವರನ್ನು ನಂಬುವ ಅನೇಕ ಹೃದಯಗಳಿಗೆ ಸಿನಿಮಾ ಇಷ್ಟವಾಗಿದೆ. ನಾನೂ ಕೂಡ ದೇವರಲ್ಲಿ ಅಪಾರ ನಂಬಿಕೆ ಇರುವವನು. ನಾವೆಲ್ಲಾ ಅನೇಕ ಪೌರಾಣಿಕ ಹಿನ್ನೆಲೆ ಇರುವ ಸಮಾಜದಲ್ಲೇ ಬದುಕುತ್ತಿದ್ದೇವೆ.
ಕಾಂತಾರ ಸಿನಿಮಾದ ಕೊನೆಯ 20 ನಿಮಿಷಗಳು ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿದಿದೆ. ಕಾಂತಾರ ಸಿನಿಮಾದ ಕೊನೆಯ ದೃಶ್ಯದ ಬಗ್ಗೆ ಬರೆದಿರುವ ಕಮಲ್ ಹಾಸನ್, ಲಾಸ್ಟ್ ಸೀನ್ ಅದ್ಭುತ ಎಂದಿದ್ದಾರೆ. ಈ ದೃಶ್ಯದಲ್ಲಿ ದೇವರು ತಾಯಿಯಾಗಿ ಬಂದು ಇಡೀ ಊರನ್ನು ಕಾಪಾಡುತ್ತಾಳೆ ಇದು ನಿಜಕ್ಕೂ ಅದ್ಬುತ ಎಂದು ಬರೆದು ಶ್ಲಾಘಿಸಿದ್ದಾರೆ.


ಈ ಪತ್ರಕ್ಕೆ ಸಂತಸದಿಂದ ರಿಷಬ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದು, ಲೆಜೆಂಡ್ ಆಫ್ ಇಂಡಿಯನ್ ಸಿನಿಮಾ ಕಮಲ್ ಹಾಸನ್ ರಿಂದ ಇಂತಹ ಗಿಫ್ಟ್ ಸ್ವೀಕರಿಸಿ ಖುಷಿಯಾಗಿದೆ. ಹಾಗೆಯೇ ಕಮಲ್ ಸರ್ ಅವರ ಈ ಸರ್ಪ್ರೈಸ್ ಗಿಫ್ಟ್ ನೋಡಿ ತುಂಬಾ ಬೆಚ್ಚಿಬಿದ್ದು ಮತ್ತು ಬೆರಗಾಗಿದ್ದೇನೆ, ಕೃತಜ್ಞತೆ ಸರ್ ಎಂದು ರಿಷಬ್ ಹೇಳಿದ್ದಾರೆ.

